

ಬೆಂಗಳೂರು: ಗೌರಿ-ಗಣೇಶ ಹಬ್ಬದ ಪ್ರಯುಕ್ತ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಬಲವಂತವಾಗಿ ಚಂದಾ ವಸೂಲಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ದಯಾನಂದ್, ಸೆ. 7ರಂದು ಸಂಘ-ಸಂಸ್ಥೆಗಳು ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿವಿಧ ದಿನಗಳಲ್ಲಿ ಮೆರವಣಿಗೆ ಮಾಡಿ ವಿಸರ್ಜಿಸಲಿದ್ದಾರೆ. ಇದರ ನೆಪದಲ್ಲಿ ಬಲವಂತವಾಗಿ ಚಂದಾ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಸ್ವಯಂಪ್ರೇರಣೆಯಿಂದ ಚಂದಾ ಕೊಟ್ಟರಷ್ಟೇ ಸ್ವೀಕರಿಸಬೇಕು. ಈ ಬಗ್ಗೆ ಸಾರ್ವಜನಿಕರು ‘ನಮ್ಮ 112’ಗೆ ಕರೆ ಮಾಡಿ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಶಾಂತಿ ಸೌಹಾರ್ದದಿಂದ ಹಬ್ಬ ಆಚರಿಸುವ ಆಶಯ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ, ನಗರ ಪೊಲೀಸ್ ಜಂಟಿಯಾಗಿ ಸಭೆ ಮಾಡಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಗಣಪನ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು ಬಿಬಿಎಂಪಿ 63 ಏಕಗವಾಕ್ಷಿ ಕೇಂದ್ರಗಳನ್ನು ತೆರೆದಿದೆ. ಪ್ರತಿ ಕೇಂದ್ರಕ್ಕೂ ನೋಡಲ್ ಅಧಿಕಾರಿಯಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವ ಸಮಿತಿ/ ಆಯೋಜಕರಿಗೆ 21 ಮಾರ್ಗಸೂಚಿ ನೀಡಲಾಗಿದ್ದು, ಅವುಗಳನ್ನು ಪಾಲನೆ ಮಾಡಬೇಕೆಂದು ದಯಾನಂದ್ ಸೂಚಿಸಿದ್ದಾರೆ.
* ಆಯೋಜನಕರು ಅಪರಾಧ ಕೃತ್ಯ ನಡೆಯದಂತೆ ನೋಡಿಕೊಳ್ಳಬೇಕು. ನಡೆದರೆ ಅವರೇ ಜವಾಬ್ದಾರರು.
* ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು. ಸಾರ್ವಜನಿಕರ ಮತ್ತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುವ ಸ್ಥಳದಲ್ಲಿ ಅವಕಾಶವಿಲ್ಲ.
* ಚಪ್ಪರ- ಶಾಮಿಯಾನ ಹಾಕಲು ಬಿಬಿಎಂಪಿಯಿಂದ ಪರವಾನಗಿ ಪಡೆಯಬೇಕು.
* ವಿವಾದಿತ ಸ್ಥಳಗಳಲ್ಲಿ ಅವಕಾಶವಿಲ್ಲ. ಸ್ಥಳದ ಮಾಲೀಕರ ಅನುಮತಿ ಪಡೆದು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.
* ಹೈಕೋರ್ಟ್ ನಿರ್ದೇಶನದ ಅನ್ವಯ ಫ್ಲೆಕ್ಸ್ ಮತ್ತು ಬೋರ್ಡ್‌ಗಳ ಅಳವಡಿಕೆಗೆ ನಿರ್ಬಂಧವಿರಲಿದೆ. ಬಿಬಿಎಂಪಿ ಮಾರ್ಗಸೂಚಿ ಪಾಲನೆ ಕಡ್ಡಾಯ.
* ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿ ಅನುಷ್ಠಾನ ಕಡ್ಡಾಯ.
* ಆಯೋಜಕರ ಪರವಾಗಿ ದಿನದ 24 ತಾಸು ಇಬ್ಬರು ಕಾರ್ಯಕರ್ತರು ಇರಬೇಕು.
* ಸಿಸಿ ಕ್ಯಾಮರಾ ಅಳವಡಿಕೆ, ಬೆಂಕಿ ನಂದಿಸುವ ಸಾಮಾಗ್ರಿ ಇರಿಸಬೇಕು. ಪೊಲೀಸ್ ಠಾಣೆ, ಅಗ್ನಿಶಾಮಕ ದಳದ ದೂರವಾಣಿ ಸಂಖ್ಯೆ, ಪದಾಧಿಕಾರಿಗಳ ಮೊಬೈಲ್ ಸಂಖ್ಯೆ ಪ್ರದರ್ಶಿಸಬೇಕು.
* ಸ್ಥಳದಲ್ಲಿ ಮತ್ತು ಸುತ್ತಮುತ್ತ ಕಟ್ಟಿಗೆ, ಉರುವಲು, ಸೀಮೆಎಣ್ಣೆ ಸಾಧನಗಳನ್ನು ಇಡಬಾರದು ಹಾಗೂ ಅಡುಗೆ ಮಾಡಬಾರದು.
* ವಿದ್ಯುತ್ ಮತ್ತು ದೀಪಾಲಂಕಾರ ಸಂಬಂಧ ಬೆಸ್ಕಾಂ ಅನುಮತಿ, ಅಗ್ನಿಶಾಮಕ ದಳ ಹಾಗೂ ಸಂಚಾರ ಪೊಲೀಸರ ನಿರಪೇಕ್ಷಣಾ ಪತ್ರ (ಎನ್‌ಒಸಿ) ಕಡ್ಡಾಯ.
* ಸಾರ್ವಜನಿಕರ ಆಗಮನ ಮತ್ತು ನಿರ್ಗಮನಕ್ಕೆ ಸೂಕ್ತ ವ್ಯವಸ್ಥೆ. ಜನದಟ್ಟಣೆ ನಿಯಂತ್ರಿಸಲು ಸ್ವಯಂಸೇವಕರ ನಿಯೋಜನೆ, ಬ್ಯಾರಿಕೇಡ್ ಅಳವಡಿಸಬೇಕು.
* ಹಿರಿಯ ನಾಗರಿಕರು, ಶಾಲಾಮಕ್ಕಳಿಗೆ ಹಾಗೂ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ಮಾತ್ರ ಬಳಸಬೇಕು. ಡಿಜೆ ಸಿಸ್ಟಂ ಅಳವಡಿಕೆಗೆ ಅವಕಾಶವಿಲ್ಲ.
* ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಆಯೋಜಕರು, ಸ್ವಯಂಸೇವಕರಿಗೆ ಐಡಿ ಕಾರ್ಡ್, ಬ್ಯಾಡ್ಜ್, ಟೀಶರ್ಟ್ ಅಥವಾ ಕ್ಯಾಪ್‌ಗಳನ್ನು ನೀಡಬೇಕು.
* ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೂಕ್ತ ಬಂದೋಬಸ್ತ್‌ಗೆ ಪೊಲೀಸರ ಸಹಕಾರ ಕಡ್ಡಾಯ.
* ಮೆರವಣಿಗೆಯು ಸೂಕ್ಷ್ಮ ಸ್ಥಳ, ಅತಿಸೂಕ್ಷ್ಮ ಸ್ಥಳ ಹಾಗೂ ಪ್ರಾರ್ಥನಾ ಸ್ಥಳಗಳ ಎದುರು ಸಾಗುವಾಗ ಸಿಡಿಮದ್ದು, ಪಟಾಕಿ ಸಿಡಿಸಬಾರದು, ಕರ್ಪೂರ ಹಚ್ಚಬಾರದು.
* ಮೆರವಣಿಗೆ ನಿಗದಿತ ಮಾರ್ಗದಲ್ಲೇ ಸಾಗಬೇಕು. ಮಾರ್ಗ ಬದಲಾಯಿಸಿದರೆ ಆಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
* ಮೆರವಣಿಗೆಯು ರಾತ್ರಿ 10 ಗಂಟೆಯೊಳಗೆ ಮುಗಿಯುವಂತೆ ನೋಡಿಕೊಳ್ಳಬೇಕು. ವಿದ್ಯುತ್ ವೈರ್‌ಗಳು, ಮರದ ಕೊಂಬೆಗಳ ಬಗ್ಗೆ ಗಮನಹರಿಸಬೇಕು.