ಕೆಪಿಎಸ್‌ಸಿ ಪರೀಕ್ಷೆಗೆ ಜಿಲ್ಲಾಡಳಿತ ಸಂಪೂರ್ಣ ಸಜ್ಜು

kpsc
ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸಲಾಗುವ ಪರೀಕ್ಷೆಯ ಸಿದ್ಧತೆ ಕುರಿತು ಸಿದ್ದಲಿಂಗ ರೆಡ್ಡಿ ಅಧಿಕಾರಿಗಳ ಸಭೆ ನಡೆಸಿದರು. ಮಂಜುನಾಥ್, ಸುರೇಶ್, ಚನ್ನಪ್ಪ, ಸಾವಿತ್ರಿ ಮುಂತಾದವರಿದ್ದರು.
Published on

ಶಿವಮೊಗ್ಗ: ವಿವಿಧ ಇಲಾಖೆಗಳ ಗ್ರೂಪ್ ಬಿ ವೃಂದದ ಹುದ್ದೆಗಳ ನೇಮಕಾತಿ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗವು ಜ.19 ಮತ್ತು 25ರಂದು ಪರೀಕ್ಷೆಗಳನ್ನು ನಡೆಸಲಿದೆ. ಪರೀಕ್ಷೆಗಳು ಶಾಂತಿಯುತ ಮತ್ತು ಯಶಸ್ವಿಯಾಗಿ ನಡೆಯಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರೀಕ್ಷೆ ಸಿದ್ಧತೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 19ರ ಬೆಳಗ್ಗೆ 10 ರಿಂದ 11.30ರವರೆಗೆ ಸಾಮಾನ್ಯ ಪತ್ರಿಕೆ ಪರೀಕ್ಷೆಯು ಶಿವಮೊಗ್ಗ ನಗರದ ಒಟ್ಟು 25 ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ 25ರ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ ನಿರ್ದಿಷ್ಟ ಪತ್ರಿಕೆ ಪರೀಕ್ಷೆಯು ನಗರದ 23 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ ಎಂದರು.

ಜ.19 ರಂದು ನಡೆಯುವ ಸಾಮಾನ್ಯ ಪತ್ರಿಕೆ ಪರೀಕ್ಷೆಗೆ ನಗರದಲ್ಲಿ ಒಟ್ಟು 7,182 ಅಭ್ಯರ್ಥಿಗಳು ಹಾಗೂ ಜ.25 ರಂದು ನಡೆಯುವ ನಿರ್ದಿಷ್ಟ ಪತ್ರಿಕೆಯ ಪರೀಕ್ಷೆಗೆ ಒಟ್ಟು 6,414 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ಸ್ಥಳೀಯ ನಿರೀಕ್ಷಣಾಧಿಕಾರಿಗಳು, ಮಾರ್ಗಾಧಿಕಾರಿಗಳು, ವೀಕ್ಷಕರು ಮತ್ತು ಇತರೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಪರೀಕ್ಷಾ ಕೇಂದ್ರಗಳಲ್ಲಿ ವಿಡಿಯೋಗ್ರಫಿ ಮಾಡಲಾಗುವುದು. ಎಲ್ಲ ಕೇಂದ್ರಗಳಲ್ಲಿ ಸಿಸಿ ಟಿವಿ ಇರಲಿದೆ. ಜಾಮರ್‌ಗಳನ್ನು ಅಳವಡಿಸಲಾಗುವುದು. ಪರೀಕ್ಷಾ ಕೇಂದ್ರದೊಳಗೆ ಯಾವುದೇ ಎಲೆಕ್ಟಾನಿಕ್ಸ್ ವಸ್ತುಗಳಿಗೆ ಅವಕಾಶ ಇರುವುದಿಲ್ಲ. ನಿಯೋಜಿತ ಪೊಲೀಸರು ಅಭ್ಯರ್ಥಿಗಳ ತಪಾಸಣೆ ನಡೆಸಿ ಕೇಂದ್ರದೊಳಕ್ಕೆ ಬಿಡುತ್ತಾರೆ. ಅಂಗವಿಕಲ ಅಭ್ಯರ್ಥಿಗಳಿಗ ಲಿಪಿಕಾರರ ಸೇವೆ ಹಾಗೂ ಗಾಲಿ ಕುರ್ಚಿ ವ್ಯವಸ್ಥೆ ಮಾಡಲಾಗುವುದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.

ಡಿಡಿಪಿಐ ಮಂಜುನಾಥ್, ಖಜಾನೆ ಅಧಿಕಾರಿ ಸಾವಿತ್ರಿ, ಜಿಲ್ಲಾ ಕೌಶಲಾಧಿಕಾರಿ ಸುರೇಶ್, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಚನ್ನಪ್ಪ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net