ಆಯುರ್ವೇದ ಚಿಕಿತ್ಸೆಯಿಂದ ಕಾಯಿಲೆಗಳು ಗುಣ

10BTP01
ಬೆಟ್ಟದಪುರ ಸಮೀಪದ ಕೊಣಸೂರು ಗ್ರಾಮದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಸತೀಶ್, ಮಂಜುನಾಥ್, ದೇವರಾಜೇಗೌಡ, ಆನಂದ್, ವೆಂಕಟೇಶ್ ಇದ್ದರು.
Published on

ಬೆಟ್ಟದಪುರ: ಪುರಾತನ ಕಾಲದಿಂದಲೂ ಆಯುರ್ವೇದ ಚಿಕಿತ್ಸೆಗೆ ತನ್ನದೇ ಆದ ಸ್ಥಾನಮಾನವಿದ್ದು, ಇದರ ಚಿಕಿತ್ಸೆಯಿಂದ ಕಾಯಿಲೆಗಳು ಗುಣಮುಖವಾಗುತ್ತವೆ ಎಂದು ಆಯುಷ್ ವೈದ್ಯಾಧಿಕಾರಿ ಡಾ.ಸತೀಶ್ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕೊಣಸೂರು ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಧುನಿಕ ಕಾಲದಲ್ಲಿ ಅಲೋಪಥಿ ಔಷಧ ಪದ್ಧತಿಯಿಂದ ಬೇಗ ಗುಣಮುಖರಾದರೂ ಅಡ್ಡ ಪರಿಣಾಮಗಳು ಸಾಕಷ್ಟು ಇವೆ. ಮೂಲ ಪರಿಕಲ್ಪನೆಯನ್ನು ಮರೆತಿರುವ ನಾವು ಪ್ರಕೃತಿದತ್ತವಾಗಿ ಸಿಗುವ ಸೊಪ್ಪು, ತರಕಾರಿ, ಹಣ್ಣು ಅಂತಹವುಗಳನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಉತ್ತಮ ಆರೋಗ್ಯ ಮತ್ತು ಆಯಸ್ಸನ್ನು ವೃದ್ಧಿ ಮಾಡಿಕೊಳ್ಳಬಹುದು. ಸರ್ಕಾರದಿಂದ ಆಯುರ್ವೇದ ಚಿಕಿತ್ಸೆಗೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪ್ರತಿಯೊಬ್ಬರೂ ಸಿಗುವಂತ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಯೋಗಪಟು ಆಶಾ ಮಹದೇವ್ ಮಾತನಾಡಿ, ಯೋಗವು ದೈಹಿಕ ಆರೋಗ್ಯ ಮಾತ್ರವಲ್ಲದೆ, ಮಾನಸಿಕ ಆರೋಗ್ಯಕ್ಕೂ ವಿಶೇಷ ಮದ್ದು. ಪ್ರಾಣಾಯಾಮ, ಸೂರ್ಯ ನಮಸ್ಕಾರ, ಧ್ಯಾನ ಹಾಗೂ ವಿವಿಧ ಸರಳ ಆಸನಗಳನ್ನು ಮಾಡುವುದರ ಮೂಲಕವೂ ದೇಹ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸಬಹುದು. ಕೋಪ, ಏಕಾಗ್ರತೆಯ ಕೊರತೆ, ಒತ್ತಡ ಈ ರೀತಿಯ ಮಾನಸಿಕ ಸಮಸ್ಯೆಗಳಿಗೆ ದಿನನಿತ್ಯ ಯೋಗ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಹಾಗಾಗಿ ಪ್ರತಿಯೊಬ್ಬರೂ ಯೋಗಾಭ್ಯಾಸವನ್ನು ರೂಢಿ ಮಾಡಿಕೊಳ್ಳಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್, ಪಿಡಿಒ ದೇವರಾಜೇಗೌಡ, ರೈತ ಮುಖಂಡ ಆನಂದ್, ಮುಖ್ಯಶಿಕ್ಷಕ ವೆಂಕಟೇಶ್, ಹುಣಸೂರು ಆಯುರ್ವೇದಿಕ್ ಕ್ಷೇಮಕೇಂದ್ರ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net