ಭಕ್ತರಿಗೆ ಸಿರಿಧಾನ್ಯ ಪ್ರಸಾದ ವಿತರಣೆ ರೈತರಿಗೆ ಉತ್ತೇಜನ

21 HANUR 2
ಮಲೆಮಹದೇಶ್ವರ ಬೆಟ್ಟದಲ್ಲಿ ಸಿರಿಧಾನ್ಯದ ಪ್ರಸಾದ ವಿತರಿಸುತ್ತಿರುವ ಹಿನ್ನೆಲೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದ ತಂಡ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಅವರನ್ನು ಸನ್ಮಾನಿಸಿತು. ಶಶಿ, ಶಿರುದ್ರಸ್ವಾಮಿ, ನಾಗ, ಮಾದೇಶ್ ಇತರರು ಇದ್ದರು.
Published on

ಹನೂರು: ಮಲೆಮಹದೇಶ್ವರ ಬೆಟ್ಟದ ದಾಸೋಹ ಭವನದಲ್ಲಿ ಭಕ್ತರಿಗೆ ಸಿರಿಧಾನ್ಯಗಳಿಂದ ಪ್ರಸಾದ ವಿತರಿಸುತ್ತಿರುವುದು ನಿಜಕ್ಕೂ ರೈತರಿಗೆ ಉತ್ತೇಜನ ನೀಡಿದಂತಾಗಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.

ದಾಸೋಹ ಭವನದಲ್ಲಿ ಸಿರಿಧಾನ್ಯಗಳಿಂದ ಪ್ರಸಾದ ವಿತರಣೆ ಆರಂಭಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಅವರನ್ನು ಸನ್ಮಾನಿಸಿ ಮಾತನಾಡಿದರು.

ರಾಜ್ಯದ ಬಹುತೇಕ ದೇಗುಲಗಳಲ್ಲಿ ಅನ್ನವನ್ನೇ ಮುಖ್ಯ ಪ್ರಸಾದವಾಗಿ ವಿತರಿಸಲಾಗುತ್ತಿದೆ. ಆದರೆ ಲಕ್ಷಾಂತರ ಭಕ್ತರು ಭೇಟಿ ನೀಡುವ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮ.ಬೆಟ್ಟದ ದಾಸೋಹ ಭವನದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಅವರು ಸಿರಿಧಾನ್ಯಗಳಿಂದ ಪ್ರಸಾದ ವಿತರಿಸುವ ಕಾರ್ಯವನ್ನು ಆರಂಭಿಸಿರುವುದು ದೇಶದ ದೇಗುಲಗಳಲ್ಲಿ ಮೊದಲನೆಯದಾಗಿದೆ. ಸಿರಿಧಾನ್ಯಗಳು ಹೆಚ್ಚಿನ ಪೌಷ್ಟಿಕಾಂಶದಿಂದ ಕೂಡಿದ್ದು, ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಮಧುಮೇಹಿಗಳಿಗೆ ಇಚ್ಛಿಸಿದ ಆಹಾರವಾಗಿದೆ. ಇನ್ನು ಮ.ಬೆಟ್ಟದ ಭಾಗದಲ್ಲಿ ಹೆಚ್ಚಿನ ರೈತರು ರಾಗಿ, ಸಜ್ಜೆ, ನವಣೆ, ಸಾಮೆ, ಕೊರಳೆ ಹಾಗೂ ಇನ್ನು ಕೆಲ ಸಿರಿಧಾನ್ಯಗಳನ್ನು ಬೆಳೆಯುತ್ತಾರೆ. ಹಾಗಾಗಿ ಶ್ರೀ ಕ್ಷೇತ್ರದಲ್ಲಿ ಸಿರಿಧಾನ್ಯಗಳ ಪ್ರಸಾದವನ್ನು ವಿತರಿಸುತ್ತಿರುವುದು ಈ ಭಾಗದ ರೈತರಿಗೆ ಉತ್ತೇಜನ ನೀಡಿದಂತಾಗಿದೆ. ಕಾರ್ಯದರ್ಶಿ ಅವರ ದೂರದೃಷ್ಟಿಯ ಚಿಂತನೆ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರೈತ ಮುಖಂಡರಾದ ಶಶಿ, ರಾಜು, ಗುರು, ಮಾಧು, ಶ್ರೀನಿವಾಸ್, ನಟರಾಜು, ಶಿವರುದ್ರಸ್ವಾಮಿ, ಮಹದೇವ, ಪ್ರಸಾದ್, ನಾಗ, ಮಾದೇಶ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net