ಕರುಳು ಚುರ್ ಅನ್ನೋ ದೃಶ್ಯ... ಪಾಳು ಬಿದ್ದ ಮನೇಲಿ ಅನಾಥವಾಗಿ ಬಿದ್ದಿದ್ದ ಹೆಣ್ಣು ಮಗು ಪಾಲಿಗೆ ಬೆಳಕಾದ ದಿಶಾ ಪಟಾನಿ ಸಹೋದರಿ! Disha Patani

Disha Patani
Published on

Disha Patani : ಹೆಣ್ಣಿಗೆ ಹೆಣ್ಣೇ ಶತ್ರು ಅಂತಾರೆ ನಿಜ. ಆದರೆ, ಹೆಣ್ಣಿನ ನೋವು ಮತ್ತೊಂದು ಹೆಣ್ಣಿಗೆ ಮಾತ್ರ ಗೊತ್ತಾಗುತ್ತದೆ ಅನ್ನೋದು ಕೂಡ ಅಷ್ಟೇ ಸತ್ಯ. ಈ ಆಧುನಿಕ ಜಗತ್ತಿನಲ್ಲಿ ಹೆಣ್ಣನ್ನು ತಾತ್ಸಾರ ಮನೋಭಾವದಿಂದ ನೋಡುವ ಮಂದಿ ಇನ್ನೂ ಇರುವುದು ದುರ್ದೈವದ ಸಂಗತಿ. ಇಂದಿಗೂ ಅನೇಕ ಕಡೆ ಹೆಣ್ಣು ಮಕ್ಕಳನ್ನು ಅನಾಥವಾಗಿ ಬಿಟ್ಟು ಹೋಗುವ ಎಷ್ಟೋ ಮಂದಿ ಇದಾರೆ. ಆದರೆ, ಹುಟ್ಟಿಸಿದ ದೇವರು ಹುಲ್ಲು ಮೇಯಿಸದೆ ಇರಲ್ಲ ಅನ್ನೋ ಗಾದೆ ಮಾತಿದೆ. ಪ್ರತಿಯೊಬ್ಬರಿಗೂ ಒಬ್ಬರ ಆಶ್ರಯ ಖಂಡಿತ ಸಿಕ್ಕೇ ಸಿಗುತ್ತದೆ ಅನ್ನೋದಕ್ಕೆ ಈ ಘಟನೆಯೇ ತಾಜಾ ಉದಾಹರಣೆ.

ನಿಮಗೆಲ್ಲರಿಗೂ ಬಾಲಿವುಡ್​ ನಟಿ ದಿಶಾ ಪಟಾನಿ ಗೊತ್ತಿರಬಹುದು. ಆದರೆ, ಅವರ ಸಹೋದರಿ ಖುಷ್ಬೂ ಪಟಾನಿ ಬಹುತೇಕರಿಗೆ ತಿಳಿದಿಲ್ಲ. ಆದರೆ, ಅವರಿಂದು ಮಾಡಿರುವ ಮಾನವೀಯ ಕೆಲಸದ ಬಗ್ಗೆ ತಿಳಿದರೆ, ನಿಮ್ಮ ಮನಸ್ಸಿನಲ್ಲಿ ಅವರ ಚಿತ್ರಣ ಮನೆ ಮಾಡುವುದಂತೂ ಸತ್ಯ. ಅನಾಥವಾಗಿ, ಕೊಳಕು ಪ್ರದೇಶದಲ್ಲಿ ಬಿದ್ದಿದ್ದ ಹೆಣ್ಣು ಮಗುವೊಂದನ್ನು ಖಷ್ಬೂ ಪಟಾನಿ ರಕ್ಷಣೆ ಮಾಡಿದ್ದು, ತಮ್ಮ ಜೀವ ಇರೋವರೆಗೂ ಆ ಮಗುವನ್ನು ನೋಡಿಕೊಳ್ಳುವುದಾಗಿಯೂ ಮತ್ತು ಭವಿಷ್ಯ ರೂಪಿಸಿಕೊಡುವುದಾಗಿಯೂ ಪ್ರತಿಜ್ಞೆ ಮಾಡಿದ್ದಾರೆ. ನಿಜಕ್ಕೂ ಈ ಮಹಾತಾಯಿಗೆ ಒಂದು ಸೆಲ್ಯೂಟ್​ ಹೊಡೆಯಲೇಬೇಕಿದೆ.

ಖಷ್ಬೂ ಅವರು ಭಾನುವಾರ ತಮ್ಮ ಇನ್​ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಅದರಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ತಮ್ಮ ಮನೆಯ ಹಿಂದೆ ಇದ್ದ ಪಾಳುಬಿದ್ದ ಮನೆಯಲ್ಲಿ ಅನಾಥವಾಗಿ ಬಿದ್ದಿದ್ದ ಹೆಣ್ಣು ಮಗುವನ್ನು ರಕ್ಷಣೆ ಮಾಡಿದ್ದಾರೆ. ಅಂದಹಾಗೆ, ಖುಷ್ಬೂ ಪಟಾನಿ ಅವರು ಭಾರತೀಯ ಸೇನೆಯ ಮಾಜಿ ಅಧಿಕಾರಿಯೂ ಹೌದು.

ಆ ಪುಟ್ಟ ಮಗುವನ್ನು ಯಾರೋ ತಮ್ಮ ಮನೆಯ ಹಿಂದೆ ಬಿಟ್ಟು ಹೋಗಿದ್ದಾರೆ ಮತ್ತು ಆ ಮಗು ಮಣ್ಣಿನಲ್ಲಿ ಬಿದ್ದಿತ್ತು ಎಂದು ತಿಳಿಸಿದ್ದಾರೆ. ಆ ಮಗುವಿಗೆ ಉತ್ತಮ ಪಾಲನೆ ಮತ್ತು ಸೂಕ್ತವಾದ ಮನೆಯನ್ನು ಒದಗಿಸುವುದಾಗಿ ಖುಷ್ಬೂ ಅವರು ತಮ್ಮ ಫಾಲೋವರ್ಸ್​ಗೆ ಭರವಸೆ ನೀಡಿದ್ದಾರೆ. ಈ ಘಟನೆ ಬಗ್ಗೆ ಮತ್ತಷ್ಟು ತನಿಖೆ ಮಾಡಲು ಪೊಲೀಸ್ ಅಧಿಕಾರಿಯೊಬ್ಬರು ಆ ಮಗುವನ್ನು ತೆಗೆದುಕೊಂಡು ಹೋಗುವುದನ್ನು ಸಹ ವಿಡಿಯೋದಲ್ಲಿ ತೋರಿಸಲಾಗಿದೆ.

ಖುಷ್ಬೂ ಅವರು ಮಗುವನ್ನು ನೋಡಿದ ಕೂಡಲೇ ಮನೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದರು. ನಂತರ ಅವರ ಕುಟುಂಬವು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತು. ಬಳಿಕ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ಪೋಸ್ಟ್‌ನ ಶೀರ್ಷಿಕೆಯಲ್ಲಿ, ಖುಷ್ಬೂ ಅವರು ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕ ಅಧಿಕಾರಿಗಳನ್ನು ಟ್ಯಾಗ್ ಮಾಡಿ, ಎಲ್ಲರೂ ನಮ್ಮ ದೇಶದ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಅನಾಥ ಮಗುವಿಗೆ ಜೀವನ ಕಟ್ಟಿಕೊಡುವುದಾಗಿ ಭರವಸೆಯನ್ನು ನೀಡಿದ್ದಾರೆ.

ಅಂದಹಾಗೆ ಖುಷ್ಬೂ ಅವರು ಬೆಳಗ್ಗೆ ವಾಕಿಂಗ್​ಗೆ ಹೋದಾಗ ಹತ್ತಿರದ ಪಾಳುಬಿದ್ದ ಕಟ್ಟಡದಿಂದ ಮಗುವಿನ ಅಳುವ ಸದ್ದು ಕೇಳಿಸಿತು. ಕಟ್ಟಡಕ್ಕೆ ನೇರ ಪ್ರವೇಶವಿರಲಿಲ್ಲ, ಆದ್ದರಿಂದ ಅವರು ಸ್ಥಳವನ್ನು ತಲುಪಲು ಗೋಡೆ ಹತ್ತಿ ಧೈರ್ಯಶಾಲಿ ಹೆಜ್ಜೆ ಇಟ್ಟರು. ಒಳಗೆ, ನೆಲದ ಮೇಲೆ ಮಲಗಿದ್ದ ಮಗು ಅಳುತ್ತಿರುವುದು ಮತ್ತು ಮುಖದ ಮೇಲೆ ಗಾಯಗಳಾಗಿರುವುದನ್ನು ನೋಡಿದರು. ತಕ್ಷಣ ಆ ಮಗುವನ್ನು ಹೊತ್ತು ತಂದು ಆರೈಕೆ ಮಾಡಿದರು. ಖುಷ್ಬೂ ಅವರು ಮಾನವೀಯತೆ ನೋಡಿದ ನೆಟ್ಟಿಗರು ಆಕೆಯನ್ನು ಮೆಚ್ಚಿಕೊಂಡು ಕೊಂಡಾಡುತ್ತಿದ್ದಾರೆ.

ಇನ್ನು ಮಗುವನ್ನು ಯಾರು ಬಿಟ್ಟು ಹೋಗಿದ್ದಾರೆಂದು ಗುರುತಿಸಲು ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದಾರೆ. ಮಗುವನ್ನು ಅನಾಥವಾಗಿ ಬಿಟ್ಟು ಹೋದ ಪಾಪಿಗಳಿಗೆ ಕಠಿಣಾತಿ ಕಠಿಣ ಶಿಕ್ಷೆ ವಿಧಿಸಬೇಕೆಂದು ನೆಟ್ಟಿಗರು ಆ್ರಹಿಸಿದ್ದಾರೆ.

ಅಂದಹಾಗೆ, ಖುಷ್ಬೂ ಮತ್ತು ದಿಶಾ ತಮ್ಮ ಕುಟುಂಬದೊಂದಿಗೆ ಬರೇಲಿಯಲ್ಲಿ ಬೆಳೆದರು. ಖುಷ್ಬೂ ಅವರು ದಿಶಾಗಿಂತ ಹಿರಿಯಳು. ಖುಷ್ಬೂ ಭಾರತೀಯ ಸೇನೆಯನ್ನು ಸೇರಿದರೆ, ದಿಶಾ ಅವರು ಮಾಡೆಲಿಂಗ್ ಕ್ಷೇತ್ರವನ್ನು ಆರಿಸಿಕೊಂಡರು ಮತ್ತು ಸಿನಿಮಾಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿ, ಇದೀಗ ಸ್ಟಾರ್​ ನಟಿಯಾಗಿದ್ದಾರೆ.

ಇನ್ನು ದಿಶಾ ಅವರು ತಮ್ಮ ಮುಂದಿನ 'ವೆಲ್ಕಮ್ ಟು ದಿ ಜಂಗಲ್' ಚಿತ್ರದಲ್ಲಿ ಅಕ್ಷಯ್ ಕುಮಾರ್, ಜಾಕ್ವೆಲಿನ್ ಫರ್ನಾಂಡಿಸ್, ರವೀನಾ ಟಂಡನ್, ಸಂಜಯ್ ದತ್ ಮತ್ತು ಸುನೀಲ್ ಶೆಟ್ಟಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಈ ವರ್ಷದ ಕೊನೆಯಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net