ಮಳೆ ಹಾನಿ ಹೆಚ್ಚಿನ ಪರಿಹಾರಕ್ಕೆ ಅಧಿವೇಶನದಲ್ಲಿ ಚರ್ಚೆ

sgr (25)
ಸಾಗರದ ಬಿ.ಎಚ್.ರಸ್ತೆಯಲ್ಲಿ ಗುಂಡಿ ಬಿದ್ದಿರುವ ಸ್ಥಳವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಪರಿಶೀಲಿಸಿದರು. ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ರವಿ ಲಿಂಗನಮಕ್ಕಿ, ಅನಿಲಕುಮಾರ್ ಇತರರಿದ್ದರು.
Published on

ಸಾಗರ: ಸಾಗರ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಅಂದಾಜು 150 ಕೋಟಿ ರೂ. ನಷ್ಟವಾಗಿದೆ. ಲೋಕೋಪಯೋಗಿ ಇಲಾಖೆ 75 ಕೋಟಿ ರೂ., ಜಿಲ್ಲಾ ಪಂಚಾಯಿತಿ 33 ಕೋಟಿ, ಸಣ್ಣ ನೀರಾವರಿ ಇಲಾಖೆಗೆ 170 ಕೋಟಿ ರೂ. ನಷ್ಟವಾಗಿದೆ. ಹೊಸನಗರ ತಾಲೂಕಿನಲ್ಲಿ ಸುಮಾರು 33 ಕೋಟಿ ರೂ. ನಷ್ಟವಾಗಿದೆ. ಜಿಲ್ಲಾಧಿಕಾರಿಗಳ ಮೂಲಕ ನಷ್ಟದ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರದ ಬಿ.ಎಚ್.ರಸ್ತೆಯಲ್ಲಿ ಹೊಂಡ ಬಿದ್ದಿರುವ ಸ್ಥಳವನ್ನು ಬುಧವಾರ ಪರಿಶೀಲಿಸಿ ಮಾತನಾಡಿದ ಅವರು, ಮಳೆಗಾಲದ ಅಧಿವೇಶನದಲ್ಲಿ ಮಳೆಯಿಂದಾದ ಹಾನಿ ಕುರಿತು ಚರ್ಚೆ ನಡೆಸುತ್ತೇನೆ. ಹೆಚ್ಚಿನ ಅನುದಾನವನ್ನು ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ಮತ್ತು ಸೊರಬ ಕ್ಷೇತ್ರಕ್ಕೆ ನೀಡಲು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡುತ್ತೇನೆ ಎಂದರು.

ಸಾಗರ ಪಟ್ಟಣದ ಶಿವಪ್ಪನಾಯಕ ವೃತ್ತದಿಂದ ಸಿಗಂದೂರು ತುಮರಿ ಮೂಲಕ ಮರಕುಟಕ ಸೇರುವ ರಾಷ್ಟ್ರೀಯ ಹೆದ್ದಾರಿ 369ಇ ಸರ್ವೇ ಕಾರ್ಯ ಮುಗಿದಿದೆ. ತುಮರಿ ಗ್ರಾಮದೊಳಗಿನಿಂದ ರಸ್ತೆ ಹೋಗಬೇಕು ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು ಬೈಪಾಸ್ ನಿರ್ಮಿಸಿ ಎನ್ನುತ್ತಿದ್ದಾರೆ. ಕಾಮಗಾರಿ ಆರಂಭವಾಗುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ-206ರಲ್ಲಿ ಕಾಮಗಾರಿಯನ್ನು ತಕ್ಷಣ ಮುಗಿಸಲು ಸೂಚಿಸಿದ್ದೇನೆ ಎಂದು ಹೇಳಿದರು.

ಅಡಕೆಗೆ ಕೊಳೆರೋಗ, ಎಲೆಚುಕ್ಕೆ ರೋಗ ತಗುಲಿದೆ. ಸಂಕಷ್ಟದಲ್ಲಿರುವ ಬೆಳೆಗಾರರಿಗೆ, ಭತ್ತ, ಜೋಳ, ಕಲ್ಲಂಗಡಿ ಬೆಳೆದ ರೈತರಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಮನವಿ ಮಾಡಲಾಗುವುದು. ಕ್ಷೇತ್ರದ ಹಲವೆಡೆ ಅಡಕೆ ತೋಟಗಳೇ ನಾಶವಾಗಿವೆ. ಸರ್ಕಾರಕ್ಕೆ ಹೆಚ್ಚಿನ ಅನುದಾನ ನೀಡಲು ಕೋರುತ್ತೇವೆ ಎಂದರು.

ಅಭಿವೃದ್ಧಿಗೆ ಹಣ ಇಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಾರೆ. ಆದರೆ ರಾಜ್ಯ ಸರ್ಕಾರದಿಂದ ಕಾಲುಸಂಕ ನಿರ್ಮಾಣಕ್ಕೆ 50 ಕೋಟಿ, ಸಿಎಂ ವಿಶೇಷ ಅನುದಾನ 50 ಕೋಟಿ ಹಾಗೂ ಪ್ರಗತಿಪಥ ಯೋಜನೆಯಡಿ 20 ಕೋಟಿ ರೂ. ಮಂಜೂರಾಗಿದೆ. ಇದರಲ್ಲಿ ಅಗತ್ಯ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇವೆ. ಜತೆಗೆ ಪಿಡಬ್ಲುೃಡಿಯಿಂದಲೂ ಪ್ರತ್ಯೇಕ ಹಣ ಬರುತ್ತದೆ ಎಂದು ತಿಳಿಸಿದರು.

ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ರವಿ ಲಿಂಗನಮಕ್ಕಿ, ಕಲಸೆ ಚಂದ್ರಪ್ಪ, ಶಾಸಕರ ವಿಶೇಷ ಕರ್ತವ್ಯಾಧಿಕಾರಿ ಟಿ.ಪಿ.ರಮೇಶ್, ಅನಿಲಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net