

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆ ಕಳೆದ 5 ವರ್ಷಗಳಿಂದ ಖಾಸಗೀಕರಣ ಇಲ್ಲವೆ ಬಂಡವಾಳ ಹಿಂತೆಗೆತದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಮಾಡಿದ ಪ್ರಯತ್ನಗಳು ಸಫಲವಾಗಿದ್ದರಿಂದ ಇಂದು ಒಳ್ಳೆಯ ದಿನಗಳು ಬಂದಿವೆ. ಎಚ್.ಡಿ.ಕುಮಾರಸ್ವಾಮಿ ಅವರು ಬೃಹತ್ ಕಯಗಾರಿಕಾ ಸಚಿವರಾಗಿದ್ದು, ಕಾರ್ಖಾನೆ ಅಭಿವೃದ್ಧಿಯ ಎಲ್ಲ ಕನಸುಗಳು ನನಸಾಗುವ ಸುಯೋಗ ಬಂದಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ನಗರದಲ್ಲಿ ಬುಧವಾರ ಬಿಜೆಪಿಯಿಂದ ನೂತನ ಸಂಸದ ಹಾಗು ವಿಧಾನಪರಿಷತ್ ಸದಸ್ಯರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕುಮಾರಸ್ವಾಮಿ ಅವರು ಕಾರ್ಖಾನೆ ಅಭಿವೃದ್ಧಿಪಡಿಸುವ ವಿಚಾರವನ್ನು ಮೊಬೈಲ್‌ನಲ್ಲಿ ಮಾತನಾಡಿದ್ದಾರೆ. ಕಾರ್ಖಾನೆ ಕಾರ್ಮಿಕರು, ಜೆಡಿಎಸ್ ಪ್ರಮುಖರು ಒಟ್ಟಾಗಿ ಸೇರಿ ಬೆಂಗಳೂರಿಗೆ ತೆರಳಿ ನೀಲಿನಕ್ಷೆ ಸಿದ್ಧಪಡಿಸುವ ಜತೆಗೆ, ಸಚಿವರನ್ನು ಶೀಘ್ರವೇ ಭದ್ರಾವತಿಗೆ ಕರೆತಂದು ಅಭಿನಂದನಾ ಸಮಾರಂಭ ಆಯೋಜಿಸೋಣ ಎಂದರು.
ಕ್ಷೇತ್ರದಲ್ಲಿ ಆಡಳಿತ ಪಕ್ಷದ ಶಾಸಕರು, ಗ್ಯಾರಂಟಿ ಯೋಜನೆಗಳು ಇರುವ ಕ್ಷೇತ್ರದಲ್ಲಿಯೇ 20 ಸಾವಿರಕ್ಕೂ ಅಧಿಕ ಮತಗಳನ್ನು ಕೊಟ್ಟು 4ನೇ ಬಾರಿಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಆಭಾರಿಯಾಗಿದ್ದೇನೆ. ಕುಮಾರಸ್ವಾಮಿ ಅವರು ಹಾಗೂ ನಾನು ಒಟ್ಟಾಗಿ ಇಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಿಸಿ ಕ್ಷೇತ್ರವನ್ನು ಮಾದರಿ ನಗರವನ್ನಾಗಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನೂತನ ಎಂಎಲ್‌ಸಿ ಡಾ. ಧನಂಜಯ ಸರ್ಜಿ ಮಾತನಾಡಿ, ಜಿಲ್ಲೆಯಲ್ಲಿ ಬಿ.ವೈ.ರಾಘವೇಂದ್ರ ಅವರು ಜಾತಿ, ಧರ್ಮ ಭೇದವಿಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದ ಹೆಚ್ಚಿನ ಮತ ನೀಡಿದ್ದಾರೆ. ನಮ್ಮ ಮೂರೂ ಜನರ ಗೆಲುವಿಗೆ ಕಾರಣರಾದ ಕಾರ್ಯಕರ್ತರಿಗೆ ಇದರ ಶ್ರೇಯ ಲಭಿಸಬೇಕು ಎಂದು ತಿಳಿಸಿದರು.
ಮಾಜಿ ಎಂಎಲ್‌ಸಿ ಎಂ.ಬಿ.ಭಾನುಪ್ರಕಾಶ್ ಮಾತನಾಡಿ, ಬಿಜೆಪಿ ವಿಕಸಿತ ಭಾರತದ ಕನಸು ಹೊತ್ತಿದ್ದರೆ ಕಾಂಗ್ರೆಸ್ ವಿಭಜಿತ ಭಾರತಕ್ಕೆ ಪ್ರಯತ್ನಿಸುತ್ತಿದೆ. ಹಾಗಾಗಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಉಳಿಸಿಕೊಳ್ಳುವ ಕೆಲಸ ನಮ್ಮೆಲ್ಲರಿಂದಲೂ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿ ಮಾತನಾಡಿ, ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಮೈತ್ರಿಯಿಂದ ಕೆಲಸ ಮಾಡಿದ ಪರಿಣಾಮ ಇಂದು ಜಯ ಲಭಿಸಿದೆ. ಹಿಂದೆ ನಷ್ಟದಲ್ಲಿದ್ದ ಕಾರ್ಖಾನೆಯನ್ನು ತಂದೆ ದೇವೇಗೌಡ ಅವರು ಕೇಂದ್ರದ ಸೈಲ್ ಮಡಿಲಿಗೆ ಸೇರಿಸಿದರು. ಈಗ ಮಗ ಕುಮಾರಸ್ವಾಮಿ ಅವರು ಗ್ಲೂಕೋಸ್ ನೀಡುವ ಸಂದರ್ಭ ಎದುರಾಗಿದೆ. ಸಂಸದರು ಹಾಗು ಸಚಿವರು ಒಟ್ಟಾದರೆ ಕಾರ್ಖಾನೆ ಅಭಿವೃದ್ಧಿ ಕಷ್ಟವೇನೂ ಅಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಪ್ರಮುಖರಾದ ಮಂಗೋಟೆ ರುದ್ರೇಶ್, ಕದಿರೇಶ್, ಮಂಜುನಾಥ್, ತೀರ್ಥಯ್ಯ, ಕೂಡ್ಲಿಗೆರೆ ಹಾಲೇಶ್, ಜಿ.ಆನಂದ್, ಜೆಡಿಎಸ್ ತಾಲೂಕು ಅಧ್ಯಕ್ಷ ಕರುಣಾಮೂರ್ತಿ, ಗೀತಾ ಸತೀಶ್, ರವಿಕುಮಾರ್, ಮಧುಕುಮಾರ್, ಮಧುಸೂದನ್, ಚನ್ನೇಶ್, ಅಣ್ಣಪ್ಪ, ಅನುಪಮಾ ಚನ್ನೇಶ್ ಇತರರಿದ್ದರು.