ಕಾರಾಗೃಹಗಳ ಕರ್ಮಕಾಂಡ ತೆರೆದಿಟ್ಟ ಚರ್ಚೆ: ಕಟ್ಟುನಿಟ್ಟಿನ ಕ್ರಮದ ಭರವಸೆಯಿತ್ತ ಗೃಹ ಸಚಿವ, 3 ಮಹತ್ವದ ವಿಧೇಯಕಗಳು ಅಂಗೀಕಾರ

State
ಮೇಲ್ಮನೆಯಲ್ಲಿ ಸಚಿವ ಮಾಧುಸ್ವಾಮಿ, ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಸದಸ್ಯರಾದ ಪ್ರತಾಪ್​ಚಂದ್ರ ಶೆಟ್ಟಿ, ಸಂಕನೂರು, ಶ್ರೀನಿವಾಸ ಮಾನೆ, ಗೋವಿಂದರಾಜು ಶುಕ್ರವಾರ ಕಂಡಿದ್ದು ಹೀಗೆ.
Published on

ಬೆಂಗಳೂರು: ಜೂಜು-ಮೋಜು-ಮಸ್ತಿ, ಡ್ರಗ್ಸ್ ದಂಧೆ, ಮದ್ಯ ವ್ಯಸನಿ, ಮೊಬೈಲ್, ಆಯಷಾರಾಮಿ ಸೌಲಭ್ಯ. ಬೇಕೆನಿಸಿದ್ದು ಪಡೆಯುವ ಅನುಕೂಲತೆ, ಪಿಸ್ತೂಲು ಸೇರಿ ಮಾರಕಾಸ್ತ್ರಗಳು, ಗ್ಯಾಂಗ್​ಸ್ಟರ್ ಹೀಗೆ ಎಲ್ಲ ಪಿಡುಗುಗಳಿಗೆ ಪ್ರಶಸ್ತ ತಾಣವೆಂದರೆ ರಾಜ್ಯದ ಜೈಲುಗಳು!

ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರತಿಪಕ್ಷಗಳ ಸದಸ್ಯರು, ಕಾರಾಗೃಹಗಳ ಕರ್ಮಕಾಂಡವನ್ನು ವಿಧಾನಸಭೆಯಲ್ಲಿ ಶುಕ್ರವಾರ ಎಳೆ ಎಳೆಯಾಗಿ ಬಿಚ್ಚಿಟ್ಟರು. ಲಂಚ ಸ್ವೀಕಾರದ ವಿಚಾರವಾಗಿ ಬಂದೀಖಾನೆಯ ಇಬ್ಬರು ಹಿರಿಯ ಅಧಿಕಾರಿಗಳ ಮಧ್ಯೆ ಸಂಘರ್ಷ ನಡೆದು, ತನಿಖೆಯೂ ಆಗುತ್ತದೆ. ಭ್ರಷ್ಟಾಚಾರ, ಅನೈತಿಕ- ಅವ್ಯವಹಾರಗಳಿಗೆ ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿ ಕುಮ್ಮಕ್ಕಿದೆ ಎಂದು ಆರೋಪಿಸಿದರು. ಪುಡಿ ರೌಡಿಗಳು ಜೈಲಿಗೆ ಹೋಗಿಬಂದ ಮೇಲೆ ದೊಡ್ಡಮಟ್ಟದ ರೌಡಿಸಂಗೆ ಸರ್ಟಿಫಿಕೇಟ್ ಪಡೆದಂತಿದೆ. ಸಾಮಾನ್ಯ ಕೈದಿಗಳನ್ನು ಗುಲಾಮರಂತೆ ನಡೆಸಿಕೊಳ್ಳುವ ಮಾಹಿತಿಯಿದ್ದು, ಜೈಲಿನ ಪರಿಸ್ಥಿತಿ ಸಮಗ್ರವಾಗಿ ಸುಧಾರಿಸುವ ತುರ್ತು ಅಗತ್ಯವಿದೆ ಎಂದು ಸರ್ಕಾರಕ್ಕೆ ಪ್ರತಿಪಕ್ಷಗಳು ಸದಸ್ಯರು ಆಗ್ರಹಿಸಿದರು. ಸುದೀರ್ಘ ಚರ್ಚೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರಿಸಿ, ಬಂದೀಖಾನೆ ಅಭಿವೃದ್ಧಿ ಮಂಡಳಿ ರಚನೆ ವಿಧೇಯಕದ ಮೇಲೆ ನಿರೀಕ್ಷೆಗೂ ಮೀರಿ ಸದನದಲ್ಲಿ ಚರ್ಚೆ ನಡೆದಿದ್ದು, ಕಾರಾಗೃಹಗಳಲ್ಲಿನ ನ್ಯೂನತೆ ಮೇಲೆ ಬೆಳಕು ಚೆಲ್ಲಿದೆ. ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳು, ಶಾಸಕರ ಕಾಳಜಿಯನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳು, ಸಿಬ್ಬಂದಿಗೆ ಕಟ್ಟೆಚ್ಚರ ನೀಡಲಾಗುವುದೆಂದು ಭರವಸೆ ನೀಡಿದರು.

ಕೈದಿಗಳ ಮನ ಪರಿವರ್ತನೆ, ಹೊರಬಂದ ಬಳಿಕ ಬದುಕಿನ ಮುಖ್ಯವಾಹಿನಿಗೆ ಸೇರಲು ಪ್ರೇರಣೆ, ಜೈಲುಗಳ ಸುಧಾರಣೆ ಜತೆಗೆ ಜೈಲುಗಳಲ್ಲಿನ ಅವ್ಯವಸ್ಥೆಗೆ ಸರಿಪಡಿಸಲು ಒತ್ತು ನೀಡಲಾಗುವುದು. ತುರ್ತು ಪರಿಸ್ಥಿತಿ ವಿರೋಧಿಸಿ 5-6 ತಿಂಗಳು ಬಳ್ಳಾರಿ ಜೈಲಿನಲ್ಲಿದ್ದ ಸ್ವಾನುಭವ ಹಾಗೂ ಕೆಲವು ರಾಜ್ಯಗಳು ಕೈಗೊಂಡ ಕ್ರಮಗಳ ಸ್ಪೂರ್ತಿಯಿಂದ ಬಹು ಉದ್ದೇಶಿತ ಮಂಡಳಿ ರಚನೆಗೆ ಮುಂದಾದೆ ಎಂದು ಆರಗ ತಿಳಿಸಿದರು.

ರಕ್ಷಣೆ, ಜಾಮರ್: ದೊಡ್ಡ ರೌಡಿಗಳಿಗೆ ಜೈಲುಗಳೇ ಸುರಕ್ಷಿತ ನೆಲೆಗಳು. ಸಣ್ಣ ರೌಡಿ ಜೈಲಿಗೆ ಹೋಗಿ ಹೊರಬಂದ ಬಳಿಕ ದೊಡ್ಡ ರೌಡಿ ಸರ್ಟಿಫಿಕೇಟ್ ಸಿಕ್ಕಿದಂತೆ ಎಂದು ಜೆಡಿಎಸ್​ನ ಅನ್ನದಾನಿ ಹೇಳಿದರೆ, ಮಂಗಳೂರು ಜೈಲಿನಲ್ಲಿ ಜಾಮರ್ ಹಾಕಿದ್ದು, ಅವರ ಕುಟುಂಬ ಸದಸ್ಯರು ಸೇರಿ ಹೊರಗಿನಿಂದ ಯಾರೇ ಕರೆ ಮಾಡಿದರೂ ಹೋಗಲ್ಲ. ಒಳಗಿನವರು ಯಾರಿಗೆ ಬೇಕಾದರೂ ಕರೆ ಮಾಡಬಹುದು ಎಂದು ಯು.ಟಿ.ಖಾದರ್ ಹೇಳಿದಾಗ ನಗುವಿನ ಅಲೆ ಎದ್ದಿತು.

ಹರಿಯಾಣ ಖಜಾನೆಗೆ ಆದಾಯ: ಹರಿಯಾಣದ ಜೈಲುಗಳಲ್ಲಿರುವ ಕೈದಿಗಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಸಂಭಾವನೆ ರೂಪದಲ್ಲಿ ಸ್ವಯಂ ಆದಾಯ ಗಳಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ವಾರ್ಷಿಕ 600 ಕೋಟಿ ರೂ. ಆದಾಯವನ್ನು ಆ ರಾಜ್ಯದ ಖಜಾನೆಗೆ ತುಂಬುತ್ತಿದ್ದು, ಪಂಜಾಬ್​ನಲ್ಲೂ ಇದೇ ವ್ಯವಸ್ಥೆಯಿದೆ ಎಂದು ಆರಗ ಜ್ಞಾನೇಂದ್ರ ಮಾಹಿತಿ ನೀಡಿದರು.

ಜೈಲು ಅಧಿಕಾರಿಗೆ ಲಂಚ ಕೊಟ್ಟಿದ್ದ ಆರಗ!: ಬಳ್ಳಾರಿ ಜೈಲಿನಲ್ಲಿದ್ದ ಚಳವಳಿಕಾರರನ್ನು ಬಿಡಿಸಿಕೊಂಡು ಹೋಗಲು ಬಸ್​ನೊಂದಿಗೆ ಬಂದಿದ್ದೆ. ಕೋರ್ಟ್​ನ ಆದೇಶ ತೋರಿಸಿದರೂ ಜೈಲು ಅಧಿಕಾರಿ ಕ್ಯಾರೆ ಎನ್ನಲಿಲ್ಲ. ಒಂದು ದಿನ ಅಲ್ಲೇ ಉಳಿದರೆ ಬಸ್ ಹೆಚ್ಚುವರಿ ಬಾಡಿಗೆ ತೆರಬೇಕಾದ ದಿಗಿಲು. ಕೊನೆಗೊಬ್ಬರ ಸಲಹೆಯಂತೆ ಜೈಲು ಅಧಿಕಾರಿ ಎದೆ ಮೇಲೆ 8 ಸಾವಿರ ರೂ. ಸುರಿದು ಬಿಡಿಸಿಕೊಂಡೆ ಹೋದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಾನುಭವ ಬಿಚ್ಚಿಟ್ಟರು. ಲಂಚ ಪಡೆದ ಅಧಿಕಾರಿ ಈಗ ಎಲ್ಲಿದ್ದಾರೆ? ಎಂದು ಸ್ಪೀಕರ್ ನಗುತ್ತಲೇ ಕೇಳಿದಾಗ, ಗೃಹ ಸಚಿವನಾದ ಮೇಲೆ ಹುಡುಕಿದೆ ಸರ್, ನಿವೃತ್ತಿಯಾಗಿದ್ದಾರೆ ಎಂದು ತಿಳಿದು ಸುಮ್ಮನಾದೆ ಎಂದು ಆರಗ ಹೇಳಿದಾಗ, ಲಂಚದ ಬಿಸಿ ನಿಮಗೂ ತಟ್ಟಿದೆ ಎಂದು ಪ್ರತಿಪಕ್ಷ ಸದಸ್ಯರು ಉದ್ಗಾರ ತೆಗೆದರು.

ಸೂಲಗಿತ್ತಿ... ಶ್ಯಾನುಭೋಗಿಕೆ: ಸೂಲಗಿತ್ತಿ ಹಾಗೂ ಶಾನುಭೋಗಿಕೆ ಪದಗಳನ್ನು ವಿಧಾನಸಭೆಯಲ್ಲಿ ಪರಸ್ಪರ ಕಾಲೆಳೆಯುವುದಕ್ಕೆ ಬಳಸಿಕೊಂಡ ಕಾಂಗ್ರೆಸ್​ನ ರಮೇಶ್​ಕುಮಾರ್ ಮತ್ತು ಸಚಿವ ಮಾಧುಸ್ವಾಮಿ ಸದನದ ಸ್ವಾರಸ್ಯ ಹೆಚ್ಚಿಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೀಕರ್ ಮುಂದಿಟ್ಟ ವಿಷಯವನ್ನು ನಿಲುವಳಿ ಸೂಚನೆ (ನಿಯಮ 60) ಅಥವಾ ಸಾರ್ವಜನಿಕ ಮಹತ್ವದ ವಿಷಯ (ನಿಯಮ 69)ದಡಿ ಚರ್ಚೆಗೆ ಕೈಗೆತ್ತಿಕೊಳ್ಳುವ ಕುರಿತು ಜಿಜ್ಞಾಸೆ ನಡೆಯಿತು. ಈ ವೇಳೆ ರಮೇಶ್​ಕುಮಾರ್ ಅವರು ಮಾಧುಸ್ವಾಮಿ ಉದ್ದೇಶಿಸಿ, ಕಾನೂನು ಸಚಿವರಾದವರು ಸದನದಲ್ಲಿ ಸ್ಪೀಕರ್, ಸಚಿವರು, ಅಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ಮಧ್ಯೆ ಮಿಡ್​ವೈಫ್ (ಸೂಲಗಿತ್ತಿ) ತರಹ ಕೆಲಸ ಮಾಡಬೇಕೇ ಹೊರತು ವೈಫ್ (ಪತ್ನಿ) ಆಗಬಾರದು. ಆದರೆ ಮಾಧುಸ್ವಾಮಿ ವೈಫ್ ತಾವೇ ಎಂಬಂತೆ ಹೆರಿಗೆಗೆ ಮುಂದಾಗುತ್ತಾರೆ ಎಂದು ಕಾಲೆಳೆದರು. ‘ಅಷ್ಟೇ ಆಗಿದ್ದರೆ ಈ ದೇಶದಲ್ಲಿ ಶಾನುಭೋಗಿಕೆ ನಡೆಯುವುದಕ್ಕೆ ಅವಕಾಶ ಎಲ್ಲಿರುತ್ತಿತ್ತು?’ ಎಂದು ಲಘು ಹಾಸ್ಯ ಧಾಟಿಯಲ್ಲಿ ಮಾಧುಸ್ವಾಮಿ ಪ್ರತಿಕ್ರಿಯಿಸಿದರು.

ಕಾರಾಗೃಹಗಳಲ್ಲಿನ ಅವ್ಯವಸ್ಥೆ, ಅದಕ್ಷತೆ ಹಾಗೂ ಅವ್ಯವಹಾರಗಳ ಹೆಡೆಮುರಿಕಟ್ಟಿ ಗುಣಾತ್ಮಕ ಸುಧಾರಣೆ ತರಲು ಸರ್ಕಾರ ಬದ್ಧವಾಗಿದೆ. ಸದನದಲ್ಲಿ ಪ್ರಸ್ತಾಪಿಸಿದ ಸಲಹೆ-ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು.

| ಆರಗ ಜ್ಞಾನೇಂದ್ರ ಗೃಹ ಸಚಿವ

ಬಂದೀಖಾನೆ, ಬಂದಿಗಳ ಗುರುತಿಸುವಿಕೆ, ದಂಡ ಸಂಹಿತೆ ಮಸೂದೆಗಳ ಮುಖ್ಯಾಂಶ

  1. ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, 2021
  • ಕೈದಿಗಳನ್ನು ಸಶಕ್ತಗೊಳಿಸಿ, ಹೊರಬಂದ ಬಳಿಕ ಗೌರವಯುತ ಜೀವನಕ್ಕೆ ಅವಕಾಶ
  • ಜೈಲುಗಳಲ್ಲಿನ ಮಾನವ ಸಂಪನ್ಮೂಲ, ಕೌಶಲ, ಭೂಮಿ ಇನ್ನಿತರ ಲಭ್ಯತೆಗಳ ಸದ್ಬಳಕೆ
  • ಶಿಕ್ಷಣ, ವೃತ್ತಿಪರ ಅಥವಾ ಕೌಶಲ ತರಬೇತಿ, ಇನ್ನಿತರ ಅಭ್ಯುದಯದ ಯೋಜನೆಗಳು
  • ಉದ್ಯಮ-ವ್ಯವಹಾರ, ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಪ್ರೋತ್ಸಾಹ
  • ಬಂದೀಖಾನೆಗಳ ಸಮರ್ಥ ನಿರ್ವಹಣೆಗಾಗಿ ಸಂಪನ್ಮೂಲಗಳನ್ನು ಮೇಲ್ದರ್ಜೆಗೇರಿಸುವುದು
  • ಯೋಜನೆಗಳ ಅನುಷ್ಠಾನಕ್ಕೆ ಸಿಎಸ್​ಆರ್ ನಿಧಿ ಬಳಕೆ, ಅಗತ್ಯಬಿದ್ದರೆ ಸಾಲ ಪಡೆಯುವುದು
  • ಮಂಡಳಿಗೆ ಬಂದೀಖಾನೆ ಮಂತ್ರಿ, ಅಧ್ಯಕ್ಷ, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಉಪಾಧ್ಯಕ್ಷ, ವಿವಿಧ 10 ಇಲಾಖೆಗಳ ಹಿರಿಯ ಅಧಿಕಾರಿಗಳು ಪದ ನಿಮಿತ್ತ ಸದಸ್ಯರು
  • ಮಂಡಳಿ ಸಭೆಗಳಿಗೆ ಆಡಳಿತ, ವೈದ್ಯಕೀಯ, ವಾಸ್ತುಶಿಲ್ಪ, ಇಂಜಿನಿಯರಿಂಗ್, ಸಮಾಜಶಾಸ್ತ್ರ, ಮನಶಾಸ್ತ್ರ ಸೇರಿ ವಿವಿಧ ಕ್ಷೇತ್ರಗಳ ತಜ್ಞರು ವಿಶೇಷ ಆಹ್ವಾನಿತರು
  • ಕಾರಾಗೃಹಗಳಲ್ಲಿನ ಸಲಹಾ ಸಮಿತಿ, ಕಾಲ ಕಾಲಕ್ಕೆ ಭೇಟಿ ಅಬಾಧಿತ

2. ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021

  • ಒಂದು ತಿಂಗಳ ಶಿಕ್ಷೆಗೆ ಒಳಗಾದ ಕೈದಿಗಳ ಧ್ವನಿಮುದ್ರಿಕೆ, ವಂಶವಾಹಿ (ಡಿಎನ್​ಎ) ರಕ್ತ, ಕಣ್ಣಿನ ಪಾಪೆ ಮಾದರಿ ಸಂಗ್ರಹ
  • ಮ್ಯಾಜಿಸ್ಟ್ರೇಟರ್ ಬದಲಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಪೊಲೀಸ್ ಉಪ ಆಯುಕ್ತರಿಗೆ ಈ ಮಾದರಿ ಸಂಗ್ರಹ ಅಧಿಕಾರ
  • ಕೈದಿಗಳ ಖಾಸಗಿತನ, ದತ್ತಾಂಶಗಳ ಸುರಕ್ಷತೆ ದೃಷ್ಟಿಯಿಂದ ಸಂಗ್ರಹಿಸಿದ ಮಾದರಿಗಳು ಬೆಂಗಳೂರಿನ ಕ್ರಿಮಿನಲ್ ಟ್ರಾ್ಯಕಿಂಗ್ ಸಿಸ್ಟಮ್ಲ್ಲಿ ದಾಸ್ತಾನು
  • ಕೈದಿ ಖುಲಾಸೆಯಾದ 10 ವರ್ಷಗಳು ಅಥವಾ ವ್ಯಕ್ತಿಗೆ 60 ವರ್ಷಗಳ ತುಂಬಿದ ಬಳಿಕ ಸಂಗ್ರಹಿಸಿದ ಮಾದರಿ ಹಾಗೂ ದತ್ತಾಂಶಗಳು ನಾಶಕ್ಕೆ ಆದೇಶ ಇಲ್ಲವೇ ಆತನಿಗೆ ಒಪ್ಪಿಸುವುದು.

3. ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021

  • ವಿಡಿಯಾ ಕಾನ್ಪರೆನ್ಸ್ ಮುಖೇನ ವಿಚಾರಣೆ ಸೆಷನ್ಸ್ ನ್ಯಾಯಾಲಯಗಳಿಗೂ ವಿಸ್ತರಣೆ
  • ಅಪರಾಧ ಆರೋಪಿತ ವಕೀಲನ ಸಮಕ್ಷಮ ಸಾಕ್ಷಿಯ ಸಾಕ್ಷ್ಯವು ಶ್ರವ್ಯ-ದೃಶ್ಯ ವಿದ್ಯುನ್ಮಾನ ವಿಧಾನಗಳ ಮೂಲಕವೂ ದಾಖಲು
  • ವಿಚಾರಣೆ ಕಾಲಕ್ಕೆ ಸಾಕ್ಷ್ಯವನ್ನು ಪೀಠಾಸೀನ ನ್ಯಾಯಾಧೀಶ ಅಥವಾ ಅವರಿಂದ ನೇಮಕವಾದ ಅಧಿಕಾರಿಯು ನ್ಯಾಯಾಧೀಶರ ನಿರ್ದೇಶನಂತೆ ಬರೆದುಕೊಳ್ಳಲು ಅವಕಾಶ
  • ಸಾಕ್ಷ್ಯದ ಯಾವುದೇ ಭಾಗವನ್ನು ಪ್ರಶ್ನೆ ಮತ್ತು ಉತ್ತರದ ರೂಪದಲ್ಲಿ ಬರೆದುಕೊಳ್ಳಬಹುದು ಅಥವಾ ಬರೆದುಕೊಳ್ಳುವಂತೆ ಮಾಡಬಹುದು

ಪಂಚಾಯತ್​ರಾಜ್ ವಿಧೇಯಕ ಪಾಸ್

ಬೆಂಗಳೂರು: ಪ್ರತಿಪಕ್ಷ ಸದಸ್ಯರ ತೀವ್ರ ಆಕ್ಷೇಪ ಹಾಗೂ ಸಭಾತ್ಯಾಗದ ನಡುವೆಯೂ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕ 2021’ ಅನ್ನು ಶುಕ್ರವಾರ ಪರಿಷತ್ ಅಂಗೀಕರಿಸಿತು. ವಿಧೇಯಕ ಮೇಲಿನ ಚರ್ಚೆಯಲ್ಲಿ ವಿಪಕ್ಷ ನಾಯಕ ಎಸ್.ಆರ್.ಹಿರೇಮಠ, ಬಿ.ಕೆ.ಹರಿಪ್ರಸಾದ್, ಎಸ್.ರವಿ, ಆರ್.ಬಿ.ತಿಮ್ಮಾಪುರ ಸೇರಿ ಹಲವು ಸದಸ್ಯರು ವಿಧೇಯಕದ ಅಗತ್ಯತೆ ಪ್ರಶ್ನಿಸಿದರು. ಇದು ಕೇವಲ ಚುನಾವಣೆ ಗೆಲ್ಲುವ ಉದ್ದೇಶಕ್ಕೆ ಸೀಮಿತವಾಗಿದ್ದು, ಚುನಾವಣೆ ಆಯೋಗವನ್ನು ಬಲಹೀನಗೊಳಿಸುವ ಆಡಳಿತ ಪಕ್ಷದ ಹುನ್ನಾರ ಎಂದು ವಿರೋಧಿಸಿದರು.

ಜೆಡಿಎಸ್​ನ ಶ್ರೀಕಂಠೇಗೌಡ, ಅಪ್ಪಾಜಿಗೌಡ ಹಾಗೂ ರಮೇಶಗೌಡ ಮಾತನಾಡಿ, ಜಿಪಂ, ತಾಪಂ ಕ್ಷೇತ್ರಗಳ ಪುನರ್​ವಿಂಗಡನೆಗೆ ಈಗಾಗಲೆ ಬಂದಿರುವ ಆಕ್ಷೇಪಣೆಗಳನ್ನು ಪರಿಶೀಲಿಸಿ, ಚುನಾವಣೆ ನಡೆಸುವ ಬದಲು ಹೀಗೆ ಪ್ರತ್ಯೇಕ ಆಯೋಗ ರಚನೆಗೆ ಮುಂದಾಗಿರುವುದು ಸೂಕ್ತವಲ್ಲ. ಇದರಿಂದ ಸಮಸ್ಯೆಗಳು ಇನ್ನಷ್ಟು ಜಟಿಲಗೊಳ್ಳುವ ಸಾಧ್ಯತೆಯೊಂದಿಗೆ ಅನಿರ್ದಿಷ್ಟ ಅವಧಿಗೆ ಮುಂದೂಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಚಿವರಾದ ಜೆ.ಸಿ. ಮಾಧುಸ್ವಾಮಿ ಹಾಗೂ ಕೆ.ಎಸ್.ಈಶ್ವರಪ್ಪ ಸಮರ್ಥನೆಗೆ ಮುಂದಾದಾಗ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು. ಬಳಿಕ ಚರ್ಚೆ ಮುಂದುವರಿಸಿದ ಎಸ್.ಆರ್.ಪಾಟೀಲ್ ಹಾಗೂ ಎಸ್.ರವಿ, ಸಭೆಯಿಂದ ಹೊರನಡೆದರು. ಬಳಿಕ ಪರಿಷತ್ ವಿಧೇಯಕವನ್ನು ಅಂಗೀಕರಿಸಿತು.

ಬಳಿಕ ಬೃಹತ್ ಬೆಂಗಳುರು ಮಹಾನಗರ ಪಾಲಿಕೆ ಅಧಿನಿಯಮ (ಮೊದಲನೆ ತಿದ್ದುಪಡಿ) 2020ರ 58ನೇ ಪ್ರಕರಣದ ತಿದ್ದುಪಡಿಯಲ್ಲಿ ಮೇಯರ್-ಉಪಮೇಯರ್ ಹುದ್ದೆಗೆ ಸರದಿಯ ಮೇಲೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ-ಎ, ಪ್ರವರ್ಗ-ಎ-ಬಿಯ ಪುರುಷ ಮತ್ತು ಮಹಿಳೆಯರಿಗೆ ಮೀಸಲಿರಿಸುವ ಬಗ್ಗೆ ಪರಿಷತ್​ನಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ ಖಾಸಗಿ ವಿಧೇಯಕ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net