ಅಪಸ್ವರ ಬೇರೆ, ಒಡಕುಧ್ವನಿ ಬೇರೆ!

Published on
ಧನ್ವಂತರಿ
ದೇಹದಲ್ಲಿರುವ ಐದು ಜ್ಞಾನೇಂದ್ರಿಯಗಳಲ್ಲಿ ನಾಲಿಗೆಗೆ ಎರಡು ಕೆಲಸ. ಸೇವಿಸುವ ಎಲ್ಲಾ ಆಹಾರ ವ್ಯಂಜನಗಳ ರುಚಿಯನ್ನು ಆಸ್ವಾದಿಸುವುದು ಹಾಗೂ ಸ್ಪಷ್ಟವಾಗಿ ಮಾತನಾಡುವುದು. ಮಾತು ಶಬ್ದರೂಪವನ್ನು ಹೊಂದಿ ಹೊರಬರಲು ಸ್ವರವೇ ಮೂಲ. ಗಂಟಲಿನಲ್ಲಿರುವ ಧ್ವನಿಪೆಟ್ಟಿಗೆ ಇದರ ಉಗಮಸ್ಥಾನ. ಗಾಯಕರಿಗೆ ಒಳ್ಳೆಯಸ್ವರ ಬೇಕೇಬೇಕು, ಭಾಷಣಕಾರರಿಗೂ ಸ್ಪಷ್ಟಧ್ವನಿ ಅನಿವಾರ್ಯ. ಪ್ರತಿಯೊಬ್ಬರಿಗೂ ದಿನನಿತ್ಯದ ಆಗುಹೋಗುಗಳನ್ನು ನಿಭಾಯಿಸಲು ಸ್ವರ ಸರಿಯಿರಲೇಬೇಕು. ಕಫ ಕೆಮ್ಮುಗಳಿದ್ದಾಗ, ಗಂಟಲಿನ ಸೋಂಕುರೋಗಗಳಿಂದ ಬಾಧಿತರಾದಾಗ, ಜ್ವರವೇ ಮೊದಲಾದ ಕಾಯಿಲೆಗಳಿಂದ ದೇಹವು ಬಲಹೀನವಾದಾಗ, ಕ್ಷಯರೋಗದಂತಹ ದೊಡ್ಡವ್ಯಾಧಿಗಳಿಂದ ಬಳಲುತ್ತಿದ್ದಾಗ, ಸ್ವರಯಂತ್ರದ ನರದೌರ್ಬಲ್ಯ ಉಂಟಾದಾಗ, ಅರ್ಬುದವೇ ಮೊದಲಾದ ಸ್ಥಾನಿಕ ಕಾಯಿಲೆಗಳಿಗೆ ಈಡಾದಾಗ ಸ್ವರವೇ ಉಡುಗಿಹೋಗಿ ಮಾತೇ ಹೊರಡದ ಪರಿಸ್ಥಿತಿ ಬರುತ್ತದೆ. ಆಡಿದ ಮಾತು ಕ್ಷೀಣವಾಗಿ ಕೇಳಿಸುವುದೇ ಇಲ್ಲ. ಆಯುರ್ವೆದದ ಚರಕ ಸುಶ್ರುತ ಸಂಹಿತೆಗಳಲ್ಲಿ ಒಡಕುಧ್ವನಿಯ ಕಾರಣ, ಲಕ್ಷಣ, ಚಿಕಿತ್ಸೆಗಳನ್ನು ಸ್ವರಭೇದ ಎಂಬ ಹೆಸರಿನಲ್ಲಿ ವಿಶ್ಲೇಷಿಸಲಾಗಿದೆ.

ಭಾಷಣದಿಂದ, ಘೊಷಣೆಯಿಂದ, ಏರುದನಿಯಿಂದ, ಇಳಿದನಿಯಿಂದ ಮಾತನಾಡುವಾಗ ಸಹಜ ಸ್ವರದಿಂದ ವ್ಯತ್ಯಾಸವಾಗಿ ಎರಡು ಸ್ವರಗಳಾದರೆ, ಒಡಕು ಧ್ವನಿಯಾದರೆ, ಸ್ವರವೇ ಸರಿಯಾಗಿ ಕೇಳದಿದ್ದರೆ, ವಿಚಿತ್ರ ಧ್ವನಿಗಳುಂಟಾದರೆ ಅದನ್ನು ಸ್ವರಭೇದ ಎನ್ನುತ್ತೇವೆ. ಏರುದನಿಯ ಮಾತು, ಭಾಷಣ ಮಾಡುವುದು, ವಿವಿಧ ವಿಷ ಸೇವನೆ, ದೊಡ್ಡ ಸ್ವರದಲ್ಲಿ ಓದುವುದು, ಅಭಿಘಾತಗಳು ಮೊದಲಾದ ಕಾರಣಗಳಿಂದ ವಾತ, ಪಿತ್ತ, ಕಫದೋಷಗಳು ಪ್ರಕುಪಿತವಾಗಿ ಸ್ವರವಹ ಸ್ರೋತಸ್​ನ ಮೂಲಕ ಸ್ವರಯಂತ್ರದಲ್ಲಿ ಸೇರಿ ಸಹಜ ಸ್ವರವನ್ನು ಹಾನಿಗೊಳಿಸಿದಾಗ ಈ ಸ್ವರಭೇದ ಉಂಟಾಗುತ್ತದೆ. ಅನೇಕ ಶಾರೀರಿಕ ಕ್ರಿಯಾ ವ್ಯತ್ಯಯಗಳಿಂದಲೂ ಕೆಲವೊಮ್ಮೆ ಧ್ವನಿಯು ಕುಗ್ಗಿ ಹೋಗುವುದಿದೆ. ಅತಿಯಾಗಿ ಹಸಿವೆಯಾದಾಗ, ತುಂಬಾ ಬಾಯಾರಿಕೆಯಾದಾಗ, ತೀವ್ರ ಬಳಲಿದಾಗ, ಹೆಚ್ಚಿನ ಶ್ರಮದಿಂದ ನಿತ್ರಾಣವಾಗಿದ್ದಾಗ, ಮಾನಸಿಕ ಒತ್ತಡಗಳಿದ್ದಾಗ, ಇತ್ತೀಚೆಗೆ ಬಂದ ಕಾಯಿಲೆಗಳ ಪರಿಣಾಮವಾಗಿ ಶರೀರವು ಕ್ಷೀಣವಾಗಿದ್ದಾಗ ತಾತ್ಕಾಲಿಕವಾಗಿ ಧ್ವನಿಯೇ ಅಡಗಿ ಹೋಗುವುದಿದೆ. ಆಗ ದೇಸಿ ಗೋವಿನ ಹಾಲು ಸೇವನೆ ಹಿತಕರವಾಗಿರುತ್ತದೆ. ವ್ಯಾಧಿಯ ರೂಪದಲ್ಲಿ ಸ್ವರ ಭೇದದಲ್ಲಿ ಆರು ವಿಧಗಳಿವೆ.

ವಾತಜ ಸ್ವರಭೇದ: ಇಳಿಯಾದ ಧ್ವನಿ, ಮಧ್ಯದಲ್ಲಿ ತಡೆದು ಮಾತನಾಡುವುದು, ಕತ್ತೆಯ ಒಡಕಲು ಧ್ವನಿ ಉಂಟಾಗುವುದು, ಕಣ್ಣು, ಮುಖ, ಮೂತ್ರ, ಮಲಗಳು ಕಪ್ಪುಗಟ್ಟುವುದು ವಾತಜ ಒಡಕುಧ್ವನಿಯ ಲಕ್ಷಣಗಳು. ಸೈಂಧವ ಲವಣಕ್ಕೆ ಎಳ್ಳೆಣ್ಣೆ ಸೇರಿಸಿ ಬಾಯಿಯಲ್ಲಿ ಹತ್ತು ನಿಮಿಷವಿಟ್ಟು ಕವಲ ಮಾಡಿದರೆ ಸಹಕಾರಿ. ದೇಸಿ ಗೋವಿನ ತುಪ್ಪ ಹಾಗೂ ಕಾಳುಮೆಣಸು ಸೇವನೆ ಉಪಯುಕ್ತ.

ಪಿತ್ತಜ ಸ್ವರಭೇದ: ಗಂಟಲಿನಿಂದ ಕಷ್ಟಪಟ್ಟು ಮಾತನಾಡುವುದು, ಗಂಟಲಿನಲ್ಲಿ ಉರಿಯಾಗುವುದು, ಕಣ್ಣು, ಮುಖ, ಮಲ, ಮೂತ್ರಗಳು ಹಳದಿ ಛಾಯೆ ಹೊಂದುವುದು. ಗೋವಿನ ತುಪ್ಪ ಹಾಗೂ ಜೇನುತುಪ್ಪ, ದ್ರಾಕ್ಷಿ, ಖರ್ಜೂರ ಮೊದಲಾದ ಸಿಹಿ ದ್ರವ್ಯಗಳ ಸೇವನೆ ಹಿತಕರ.

ಕಫಜ ಸ್ವರಭೇದ: ಮಾತನಾಡುವಾಗ ಕಫದಿಂದ ತಡೆಯುಂಟಾದಂತೆ ಕೇಳಿಸುವುದು, ಮಾತಿನಲ್ಲಿ ತಡೆ, ಕಡಿಮೆಮಾತು ಇರುವುದಲ್ಲದೆ ವಿಶೇಷವಾಗಿ ಹಗಲು ಹೊತ್ತಿನಲ್ಲಿ ತಗ್ಗಿದ ಧ್ವನಿಯಿರುತ್ತದೆ. ಹಿಪ್ಪಲಿ, ಅರಿಶಿನ, ಕಾಳುಮೆಣಸನ್ನು ಜೇನುತುಪ್ಪದೊಂದಿಗೆ ಸೇವಿಸುವುದು, ಕಾರದ ಆಹಾರ ದ್ರವ್ಯಗಳು ಪ್ರಯೋಜನಕಾರಿ.

ತ್ರಿದೋಷಜ ಸ್ವರಭೇದ: ಮೂರೂ ದೋಷಗಳ ಲಕ್ಷಣಗಳು ಸೇರಿರುತ್ತವೆ.

ಕ್ಷಯಜ ಸ್ವರಭೇದ: ಮಾತನಾಡುವಾಗ ಬಾಯಿಯಿಂದ ಹೊಗೆಯಾಡುತ್ತದೆ, ತೀವ್ರವಾಗಿದ್ದಾಗ ಶಬ್ದವೇ ಕೇಳಿಸುವುದಿಲ್ಲ. ಕ್ಷಯರೋಗದೊಂದಿಗೆ ಉಲ್ಬಣಿಸುತ್ತಾ ಹೋಗುತ್ತದೆ. ಇಲ್ಲಿ ಕ್ಷಯರೋಗದ ಚಿಕಿತ್ಸೆಯೇ ಮುಖ್ಯವಾಗಿರುತ್ತದೆ.

ಮೇದೋಜ ಸ್ವರಭೇದ: ಗಂಟಲ ಆಳದಿಂದ ಧ್ವನಿ ಕೇಳಿದಂತಾಗುತ್ತದೆ. ಪದಗಳೂ ಸ್ಪಷ್ಟವಾಗಿ ಕೇಳುವುದಿಲ್ಲ. ಕಫ ಹಾಗೂ ಕೊಬ್ಬಿನಿಂದ ಕೂಡಿದ ಒಡಕುಧ್ವನಿಯಿರುತ್ತದೆ. ಗಂಟಲು ಒಣಗಿ ಬಾಯಾರಿಕೆ ಹೆಚ್ಚಾಗುತ್ತದೆ. ಕಫ ಕಡಿಮೆಗೊಳಿಸುವ ಚಿಕಿತ್ಸೆ ಅಗತ್ಯವಾಗಿದ್ದು ಆಹಾರದಲ್ಲಿ ಕಹಿ, ಕಾರದ ಆಹಾರ ಪದಾರ್ಥಗಳನ್ನು ಅಳವಡಿಸಬೇಕು.

ಗೋಧಿ, ಕೆಂಪಕ್ಕಿ, ಜೋಳ, ಹೆಸರು, ಉದ್ದು, ಶುಂಠಿ, ಕಾಳುಮೆಣಸು, ಹಿಪ್ಪಲಿ, ಬೆಳ್ಳುಳ್ಳಿ, ಸೈಂಧವ ಲವಣ, ಮೂಲಂಗಿ, ಯಷ್ಟಿಮಧು, ದೇಸಿ ಗೋವಿನ ತುಪ್ಪ ಹಾಗೂ ಜೇನುತುಪ್ಪ ಸೇವನೆ ಒಡಕುಧ್ವನಿಯಿದ್ದಾಗ ಪಥ್ಯವಾಗಿರುತ್ತದೆ. ಏರುದನಿಯ ಮಾತು, ಹಗಲುನಿದ್ರೆ, ಶೀತಲ ಆಹಾರ, ಮೊಸರು, ಒಗರು ರುಚಿಯ ಒಣ ಆಹಾರ ಸೇವನೆಯನ್ನು ತ್ಯಜಿಸಬೇಕು. ಬಲಹೀನರು, ವೃದ್ಧರು, ತುಂಬಾ ಕೃಶ ದೇಹಿಗಳಲ್ಲಿ, ದೀರ್ಘಕಾಲದಿಂದ ಇರುವ ತ್ರಿದೋಷಜ, ಕಫಜ, ಮೇದೋಜ ಸ್ವರಭೇದವು ಚಿಕಿತ್ಸೆಗೆ ಸ್ಪಂದಿಸದಿರುವ ಸಾಧ್ಯತೆಯಿದ್ದು ಉಳಿದೆಲ್ಲವೂ ಸಮರ್ಪಕ ಚಿಕಿತ್ಸೆಯಿಂದ ಗುಣಕಾಣುತ್ತದೆ. ವಮನ, ವಿರೇಚನ, ಕವಳಗ್ರಹ, ಗಂಡೂಷ, ನಸ್ಯ, ಅನುವಾಸನ ಬಸ್ತಿಗಳಂತಹ ವಿಶೇಷ ಚಿಕಿತ್ಸೆಗಳೂ ತೀವ್ರ ಸ್ವರೂಪದ ಸ್ವರಭೇದದಲ್ಲಿ ಪರಿಣಾಮಕಾರಿ.

( ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net