

ಕೋಟೆಗಳು, ಕೆರೆಕಟ್ಟೆಗಳು ಮತ್ತು ಚಿತ್ರದುರ್ಗದ ಏಳು ಸುತ್ತಿನ ಕೋಟೆ ನಿರ್ಮಿಸಿ ಶತಮಾನಗಳ ಕಾಲ ಆಳಿದ ಪಾಳೇಗಾರರಲ್ಲಿ ಶ್ರೇಷ್ಠರಾದ ರಾಜ ಹಿರೇಮದಕರಿ ನಾಯಕರ ಸಮಾಧಿ ಸ್ಥಳವು ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ದುರಂತ. ಮಾಯಕೊಂಡ ಗ್ರಾಮದಲ್ಲಿರುವ ಈ ಐತಿಹಾಸಿಕ ಸಮಾಧಿ ಸ್ಥಳವು ಇಂದು ಶೌಚ ವಿಸರ್ಜನಾ ಸ್ಥಳವಾಗಿ ಮಾರ್ಪಟ್ಟಿದ್ದು, ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಬಿದ್ದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.
ಗ್ರಾಮದ ಮುಖ್ಯ ರಸ್ತೆಯಿಂದ ಸಮಾಧಿ ಸ್ಥಳಕ್ಕೆ ತೆರಳುವ ರಸ್ತೆ ಕಿರಿದಾಗಿದ್ದು, ಸ್ವಚ್ಛತೆ ಇಲ್ಲದೆ ದುರ್ವಾಸನೆ ಬೀರುತ್ತಿದೆ. ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಕಮಾನಿನಲ್ಲಿ ನಾಮಫಲಕವೇ ಇಲ್ಲ. ಸ್ಥಳೀಯ ಗ್ರಾಮ ಪಂಚಾಯತಿ ಸಹ ಸಮಾಧಿ ಸ್ಥಳದ ಅಭಿವೃದ್ಧಿ ಮಾಡದೆ ಕಾಲ ದೂಡುತ್ತಿದೆ ಎಂದು ಸುತ್ತಮುತ್ತಲ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಸುರಿದ ಭಾರೀ ಮಳೆಗೆ ಸಮಾಧಿಯ ಸುತ್ತ ಇದ್ದ ಕಾಂಪೌಂಡ್ ಕುಸಿದು ಬಿದ್ದಿತ್ತು. ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದ ಕೂಡಲೇ ತಹಸೀಲ್ದಾರ್, ತಾಪಂ ಇಒ, ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರೂ, ಇಲ್ಲಿಯವರೆಗೂ ಕಾಂಪೌಂಡ್ ನಿರ್ಮಾಣ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯ ಆರಂಭವಾಗಿಲ್ಲ.
ಸಮಾಧಿ ಸ್ಥಳ ಶತಮಾನಗಳಿಂದ ಯಾವುದೇ ಅಭಿವೃದ್ಧಿ ಕಾಣದೆ ಹಾಳಾಗಿದ್ದು, ಹೆಸರಿಗಷ್ಟೇ ಜಿಲ್ಲಾ ಐತಿಹಾಸಿಕ ಪ್ರವಾಸಿ ತಾಣಗಳ ಪಟ್ಟಿಯಲ್ಲಿದೆ.
ಜೀರ್ಣೋದ್ಧಾರ ಸಮಿತಿ ಒತ್ತಾಯ: ಹಿರೇ ಮದಕರಿ ನಾಯಕ ಸಮಾಧಿ ಸ್ಥಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಿ.ಎಲ್. ಸುನಿಲ್ ಮತ್ತು ಗೌರವಾಧ್ಯಕ್ಷ ಕೆ.ಜಿ. ಕಂಬರಾಜ್ ಅವರು ಸಮಾಧಿ ಸ್ಥಳ ಅಭಿವೃದ್ಧಿ ಜೊತೆಗೆ ಐತಿಹಾಸಿಕ ಸ್ಮಾರಕ ನಿರ್ಮಿಸಲು, ಉದ್ಯಾನವನ, ಕುಡಿಯುವ ನೀರು ಸೇರಿದಂತೆ ಸಕಲ ಮೂಲ ಸೌಕರ್ಯಗಳನ್ನು ಕಲ್ಪಿಸಲು ಒತ್ತಾಯಿಸಿದ್ದಾರೆ.
ಬಿಜೆಪಿ ಎಸ್‌ಟಿ ಮೋರ್ಚಾ ಉಪಾಧ್ಯಕ್ಷ ಬಿ.ಎಚ್. ಓಬಳೇಶ್ ಅವರು, ಮದಕರಿ ನಾಯಕ ಮತ್ತು ಮತ್ತಿ ತಿಮ್ಮಣ್ಣ ನಾಯಕ ಸಮಾಧಿ ಸ್ಥಳಗಳನ್ನು ಸರ್ಕಾರ ರಾಜ್ಯಮಟ್ಟದ ಪ್ರವಾಸಿ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆಗಸ್ಟ್ ತಿಂಗಳಲ್ಲಿ ರಾಜ್ಯ ಪುರಾತತ್ವ ಇಲಾಖೆ (ಮೈಸೂರು) ಇಂಜಿನಿಯರ್ ಕೆ. ರವಿ ಅವರು ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಕಾಂಪೌಂಡ್ ನಿರ್ಮಾಣಕ್ಕೆ ತುರ್ತಾಗಿ ₹24 ಲಕ್ಷ ಹಣ ಬಿಡುಗಡೆಗೊಳಿಸಿದ್ದಾರೆ.
"ಸಚಿವರ ನಿರ್ದೇಶನದಂತೆ ಹಿರೇ ಮದಕರಿ ನಾಯಕ ಸಮಾಧಿ ಸ್ಥಳದ ಅಭಿವೃದ್ಧಿಗೆ ₹3 ಕೋಟಿಗಳ ಅಂದಾಜು ವೆಚ್ಚ ಮತ್ತು ನೀಲಿ ನಕ್ಷೆ ತಯಾರಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು."
ಕುಮಾರ್ ನಾಯ್ಕ (ಎಇಇ ಲೋಕೋಪಯೋಗಿ ಇಲಾಖೆ)
"ಸಮಾಧಿ ಸ್ಥಳದ ಸಂರಕ್ಷಣೆಯ ದೃಷ್ಟಿಯಿಂದ ಚೈನ್ ಲಿಂಕ್ ಫೆನ್ಸಿಂಗ್ (ಕಬ್ಬಿಣದ ಗ್ರಿಲ್ ಕಾಂಪೌಂಡ್) ನಿರ್ಮಾಣದ ಕಾಮಗಾರಿಯನ್ನು ₹24 ಲಕ್ಷ ವೆಚ್ಚದಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು."
ಕೆ. ರವಿ (ಎಇಇ, ಪುರಾತತ್ವ ಇಲಾಖೆ)