

ಪೇಶಾವರ: ವಾಯವ್ಯ ಪಾಕಿಸ್ತಾನದ ಸ್ವಾತ್ ಜಿಲ್ಲೆಯಲ್ಲಿ ಸುಮಾರು 1,300 ವರ್ಷಗಳ ಹಿಂದೆ ನಿರ್ವಿುಸಲಾದ ಹಿಂದು ದೇವಾಲಯವೊಂದನ್ನು ಪಾಕಿಸ್ತಾನ ಮತ್ತು ಇಟಲಿಯ ಪುರಾತತ್ವ ತಜ್ಞರು ಪತ್ತೆ ಮಾಡಿದ್ದಾರೆ. ಸ್ವಾತ್ ಜಿಲ್ಲೆಯ ಬ್ಯಾರಿಕೋಟ್ ಘುಂಡೈನಲ್ಲಿ ಉತ್ಖನನ ನಡೆಸಿದಾಗ ಈ ಪುರಾತನ ದೇವಾಲಯದ ಇರುವಿಕೆ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಪುರಾತತ್ವ ವಿಭಾಗದ ಮುಖ್ಯಸ್ಥ ಫಜೆಲ್ ಖಾಲಿಕ್, ಪತ್ತೆಯಾಗಿರುವ ದೇವಾಲಯ ವಿಷ್ಣುವಿನದಾಗಿದೆ. ಸುಮಾರು 1,300 ವರ್ಷಗಳ ಹಿಂದೆ ಹಿಂದು ಶಾಹಿ ಅವಧಿಯಲ್ಲಿ ನಿರ್ವಣವಾಗಿದೆ ಎಂದು ತಿಳಿಸಿದ್ದಾರೆ.
ಹಿಂದು ಶಾಹಿ ಅಥವಾ ಕಾಬೂಲ್ ಶಾಹಿ ಎಂಬುದು ಕ್ರಿಸ್ತ ಶಕ 850 ರಿಂದ 1,026ರವರೆಗೆ ಕಾಬೂಲ್ ಕಣಿವೆ (ಪೂರ್ವ ಅಪಘಾನಿಸ್ತಾನ), ಗಾಂಧಾರ (ಪ್ರಸ್ತುತ ಪಾಕಿಸ್ತಾನ) ಹಾಗೂ ಇಂದಿನ ವಾಯವ್ಯ ಭಾರತವನ್ನು ಆಳ್ವಿಕೆ ನಡೆಸಿದ ರಾಜಮನೆತನದ ಹೆಸರಾಗಿದೆ. ಉತ್ಖನನ ವೇಳೆ ದೇವಾಲಯದ ಗಾಳಿ ಗೋಪುರ, ಸ್ನಾನಕ್ಕಾಗಿ ಬಳಸುತ್ತಿದ್ದ ನೀರಿನ ಹೊಂಡ ಮತ್ತು ಇತರ ಅಂಶಗಳೂ ಪತ್ತೆಯಾಗಿವೆ. ಪಾಕಿಸ್ತಾನದ ಸ್ವಾತ್ ಜಿಲ್ಲೆ ಸಾವಿರಾರು ವರ್ಷಗಳ ಹಳೆಯದಾದ ಪುರಾತತ್ವ ಸ್ಥಳಗಳಲ್ಲಿ ಒಂದಾಗಿದೆ. ಇದೇ ಮೊದಲ ಬಾರಿ ಹಿಂದು ಶಾಹಿ ಆಳ್ವಿಕೆಯ ಕಾಲದ ಕುರುಹುಗಳು ಈ ಪ್ರದೇಶದಲ್ಲಿ ಕಂಡು ಬಂದಿವೆ. ಸ್ವಾತ್ನಲ್ಲಿ ಪತ್ತೆಯಾದ ಗಾಂಧಾರ ನಾಗರಿಕತೆಯ ಮೊದಲ ದೇವಾಲಯ ಇದಾಗಿದೆ ಎಂದು ಇಟಲಿಯ ಪುರಾತತ್ವ ತಜ್ಞರ ತಂಡದ ಮುಖ್ಯಸ್ಥ ಡಾ. ಲುಕಾ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ನೈಸರ್ಗಿಕ ಸೌಂದರ್ಯ, ಧಾರ್ವಿುಕ ಪ್ರವಾಸೋದ್ಯಮ, ಪುರಾತತ್ವ ಕುರುಹುಗಳನ್ನು ಹೊಂದಿರುವ ಪ್ರಮುಖ 20 ಪ್ರದೇಶಗಳಲ್ಲಿ ಸ್ವಾತ್ ಜಿಲ್ಲೆ ಕೂಡ ಒಂದಾಗಿದೆ. ಇಲ್ಲಿ ಬೌದ್ಧ ಧರ್ಮದ ಹಲವು ಪೂಜಾ ಸ್ಥಳಗಳೂ ಇವೆ.
ಕಳೆದ ವರ್ಷ ನಗರ ಪತ್ತೆ
ಪಾಕಿಸ್ತಾನದ ವಾಯವ್ಯ ಭಾಗದಲ್ಲಿ 2019ರಲ್ಲಿ ಜಂಟಿ ಉತ್ಖನನ ನಡೆಸಿದ್ದ ಪಾಕ್ ಹಾಗೂ ಇಟಲಿಯ ಪುರಾತತ್ವ ತಜ್ಞರು ಸುಮಾರು 3000 ವರ್ಷಗಳಷ್ಟು ಹಳೆಯ ನಗರವೊಂದನ್ನು ಪತ್ತೆಮಾಡಿದ್ದರು. ಸ್ವಾತ್ ಜಿಲ್ಲೆಯ ಬರಿಕೋಟ್ ತಾಲೂಕಿ ನಲ್ಲಿ ಬಜೀರಾ ಎಂಬ ನಗರವನ್ನು ಶೋಧಿಸಲಾಗಿತ್ತು. ಇದು ಅಲೆಕ್ಸಾಂಡರ್ನ ದಾಳಿಗೆ ತುತ್ತಾದ ಪ್ರದೇಶ ಎಂದು ತಜ್ಞರು ತಿಳಿಸಿದ್ದರು. ಬಜೀರಾ ನಗರದ ಸ್ಥಳದಲ್ಲಿ ಕೆಲ ಹಿಂದು ದೇವಾಲಯಗಳು, ಹಳೆಯ ನಾಣ್ಯಗಳು, ಸ್ತೂಪ, ಮಡಿಕೆಗಳು ಮತ್ತು ಆಯುಧಗಳ ಕುರುಹುಗಳು ಪತ್ತೆಯಾಗಿದ್ದವು.
ಪಾಕಿಸ್ತಾನದ ಹಿಂದು ದೇವಾಲಯಗಳು