

ಕಿರುವಾರ ಎಸ್. ಸುದರ್ಶನ್ ಕೋಲಾರ
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಡಿಸಿಸಿ ಬ್ಯಾಂಕಿನಿಂದ ಸಾಲ ಸೌಲಭ್ಯ ದೊರೆಯದ ಹಿನ್ನೆಲೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಉಳಿತಾಯ ಹಾಗೂ ಸಾರ್ವಜನಿಕರು ಇಟ್ಟಿರುವ ಠೇವಣಿ ಹಣವನ್ನು ಹಿಂಪಡೆಯಲು ಮುಂದಾಗಿದ್ದಾರೆ.
ಎರಡೂ ಜಿಲ್ಲೆಯ ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬುತ್ತಿದ್ದ ಬ್ಯಾಂಕ್‌ನಿಂದ ಈಗ ಯಾವುದೇ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಇದರಿಂದಾಗಿ ಬಹುತೇಕರು ಮತ್ತೆ ಖಾಸಗಿ ಲೇವಾದೇವಿದಾರರಿಂದ ಬಡ್ಡಿಗೆ ಸಾಲ ಪಡೆಯುವ ಪರಿಸ್ಥಿತಿ ಎದುರಾಗಿದೆ.
ಕೋಲಾರ-ಚಿಕ್ಕಬಳ್ಳಾಪುರ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸಾಲ ಪಡೆದು ಪ್ರಾಮಾಣಿಕವಾಗಿ ಮರುಪಾವತಿ ಮಾಡಿರುವ ಸ್ತ್ರೀಶಕ್ತಿ ಸಂಘಗಳಿಗೆ ಆಡಳಿತಾವಧಿ ಮುಗಿದ ಕಳೆದ ಒಂದೂವರೆ ವರ್ಷದಿಂದ ಸಾಲ ಸೌಲಭ್ಯ ಸಿಕ್ಕಿಲ್ಲ. ಮುಂದುವರಿದು, ಬ್ಯಾಂಕಿಗೆ ಚುನಾವಣೆ ಆಗುವವರೆಗೆ ಸಾಲ ಸೌಲಭ್ಯ ದೊರೆಯುವುದಿಲ್ಲ ಎಂಬ ಅನುಮಾನ ಸ್ತ್ರೀಶಕ್ತಿ ಸಂಘಗಳ ಸದಸ್ಯರಲ್ಲಿ ವ್ಯಕ್ತವಾಗಿದ್ದು, ಇದರಿಂದಾಗಿ ಸೊಸೈಟಿ, ವಿವಿಧ ಶಾಖೆಗಳಲ್ಲಿ ಇಟ್ಟಿರುವ ಉಳಿತಾಯ ಹಣ ಹಿಂಪಡೆಯುತ್ತಿದ್ದಾರೆ.
ಕ್ರಮ ಕೈಗೊಳ್ಳದ ಜನಪ್ರತಿನಿಧಿಗಳು
ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗದ ಮಹಿಳೆಯರು 10 ರಿಂದ 10 ಮಂದಿ ಗುಂಪು ಕಟ್ಟಿಕೊಂಡು ಉಳಿತಾಯ ಹಣವನ್ನು ಕೃಷಿ ಪತ್ತಿನ ಪ್ರಾಥಮಿಕ ಸಹಕಾರ ಸಂಘಗಳಲ್ಲಿ, ಹತ್ತಿರವಿರುದ ಶಾಖೆಗಳಲ್ಲಿ ಠೇವಣಿ ಇಡುತ್ತಿದ್ದರು. ಠೇವಣಿಗೆ ತಕ್ಕಂತೆ ಸಾಲ ಪಡೆದುಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳುತ್ತಿದ್ದರು. ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಸ್ತ್ರೀಶಕ್ತಿ ಸಂಘಗಳನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡಿದ್ದರು. ಆದರೀಗ ಒಂದೂವರೆ ವರ್ಷದಿಂದ ಸಾಲ ಮಂಜೂರು ಮಾಡದಿದ್ದರೂ, ಜನಪ್ರತಿನಿಧಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಮಹಿಳೆಯರ ಸಂಕಷ್ಟಕ್ಕೆ ಸ್ಪಂದಿಸಲು ಯಾರೊಬ್ಬರು ಕಾಳಜಿ ತೋರದೆ ಇರುವುದು ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.
ಆಡಳಿತ ಮಂಡಳಿ ಅಽಕಾರದಲ್ಲಿ ಇದ್ದಾಗ ಹೊಸ ಸಾಲ ವಿತರಣೆ, ನವೀಕರಣ ಸಾಲ ವಿತರಣೆಯು ಆಗುತ್ತಿತ್ತು, ವಿತರಣೆ, ವಸೂಲಿಗಾಗಿ ತಾಲೂಕುವಾರು ಅಧಿಕಾರಿ, ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು. ಆದರೆ ಈಗ ಇದ್ಯಾವುದು ನಡೆಯದೆ ಇರುವುದು ಇನ್ನು ಸಾಲ ದೊರೆಯುವುದಿಲ್ಲ ಎಂಬ ಸಂಶಯ ವ್ಯಕ್ತವಾಗಿದೆ.
ಚುನಾವಣೆಗೆ ಅಡ್ಡಿ ಏಕೆ?
ಬ್ಯಾಂಕಿನ ಚುನಾವಣೆಯ ವಿಷಯವು ಆಡಳಿತ ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣಗಳಿಗೆ ಪ್ರತಿಷ್ಠೆಯಾಗಿದೆ. ಸಾಲ ಮನ್ನಾ ಸಂದರ್ಭದಲ್ಲಿ ನಕಲಿ ಸ್ತ್ರೀಶಕ್ತಿ ಸಂಘ ರಚನೆ ಮಾಡಿ ಸಾಲ ನೀಡಿದ್ದು, ಅವ್ಯವಹಾರ ನಡೆದಿದ್ದು, ಮರು ಲೆಕ್ಕ ಪರಿಶೋಧನೆಯಾಗಬೇಕು ಎಂದು ಆರೋಪಿಸಿ ತನಿಖೆಗಾಗಿ ಒಂದು ಬಣ ಸರ್ಕಾರದಿಂದ ಆದೇಶ ತಂದಿದೆ. ಇದಕ್ಕೆ ಇನ್ನೊಂದು ಬಣದವರು ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ಚುನಾವಣೆ ನಡೆಸಬೇಕು ಎಂದು ಮತ್ತೊಂದು ಬಳವು ಕೋರ್ಟ್ ಮೋರೆ ಹೋಗಿದ್ದು, ಸರ್ಕಾರದ ಮಟ್ಟದಿಂದ ಪ್ರಭಾವ ಬೀರಿ ಚುನಾವಣೆ ಮುಂದೂಡಿಸಲಾಗುತ್ತಿದೆ. ಇದು ಒಂದೇ ಪಕ್ಷದಲ್ಲಿನ ಎರಡು ಗುಂಪುಗಳ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.
ಮಹಿಳೆಯರ ಮನವಿಗಿಲ್ಲ ಸ್ಪಂದನೆ
ಈಗಾಗಲೇ ಸಾಲ ಪಡೆದು ಸಕಾಲಕ್ಕೆ ಕಂತುಗಳನ್ನು ಮರುಪಾವತಿಸಿರುವ ಗುಂಪುಗಳಿಗೆ ಸಾಲ ಮಂಜೂರು ಮಾಡಬೇಕು ಎಂದು ವ್ಯಾಪಕ ಒತ್ತಾಯ ವ್ಯಕ್ತವಾಗಿದ್ದರೂ ಬ್ಯಾಂಕ್ ಅಽಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ.
ಮಹಿಳೆಯರು ಎಲ್ಲ ತಾಲೂಕುಗಳ ಶಾಸಕರನ್ನು ಭೇಟಿ ನೀಡಿ ಸಾಲ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದರೂ ಯಾವ ಸ್ಪಂದನೆಸಿಕ್ಕಿಲ್ಲ.
ಕುಸಿದ ಮಹಿಳಾ ಸಂಘಗಳ ಸಂಖ್ಯೆ
ಬ್ಯಾಂಕ್‌ನಿಂದ ಸತತವಾಗಿ ಮೂರು ವರ್ಷಗಳಿಂದ ಮಹಿಳಾ ಸಂಘಗಳಿಗೆ ನೀಡಲಾಗುತ್ತಿದ್ದ ಸಾಲವು 2023-24ನೇ ಸಾಲಿನಲ್ಲಿ ಸಂಘಗಳ ರಚನೆ ಕಡಿಮೆಯಾಗಿದೆ. 2021-22ರಲ್ಲಿ 7,643 ಸಂಘಗಳಿಗೆ, 2022-23ರಲ್ಲಿ 12,258 ಹಾಗೂ 2023-24ರಲ್ಲಿ 772 ಸಂಘಗಳಿಗೆ ಸಾಲ ನೀಡಲಾಗಿದೆ. ಆದರೆ ಕಳೆದ 2-2 ವರ್ಷಗಳಿಂದ ಸಾಲ ಪಡೆದುಕೊಂಡಿರುವ ಮಹಿಳಾ ಸಂಘಗಳಿಂದ ಸಾಲ ಮರುಪಾವತಿಯಾಗಿದ್ದು, ಬಾಕಿ ಉಳಿದುಕೊಂಡಿರುವ ಸಂಘಗಳಿಗೆ ಸಾಲ ನೀಡಲಾಗಿದೆ.
ಕೋಟ್…
ಆಡಳಿತ ಮಂಡಳಿಯಿದ್ದ ಸಂದರ್ಭದಲ್ಲಿ ಮಹಿಳೆಯರಿಗೆ, ರೈತರಿಗೆ ವಿತರಣೆ ಮಾಡುತ್ತಿರುವ ಸಾಲ ವಿತರಣೆ ಕಾರ್ಯಕ್ರಮವನ್ನು ಆಡಳಿತಾಽಕಾರಿ ಮುಂದುವರಿಸಬೇಕು. ಸರ್ಕಾರ ಕೂಡಲೇ ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಕ್ರಮಕೈಗೊಳ್ಳಬೇಕು.-ಕೆ.ವೈ.ನಂಜೇಗೌಡ
ಶಾಸಕ, ಮಾಲೂರು
ಕೋಟ್…
ನಾವು ಎರಡು ಬಾರಿ ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆದು ಪ್ರಮಾಣಿಕವಾಗಿ ಮರು ಪಾವತಿ ಮಾಡಿದ್ದೇವೆ, ಸಾಲ ಕೊಡುವಂತೆ ಅಧಿಕಾರಿಗಳನ್ನು ಕೇಳಿದರೆ ಚುನಾವಣೆಯ ನೆಪ ಹೇಳುತ್ತಾರೆ. ಸಾಲ ಸಿಗುತ್ತದೆ ಎಂಬ ನಿರೀಕ್ಷೆಯಿತ್ತು. ಈಗ ಅನಿವಾರ್ಯವಾಗಿ ಖಾಸಗಿ ವ್ಯಕ್ತಿಗಳಿಂದ ಬಡ್ಡಿಗೆ ಸಾಲ ಪಡೆಯುವ ಪರಿಸ್ಥಿತಿ ಎದುರಾಗಿದೆ.- ಹೆಸರು ಹೇಳಲು ಇಚ್ಛಿಸದ
ಮಹಿಳಾ ಸಂಘದ ಸದಸ್ಯೆ