

ಬೆಂಗಳೂರು: ಕೇಂದ್ರ, ರಾಜ್ಯ, ಸಹಕಾರ ಸಂಘ ಸಂಸ್ಥೆಯ ಸೇವೆಯಿಂದ ಕಡ್ಡಾಯ ನಿವೃತ್ತಿ, ತೆಗೆದುಹಾಕುವುದು ಹಾಗೂ ವಜಾ ಶಿಕ್ಷೆಗೆ ಒಳಪಟ್ಟಿರುವ ವ್ಯಕ್ತಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯನಾಗುವುದರಿಂದ ಅನರ್ಹಗೊಳಿಸುವ ಸಂಬಂಧ ಕಾಯ್ದೆ ತರಲು ಸರ್ಕಾರ ಮುಂದಾಗಿದೆ. ಈ ಕುರಿತು ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕವನ್ನು ಮಂಡಿಸಿದರು.
ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ಜನಸಂಖ್ಯೆ ಮಿತಿ ನಿಗದಿ ಮಾಡುವ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಾಗಲು ಅರ್ಹತೆಗಳನ್ನು ಬಿಗಿಗೊಳಿಸುವ ಅತ್ಯಂತ ಮಹತ್ವದ ತಿದ್ದುಪಡಿಯನ್ನು ಪಂಚಾಯಿತಿ ಕಾಯ್ದೆಗೆ ತರಲು ಉದ್ದೇಶಿಸಲಾಗಿದೆ. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆಯನ್ನು ನಿಗದಿ ಮಾಡಲಾಗುತ್ತದೆ. ಅಲ್ಲದೇ ಜನಸಂಖ್ಯೆಯ ಅನುಪಾತದ ಉದ್ದೇಶಕ್ಕಾಗಿ ಮಲೆನಾಡು ಪ್ರದೇಶದಿಂದ ತರೀಕೆರೆ, ಕಡೂರು ಮತ್ತು ಅಜ್ಜಂಪುರ ತಾಲೂಕುಗಳಿಗೆ ವಿನಾಯಿತಿ ನೀಡುವ ಪ್ರಸ್ತಾಪವೂ ಈ ವಿಧೇಯಕದಲ್ಲಿದೆ.
ಕೇಂದ್ರ ಅಥವಾ ರಾಜ್ಯ ಸರ್ಕಾರದ ಸೇವೆಯಿಂದ ಕಡ್ಡಾಯ ನಿವೃತ್ತಿಗೆ ಒಳಗಾದವರು ಅಥವಾ ವಜಾಗೊಂಡಿರುವ ವ್ಯಕ್ತಿ, ಸಹಕಾರ ಸಂಘ ಮತ್ತು ಸಂಸ್ಥೆಗಳ ಸೇವೆಯಿಂದ ನಿವೃತ್ತರಾಗಿರುವವರು ಅಥವಾ ವಜಾಗೊಂಡವರು, ಸಹಕಾರ ಸಂಘ ಅಥವಾ ಸಂಸ್ಥೆಯ ಅಧ್ಯಕ್ಷ, ಸದಸ್ಯತ್ವ ಸ್ಥಾನದಿಂದ ತೆಗೆದು ಹಾಕಲಾಗಿರುವ ವ್ಯಕ್ತಿಗಳು, ಪಂಚಾಯಿತಿ ವ್ಯವಸ್ಥೆಯ ಮೂರೂ ಹಂತದ ಸದಸ್ಯನಾಗಲು ಅನರ್ಹ. ಇವು ವಿಧೇಯಕದ ಪ್ರಮುಖ ತಿದ್ದುಪಡಿಗಳಾಗಿವೆ. ಅಲ್ಲದೆ, ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡುವುದು, ಸಂಬಂಧಪಟ್ಟ ನಗರಸಭೆ, ಪಾಲಿಕೆ ಅಥವಾ ಆಯಾ ಜಿಲ್ಲಾ ಕೇಂದ್ರದ ಪೌರಾಡಳಿತದ ಮೇಯರ್/ಅಧ್ಯಕ್ಷರು ಜಿಲ್ಲಾ ಯೋಜನಾ ಸಮಿತಿಯ ಉಪಾಧ್ಯಕ್ಷರಾಗಿರಲಿದ್ದಾರೆ. ಕರ್ನಾಟಕ ವಿಕೇಂದ್ರೀಕೃತ ಯೋಜನಾ ಮತ್ತು ಅಭಿವೃದ್ಧಿ ಸಮಿತಿಯ ವಿಶೇಷ ಆಹ್ವಾನಿತರನ್ನಾಗಿ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನು ನಿಯುಕ್ತಿಗೊಳಿಸುವಾಗಿ ತಿದ್ದುಪಡಿ ವಿಧೇಯಕದಲ್ಲಿ ವಿವರಿಸಲಾಗಿದೆ.
ಬಂದೀಖಾನೆ ವಿಧೇಯಕಕ್ಕೆ ಅನುಮೋದನೆ: ಬಂದಿಗಳೊಂದಿಗೆ ಸಂವಹನ, ಪೆರೋಲ್ ಉಲ್ಲಂಘನೆ, ನಿಷೇಧಿತ ವಸ್ತುಗಳನ್ನು ಬಂದೀಖಾನೆಯೊಳಗೆ ತರುವುದು ಅಥವಾ ಹೊರಗೆ ತೆಗೆದುಕೊಂಡು ಹೋಗುವ ಅಪಾಯ ನಿವಾರಿಸುವ ಉದ್ದೇಶದಿಂದ ಕರ್ನಾಟಕ ಬಂದೀಖಾನೆಗಳ ತಿದ್ದುಪಡಿ ವಿಧೇಯಕ 2022ಕ್ಕೆ ವಿಧಾನಸಭೆಯಲ್ಲಿ ಸೋಮವಾರ ಅನುಮೋದಿಸಲಾಯಿತು. ಗೃಹ ಸಚಿವ ಆರಗ ಜ್ಞಾನೇಂದ್ರ ಪರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧೇಯಕ ಮಂಡಿಸಿದರು.
ಕೈಗಾರಿಕಾ ಪ್ರದೇಶಾಭಿವೃದ್ಧಿ ತಿದ್ದುಪಡಿ ಅಂಗೀಕಾರ: ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯಲ್ಲಿ ನ್ಯಾಯೋಚಿತ ಪರಿಹಾರ ನೀಡುವ ಹಿನ್ನೆಲೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ (ತಿದ್ದುಪಡಿ) ವಿಧೇಯಕ 2022 ಅನ್ನು ವಿಧಾನಸಭೆಯಲ್ಲಿ ಸೋಮವಾರ ಅಂಗೀಕರಿಸಲಾಯಿತು. ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪರವಾಗಿ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಈ ವಿಧೇಯಕ ಮಂಡಿಸಿದರು. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನ್ಯಾಯೋಚಿತ ಪರಿಹಾರ ನೀಡುವುದು ಮತ್ತು ಪಾರದರ್ಶಕತೆಯ ಹಕ್ಕು ಅಧಿನಿಯಮಕ್ಕೆ ಉಪಬಂಧ ಕಲ್ಪಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಅಧಿನಿಯಮ 1966ಕ್ಕೆ ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ ಎಂದು ಸದನದ ಗಮನಕ್ಕೆ ತಂದರು. ಉಪಸಭಾಪತಿ ಆನಂದ ಮಾಮನಿ ವಿಧೇಯಕವನ್ನು ಧ್ವನಿಮತಕ್ಕೆ ಹಾಕಿದರು. ಯಾವುದೇ ಆಕ್ಷೇಪವಿಲ್ಲದೆ ವಿಧೇಯಕಕ್ಕೆ ಅನುಮೋದನೆ ದೊರೆಯಿತು.
ಇಡಬ್ಲ್ಯುಎಸ್ ಈ ವರ್ಷವೇ ಜಾರಿ: ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯುಎಸ್)ದವರಿಗೆ ಶೇ.10 ಮೀಸಲು ಈ ವರ್ಷವೇ ಜಾರಿಗೆ ಬರಲಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದರು. ಮೇಲ್ಮನೆಯಲ್ಲಿ ಕಾಂಗ್ರೆಸ್ನ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿ, ವೈದ್ಯಕೀಯ ಹಾಗೂ ಉನ್ನತ ಶಿಕ್ಷಣದಲ್ಲಿ ಎಡಬ್ಲ್ಯುಎಸ್ನವರಿಗೆ ಶೇ.10 ಮೀಸಲು ಅನುಷ್ಠಾನದ ಬಗ್ಗೆ ಮುಖ್ಯಮಂತ್ರಿ ರ್ಚಚಿಸಿದ್ದಾರೆ ಎಂದರು. ಸುಪ್ರೀಂ ಕೋರ್ಟ್ ಆದೇಶದಂತೆ ವೈದ್ಯಕೀಯ ಶಿಕ್ಷಣಕ್ಕೆ ದೇಶವ್ಯಾಪಿ ಏಕರೂಪ ವ್ಯವಸ್ಥೆಯ ಭಾಗವಾಗಿ ಕೇಂದ್ರ ಸರ್ಕಾರ ನೀಟ್ ಜಾರಿಗೊಳಿಸಿದೆ. ನೀಟ್ನಲ್ಲಿ ರ್ಯಾಂಕ್ ಪಡೆದವರಿಗೆ ಯಾವುದೇ ವಂಚನೆಯಾಗಿಲ್ಲ, ಕಾಲೇಜುಗಳ ಆಯ್ಕೆಗೆ ಅವಕಾಶವಿದೆ ಎಂದರು.
310 ಪ್ರಾಂಶುಪಾಲರ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಮಂಜೂರಾಗಿರುವ 412 ಪ್ರಾಂಶುಪಾಲರ ಹುದ್ದೆಗಳ ಪೈಕಿ 310 ಭರ್ತಿಗೆ ಸರ್ಕಾರ ಅನುಮತಿ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಿಧಾನಪರಿಷತ್ಗೆ ತಿಳಿಸಿದರು. ಬಿಜೆಪಿಯ ಅ.ದೇವೇಗೌಡ ಪ್ರಶ್ನೆಗೆ ಉತ್ತರಿಸಿ, ಯುಜಿಸಿ ನಿಯಮಗಳನ್ವಯ ನೇರ ನೇಮಕ ಮೂಲಕ ಹುದ್ದೆಗಳನ್ನು ತುಂಬಲು ವಿಶೇಷ ನೇಮಕ ನಿಯಮಾವಳಿ ರೂಪಿಸಿ ಅಧಿಸೂಚನೆ ಹೊರಡಿಸಲಾಗಿದೆ. ಈ ನಿಯಮಗಳಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖೇನ ಪ್ರಾಂಶುಪಾಲರ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದ ಸಚಿವರು, ಪದೋನ್ನತಿ ಮೂಲಕ ಹುದ್ದೆಗಳ ಭರ್ತಿಗೆ ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಸದ್ಯಕ್ಕೆ ಖಾಲಿಯಿರುವ ಪ್ರಾಂಶುಪಾಲರ ಹುದ್ದೆಗಳ ಪ್ರಭಾರವನ್ನು ಸೇವಾ ಜ್ಯೇಷ್ಠತೆಯಲ್ಲಿ ಅನುಭವಿ ಹಿರಿಯ ಸಹ/ಸಹಾಯಕ ಪ್ರಾಧ್ಯಾಪಕರಿಗೆ ವಹಿಸಲಾಗಿದೆ ಎಂದು ತಿಳಿಸಿದರು.
ಬಹಳಷ್ಟು ಹಳೆಯದಾಗಿರುವ 29 ಕಾರ್ವಿುಕ ಕಾಯ್ದೆಗಳನ್ನು ವಿಲೀನಗೊಳಿಸಿ, 4 ಕಾರ್ವಿುಕ (ಲೇಬರ್ ಕೋಡ್) ಸಂಹಿತೆಗಳನ್ನು ಜಾರಿಗೆ ತರಲು ಅಧಿಸೂಚನೆ ಹೊರಡಿಸುತ್ತಿದೆ. ಇದನ್ನು ಶೀಘ್ರವೇ ಕಾಯ್ದೆ ರೂಪದಲ್ಲಿ ತರಲಾಗುವುದು ಎಂದು ಕಾರ್ವಿುಕ ಸಚಿವ ಶಿವರಾಂ ಹೆಬ್ಬಾರ್ ಮೇಲ್ಮನೆಯಲ್ಲಿ ಪ್ರಕಟಿಸಿದರು.
ಕಾಂಗ್ರೆಸ್ನ ಅರವಿಂದ ಅರಳಿ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿ, ಕಾರ್ವಿುಕ ಇಲಾಖೆಯ ಬಹಳಷ್ಟು ಹಳೆಯದಾಗಿರುವ ಕಾಯ್ದೆಗಳನ್ನು ವಿಲೀನಗೊಳಿಸಿ ಕೇಂದ್ರ ಸರ್ಕಾರ ಈಗಾಗಲೆ ಅಧಿಸೂಚನೆ ಹೊರಡಿಸಿದೆ. 17 ರಾಜ್ಯಗಳು ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ. ರಾಜ್ಯವೂ ಇದಕ್ಕೆ ಕಾಯ್ದೆ ರೂಪ ನೀಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡುತ್ತಿದೆ ಎಂದರು. 1. ಕೋಡ್ ಆಫ್ ವೇಜಸ್ (ವೇತನ ಸಂಹಿತೆ)-2019, 2. ದಿ ಇಂಡಸ್ಟ್ರೀಯಲ್ ರಿಲೇಶನ್ಸ್ ಕೋಡ್ (ಕೈಗಾರಿಕಾ ಬಾಂಧವ್ಯ ಸಂಹಿತೆ) 2020, 3.ಕೋಡ್ ಆನ್ ಸೆಕ್ಯೂರಿಟಿ (ಸಾಮಾಜಿಕ ಭದ್ರತಾ ಸಂಹಿತೆ)-2020, 4. ದಿ ಆಕ್ಯೂಪೇಶನಲ್ ಸೇಫ್ಟಿ ಹೆಲ್ತ್ ಅಂಡ್ ರ್ವಂಗ್ ಕಂಡಿಷನ್ಸ್ ಕೋಡ್ (ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಸೇವಾ ಷರತ್ತುಗಳ ಸಂಹಿತೆ)-2020; ಈ ನಾಲ್ಕು ಕೋಡ್ಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದು ಕಾಯ್ದೆಯನ್ನಾಗಿ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಇ ಶ್ರಮ್ ಕಾರ್ಡ್: ಸಂಘಟಿತ ಮತ್ತು ಅಸಂಘಟಿತ ವಲಯದವರಿಗಾಗಿ ಇ ಶ್ರಮ್ ಕಾರ್ಡ್ಗಳನ್ನು 1.79 ಕೋಟಿ ನೋಂದಣಿ ಮಾಡುವ ಗುರಿ ಹೊಂದಲಾಗಿದ್ದು, 4 ತಿಂಗಳಲ್ಲಿ ಪತ್ರಿಕಾ ವಿತರಕರು ಸೇರಿ 64 ಲಕ್ಷ ನೋಂದಣಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
87.68 ಕೋಟಿ ರೂಪಾಯಿ ಕ್ಲೇಮ್: ಕಳೆದ ಮೂರು ವರ್ಷದಲ್ಲಿ ಕನಿಷ್ಟ ವೇತನ ಕಾಯ್ದೆಯಡಿ 12,963 ತಪಾಸಣೆ ನಡೆಸಲಾಗಿದ್ದು, 3,244 ಅರ್ಜಿಗಳನ್ನು ಸ್ವೀಕಾರ ಮಾಡಲಾಗಿದೆ. 33,916 ಅರ್ಜಿಗಳಲ್ಲಿ 87.66 ಕೋಟಿ ರೂ. ಕ್ಲೈಮ್ ಕೇಳಿದ್ದು, ಅದರಲ್ಲಿ 3222 ಅರ್ಜಿಗಳನ್ನು ಇತ್ಯರ್ಥಪಡಿಸಿ 27.80 ಕೋಟಿ ರೂ. ಕ್ಲೈಮ್ ನೀಡಲು ಆದೇಶಿಸಲಾಗಿದೆ. ಇದರಿಂದ 15.63 ಕಾರ್ವಿುಕರಿಗೆ ನ್ಯಾಯ ಸಿಕ್ಕಿದೆ ಎಂದು ಶಿವರಾಂ ಹೆಬ್ಬಾರ್ ಸದನಕ್ಕೆ ಮಾಹಿತಿ ನೀಡಿದರು.
ಸಚಿವ ಶಿವರಾಂ ಹೆಬ್ಬಾರ್ಗೆ ಪ್ರಶಂಸೆ: ಕಾರ್ವಿುಕ ಇಲಾಖೆಯನ್ನು ಕ್ರೀಯಾಶೀಲವಾಗಿ ನಿರ್ವಹಣೆ ಮಾಡುತ್ತಿರುವ ಸಚಿವ ಶಿವರಾಂ ಹೆಬ್ಬಾರ್ ಅವರಿಗೆ ಸದನ ಮುಕ್ತವಾಗಿ ಶ್ಲಾಘಿಸಿ ಅಭಿನಂದಿಸಿತು. ನೀವು ಒಬ್ಬ ಲಾರಿ ಚಾಲಕನಾಗಿ ಕಾರ್ವಿುಕ ಇಲಾಖೆ ಜವಾಬ್ದಾರಿ ಹೊತ್ತುಕೊಂಡಿದ್ದರ ಪರಿಣಾಮ ಇಷ್ಟು ಕೆಲಸ ಮಾಡಲು ಸಾಧ್ಯವಾಗಿದೆ. ಕಾರ್ವಿುಕ ಇಲಾಖೆ ಜವಾಬ್ದಾರಿಯನ್ನು ಶ್ರೀಮಂತರ ಕೈಗೆ ಕೊಟ್ಟಿದ್ದರೆ ಇದೆಲ್ಲ ಮಾಡಲು ಆಗುತ್ತಿರಲಿಲ್ಲ ಎಂದು ಪಕ್ಷಾತೀತವಾಗಿ ಸದಸ್ಯರು ಅಭಿಪ್ರಾಯಪಟ್ಟರು.
1.90 ಕೋಟಿ ಕಾರ್ವಿುಕರು: ಕಾರ್ವಿುಕ ಇಲಾಖೆ ಮಾಹಿತಿ ಪ್ರಕಾರ, ಸಂಘಟಿತ ಮತ್ತು ಅಸಂಘಟಿತ ವಲಯ ವ್ಯಾಪ್ತಿಯಲ್ಲಿ 1.90 ಕೋಟಿ ಜನರಿದ್ದಾರೆ. ಕನಿಷ್ಠ ವೇತನ ಪರಿಷ್ಕರಣೆ ಮಾಡುವ ಕೆಲಸವನ್ನು ಕಾಲಕಾಲಕ್ಕೆ ಮಾಡಲಾಗುತ್ತಿದೆ ಎಂದ ಹೆಬ್ಬಾರ್, ಆಟೋ, ಟ್ಯಾಕ್ಸಿ, ಲಾರಿ, ಬಸ್ ಸೇರಿ ರಾಜ್ಯದಲ್ಲಿ 35 ಲಕ್ಷ ಚಾಲಕರಿದ್ದು, ಅವರ ಹಿತ ಕಾಯಲು ಚಾಲಕರ ಕ್ಷೇಮಾಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಲಾಗುತ್ತಿದೆ. ಕಟ್ಟಡ ಕಾರ್ವಿುಕ ಮಂಡಳಿ ಮಾದರಿಯಲ್ಲಿಯೇ ಈ ಮಂಡಳಿಯೂ ಕೆಲಸ ಮಾಡಲಿದೆ ಎಂದರು.
ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ನಿಯೋಜನೆಯನ್ನು ರದ್ದುಪಡಿಸಿ ಅನ್ಯ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ವಾಪಸ್ ಕರೆಯಿಸಿಕೊಳ್ಳಲಾಗುವುದು ಎಂದು ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದರು. ಪರಿಷತ್ನಲ್ಲಿ ಆಯನೂರು ಮಂಜುನಾಥ್ ಪ್ರಶ್ನೆಗೆ ಉತ್ತರಿಸಿ, ಪದವಿಪೂರ್ವ, ಸಾರ್ವಜನಿಕ ಶಿಕ್ಷಣ, ಗ್ರಂಥಾಲಯ, ಮುದ್ರಣ ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ ಸೇರಿ ಒಟ್ಟು 98 ಶಿಕ್ಷಕರು, ಉಪನ್ಯಾಸಕರು ಹಾಗೂ ಆಡಳಿತ ಅಧಿಕಾರಿಗಳು, ಸಿಬ್ಬಂದಿ ಅನ್ಯ ಇಲಾಖೆಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ಹೈಕೋರ್ಟ್ ತೀರ್ಪಿನನ್ವಯ ನಿಯೋಜನೆ ನಿಷೇಧಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು 2021ರ ನ.23ರಂದು ಆದೇಶ ಹೊರಡಿಸಿದ್ದಾರೆ ಎಂದರು. ಸುತ್ತೋಲೆ ಹೊರಡಿಸಿದ ನಂತರವೂ ಪಾಲಿಸದೆ ನಿಯೋಜನೆಯಲ್ಲಿ ಇರುವವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಆಯನೂರು ಒತ್ತಾಯಿಸಿದಾಗ, ವಾಪಸ್ ಕರೆಯಿಸಿಕೊಳ್ಳಲು ಕ್ರಮ ಕೈಗೊಳ್ಳುವೆ ಎಂದು ನಾಗೇಶ್ ಉತ್ತರಿಸಿದರು.
ಗೊಣಗು: ಹೈಕೋರ್ಟ್ ಆದೇಶದ ನಂತರವೂ ನಿಯೋಜನೆ ಮುಂದುವರಿಸಿದ್ದೇಕೆ? ಎಂದು ಜೆಡಿಎಸ್ನ ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ ಕೇಳಿದರೆ, ಹೈಕೋರ್ಟ್ ಪಾಲಿಸಿ ಎಂದು ಇಲ್ಲಿ ಹೇಳುವುದು, ನಂತರ ಬೇಡವೆಂದರೆ ಏನು ಮಾಡುವುದು? ಎಂದು ಬಿ.ಸಿ.ನಾಗೇಶ್ ಗೊಣಗಿದರು. ನಿಯೋಜನೆ ಮುಂದುವರಿಸಲು ಹೇಳಿದವರು ಯಾರು ಎಂಬುದನ್ನು ಸದನಕ್ಕೆ ತಿಳಿಸಬೇಕೆಂದು ಭೋಜೇಗೌಡ ಒತ್ತಾಯಿಸಿದರೆ, ಸಭಾಪತಿ ಮಧ್ಯೆ ಪ್ರವೇಶಿಸಿ ಚರ್ಚೆಗೆ ತೆರೆ ಎಳೆದರು.
ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ, ವಿದ್ಯಾಸಿರಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಆದಾಯ ಮಿತಿಯಲ್ಲಿನ ತಾರತಮ್ಯ ಸರಿಪಡಿಸುವಂತೆ ಎನ್.ಮಹೇಶ್ ಒತ್ತಾಯಿಸಿದರು. ಬಜೆಟ್ ಮೇಲಿನ ಇಲಾಖಾವಾರು ಬೇಡಿಕೆಗಳ ಚರ್ಚೆಯಲ್ಲಿ ಮಾತನಾಡಿ, ದಲಿತರ ಭೂಮಿ ರಕ್ಷಣೆಗೆ ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಅಗತ್ಯವಿದೆ. ಇನ್ನೂ ಎಸ್ಸಿ, ಎಸ್ಟಿ ಹಾಗೂ ಒಬಿಸಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಪಡೆಯಲು ಇರುವ ಆದಾಯ ಮಿತಿಯಲ್ಲಿ ತಾರತಮ್ಯವಿದೆ. ಇದನ್ನು ಸರಿಪಡಿಸಬೇಕು. ಇನ್ನೂ ವಿದ್ಯಾಸಿರಿ ಯೋಜನೆಯಡಿ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಮಾಸಿಕ 550 ರೂ., ನೀಡಲಾಗುತ್ತಿದೆ. ಅದೇ ಒಬಿಸಿ ವಿದ್ಯಾರ್ಥಿಗಳಿಗೆ 1500 ರೂ., ನೀಡಲಾಗುತ್ತಿದ್ದು ಇದನ್ನು ಸರಿಪಡಿಸುವಂತೆ ಮನವಿ ಮಾಡಿದರು.