

ಬೆಂಗಳೂರು: ಆರ್ಯ ವೈಶ್ಯ ಸಮುದಾಯದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿ ಮಾಡುವುದರ ಮೂಲಕ ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮ ಮಹತ್ವದ ಕಾರ್ಯ ನಿರ್ವಹಿಸುತ್ತಿದೆ ಎಂದು ಕಂದಾಯ ಸಚಿವರು ಹಾಗೂ ನಿಗಮದ ಅಧ್ಯಕ್ಷ ಕೃಷ್ಣ ಬೈರೇಗೌಡ(Krishna Bairegowda) ತಿಳಿಸಿದರು.
ವಿಕಾಸಸೌಧದ ತಮ್ಮ ಕಛೇರಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿಯಲ್ಲಿ ಆಯ್ಕೆಯಾದ 500 ಫಲಾನುಭವಿಗಳಿಗೆ 5 ಕೋಟಿ ರೂ. ಸಾಲ-ಸಹಾಯಧನವನ್ನು ನೇರ ನಗದು ಪಾವತಿ (ಡಿಬಿಟಿ) ಮೂಲಕ ಹಣ ವರ್ಗಾವಣೆ(Distribution of aid to 500 beneficiaries by Arya Vaishya Nigam) ಮಾಡಿ ಬಳಿಕ ಮಾತನಾಡಿದರು.
ಹೊಸ ಉದ್ಯಮಿಗಳಿಗೆ ಹಾಗೂ ಬಡವರಿಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಆರ್ಯ ವೈಶ್ಯ ನಿಗಮವು ಗಮನಾರ್ಹವಾದ ಕೆಲಸ ನಿರ್ವಹಿಸುತ್ತಿದೆ. ಒಂದು ಲಕ್ಷದ ವರೆಗೆ ವಾರ್ಷಿಕ 4ರ ಬಡ್ಡಿ ದರದಲ್ಲಿ ಸಾಲ-ಸಹಾಯಧನ ನೀಡಲಾಗುತ್ತಿದ್ದು, ಈ ಸೌಲಭ್ಯವನ್ನು ಫಲಾನುಭವಿಗಳು ವ್ಯಾಪಾರಕ್ಕಾಗಿ ಬಳಸಿಕೊಳ್ಳಬೇಕು. ತಮ್ಮ ಉದ್ಯಮವನ್ನು ಬೆಳೆಸಿ ತಾವೂ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಏರಬೇಕು, ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕು ಎಂದು ತಿಳಿಸಿದರು.
2024-25ನೇ ಸಾಲಿನಲ್ಲಿ ಆರ್ಯ ವೈಶ್ಯ ನಿಗಮಕ್ಕೆ ಬಿಡುಗಡೆಯಾದ 10 ಕೋಟಿ ರೂ.ಅನುದಾನದಲ್ಲಿ ಸ್ವಯಂ-ಉದ್ಯೋಗ ನೇರ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಬ್ಯಾಂಕುಗಳ ಸಹಯೋಗದಿಂದ ಆರ್ಯ ವೈಶ್ಯ ಆಹಾರ ವಾಹಿನಿ/ವಾಹಿನಿ ಯೋಜನೆ ಹಾಗೂ ವಾಸವಿ ಜಲಶಕ್ತಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ನಿಗಮದಲ್ಲಿ ಸಾಲ ಪಡೆದು ಸಕಾಲದಲ್ಲಿ ಸಾಲ ತೀರಿಸಿದಂತಹ ಫಲಾನುಭವಿಗಳಿಗೆ ಪುನಃ ಸಾಲ ನೀಡಿ ಸಣ್ಣ ಉದ್ಯಮಿಗಳಿಗೆ ಉತ್ತೇಜನ ನೀಡಿರುವ ಏಕೈಕ ನಿಗಮ ಆರ್ಯವೈಶ್ಯ ನಿಗಮವಾಗಿದೆ. ಈ ಮೂಲಕ ನುರಿತ ಉದ್ಯಮಿಗಳಿಗೆ ಸಹಾಯ ಹಸ್ತ ಚಾಚುವ ಗಮನಾರ್ಹ ಕೆಲಸಕ್ಕೆ ನಿಗಮವು ಮುಂದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಮಾತನಾಡಿ, ನಿಗಮವು ಸಂಪೂರ್ಣವಾಗಿ ಗಣಕೀಕರಣಗೊಂಡಿರುವುದರಿಂದ ಸಕಾಲದಲ್ಲಿ ಎಲ್ಲ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲು ಸಾಧ್ಯವಾಗಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ಸೂಚಿಸಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕಿ ದೀಪಶ್ರೀ.ಕೆ ಮಾತನಾಡಿ, ನಿಗಮದ ಇತರೆ ಯೋಜನೆಗಳಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಶೀಘ್ರದಲ್ಲಿಯೇ ಡಿ.ಬಿ.ಟಿ ಮಾಡಲಾಗುವುದೆಂದು ತಿಳಿಸಿದರು.