

ಬೇಲೂರು: ತಾಲೂಕಿನ ಕಳ್ಳೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಬೀರುಗಳನ್ನು ಅಧ್ಯಕ್ಷ ಅಬ್ದುಲ್ ಹಕೀಂ ನೇತೃತ್ವದಲ್ಲಿ ಗುರುವಾರ ವಿತರಿಸಲಾಯಿತು.
ಕಳ್ಳೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಹಕೀಂ ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 8 ಅಂಗನವಾಡಿ ಕೇಂದ್ರಗಳಿಗೆ ಪಂಚಾಯಿತಿ ಅನುದಾನದಲ್ಲಿ ಉಚಿತವಾಗಿ ಗುಣಮಟ್ಟದ ಬಿರುಗಳನ್ನು ವಿತರಿಸುತ್ತಿದ್ದೇವೆ. ನಾವು ಮತ್ತು ಸಿಬ್ಬಂದಿ ಕೆಲ ಅಂಗನವಾಡಿಗಳಿಗೆ ಭೇಟಿ ನೀಡಿದ ಸಂದರ್ಭ ಪ್ರಮುಖವಾದ ವಸ್ತುಗಳನ್ನಿಡಲು ಅಂಗನವಾಡಿ ಕೇಂದ್ರದಲ್ಲಿ ಸರಿಯಾದ ಸ್ಥಳವಿರಲಿಲ್ಲ. ಎಲ್ಲೆಂದರಲ್ಲಿ ಹಾಕುವುದರಿಂದ ನೋಡಲು ಸಹ ಚೆನ್ನಾಗಿ ಕಾಣುತ್ತಿರಲಿಲ್ಲ. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ನಮ್ಮ ಪಂಚಾಯಿತಿ ಸದಸ್ಯರೊಂದಿಗೆ ಚರ್ಚಿಸಿ ಅವರ ಸಹಕಾರದೊಂದಿಗೆ ಕಳ್ಳೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲ 8 ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಬೀರುಗಳನ್ನು ವಿತರಿಸುತ್ತಿದ್ದೇವೆ ಎಂದರು.
ಅಂಗನವಾಡಿ ಕೆಂದ್ರದ ಕಾರ್ಯಕರ್ತೆಯರು ಅದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಕೇಂದ್ರವನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು. ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಸರಿಯಾಗಿ ಗರ್ಭೀಣಿಯರು ಮತ್ತು ಮಕ್ಕಳಿಗೆ ಕೊಡುವ ಮೂಲಕ ಅವರ ಮುಂದಿನ ಬೆಳವಣಿಗೆಗೆ ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಅವಶ್ಯವಿರುವ ವಸ್ತುಗಳನ್ನು ಕೊಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಳ್ಳೇರಿ ಗ್ರಾಮ ಪಂಚಾಯಿತಿ ಸದಸ್ಯರು, ಅಭಿವೃದ್ಧಿ ಅಧಿಕಾರಿ ಕುಮಾರ್, ಕಾರ್ಯದರ್ಶಿ ಜಯಶೀಲ, ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆಯರಿದ್ದರು.