ಕಡೂರಿನಲ್ಲಿರುವ ಅನಧಿಕೃತ ಬಡಾವಣೆ ಸಕ್ರಮಗೊಳಿಸಲು ಸದನದಲ್ಲಿ ಚರ್ಚೆ

16KDR3
ಕಡೂರು ಪುರಸಭೆ ಅಧಿಕಾರಿಗಳ ಸಭೆಯಲ್ಲಿ ಶಾಸಕ ಕೆ.ಎಸ್.ಆನಂದ್ ಅವರನ್ನು ಎಸಿ ಕಾಂತರಾಜ್ ಸನ್ಮಾನಿಸಿದರು. ಮುಖ್ಯಾಧಿಕಾರಿ ಕೆ.ರುದ್ರೇಶ್, ಭಂಡಾರಿ ಶ್ರೀನಿವಾಸ್, ಮಂಜುನಾಥ್ ಇತರರಿದ್ದರು.
Published on

ಕಡೂರು: ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿನ ಹಲವು ಅನಧಿಕೃತ ಬಡಾವಣೆಗಳನ್ನು ಸಕ್ರಮಗೊಳಿಸುವ ಬಗ್ಗೆ ಸದನದಲ್ಲಿ ಚರ್ಚಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಪುರಸಭೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೆಲ ಅನಧಿಕೃತ ಬಡಾವಣೆಗಳಿಗೆ ಅಧಿಕೃತ ಖಾತೆಗಳಿವೆ. ಆದರೆ ಇ-ಖಾತೆ ಇಲ್ಲದೆ ಯಾವುದೇ ಕಂದಾಯ ವಸೂಲಿ ಮಾಡಲು ಸಾಧ್ಯವಾಗುತ್ತಿಲ್ಲ. ಮೂಲ ಸೌಲಭ್ಯ ಒದಗಿಸಿದರೂ ಪುರಸಭೆಗೆ ನಷ್ಟ ಉಂಟಾಗುತ್ತಿದೆ. ಈ ಬಗ್ಗೆ ಸರ್ಕಾರದ ಗಮನಸೆಳೆಯಲಾಗುತ್ತದೆ ಎಂದರು.
ವಾಣಿಜ್ಯ ಮಳಿಗೆಗಳ ಕಂದಾಯ, ನಲ್ಲಿ ಸಂಪರ್ಕ, ಮನೆ ಕಂದಾಯ ಹೆಚ್ಚು ಮಾಡಬೇಕಿದೆ. ಅಧಿಕೃತವಾಗಿ ಕೇವಲ ಮೂರು ಸಾವಿರ ನಲ್ಲಿ ಸಂಪರ್ಕವಿದ್ದು ಸಾವಿರಾರು ನಲ್ಲಿಗಳು ಅನಧಿಕೃತವಾಗಿರುವ ಬಗ್ಗೆ ಮಾಹಿತಿ ಇದೆ. ಕೇವಲ 18 ಲಕ್ಷ ರೂ. ಕಂದಾಯ ವಸೂಲಾಗುತ್ತಿದೆ. ನೀರಿಗಾಗಿ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತಿದ್ದು ಈ ಹಣದಲ್ಲಿಯೇ ನೀರುಗಂಟಿಗಳಿಗೆ ವೇತನ ನೀಡಬೇಕಿದೆ. ನೀರಿನ ಕಂದಾಯ ಕಡ್ಡಾಯವಾಗಿ ವಸೂಲು ಮಾಡಲು ಕ್ರಮ ಕೈಗೊಳ್ಳಬೇಕಿದೆ. ಇದಕ್ಕೆ ಪುರಸಭೆ ಸದಸ್ಯರು ಸಹಕರಿಸಬೇಕು ಎಂದು ತಿಳಿಸಿದರು.
ಹಳೆಯ ಎಪಿಎಂಸಿ ಆವರಣದಲ್ಲಿರುವ ಕೋಳಿ ಅಂಗಡಿಯನ್ನು ಕೂಡಲೇ ತೆರವುಗೊಳಿಸಬೇಕು. ಪಟ್ಟಣದ ಒಳಭಾಗದಲ್ಲಿ ಕೋಳಿ, ಮೀನು, ಮಾಂಸ ಮಾರಾಟಕ್ಕೆ ಅವಕಾಶ ನೀಡಬಾರದು. ಹಲವು ಮುಖ್ಯರಸ್ತೆಗಳಲ್ಲಿ ಪೆಟ್ಟಿಗೆ ಅಂಗಡಿಗಳು ಹೆಚ್ಚಾಗುತ್ತಿವೆ. ಅವುಗಳನ್ನು ತೆರವುಗೊಳಿಸಬೇಕಿದೆ. ಪಾತಾಳಾಂಜನೇಯ ದೇವಾಲಯದ ಪಕ್ಕದಲ್ಲಿ ರಸ್ತೆಗೆ ಅಕ್ರಮ ಶೆಡ್ ನಿರ್ಮಿಸಲಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಹಾಗೂ ತೋಟಗಳಿಗೆ ಹೋಗಲು ತೊಂದರೆಯಾಗುತ್ತಿದೆ. ತಕ್ಷಣ ತೆರವುಗೊಳಿಸುವ ಕಾರ್ಯ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net