ನಿಗಮ, ಮಂಡಳಿ ಆಕಾಂಕ್ಷಿಗಳಿಗೆ ನಿರಾಸೆ; ಮೊದಲ ಬಾರಿ ಶಾಸಕರಾದವರಿಗೂ ಅವಕಾಶ ಇಲ್ಲ!

Congress
Published on

ಬೆಂಗಳೂರು: ನಿಗಮ, ಮಂಡಳಿ ನೇಮಕ ವಿಷಯದಲ್ಲಿ ಪಕ್ಷ ಕೈಗೊಂಡ ನಿರ್ಧಾರದಿಂದ ಕಾಂಗ್ರೆಸ್ ಸಾಕಷ್ಟು ಆಕಾಂಕ್ಷಿಗಳಿಗೆ ನಿರಾಸೆ ಖಚಿತವಾಗಿದೆ.

ಮೊದಲ ಹಂತದಲ್ಲಿ ಶಾಸಕರಿಗೆ ಮಾತ್ರ ಎಂದು ತೀರ್ಮಾನವಾಗಿದೆ. ಕಾರ್ಯಕರ್ತರಿಗೆ ಯಾವಾಗ ಅವಕಾಶ ಎಂಬುದು ನಿರ್ಧಾರವಾಗಿಲ್ಲ, ಹೀಗಾಗಿ ಒಂದು ವರ್ಗದವರಿಗೆ ಅನಿಶ್ಚಿತತೆ ಮುಂದುವರಿದಿದೆ.

ಹಾಗೆಯೇ, ನಿಗಮ ಮಂಡಳಿ ಮೊದಲ ಪಟ್ಟಿಯಲ್ಲಿ ನೂತನ ಶಾಸಕರಿಗೆ ಅವಕಾಶವಿಲ್ಲ ಎಂಬ ತೀರ್ಮಾನದಿಂದ ಹಲವು ಆಕಾಂಕ್ಷಿಗಳು ಅವಕಾಶಕ್ಕಾಗಿ ಇನ್ನಷ್ಟು ಕಾಯುವುದು ಅನಿವಾರ್ಯ. ಜತೆಗೆ 2023ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಕೆಲವರೂ ಸಹ ನಿಗಮ, ಮಂಡಳಿಯಲ್ಲಿ ಸ್ಥಾನ ಪಡೆಯುವ ಮೂಲಕ ರಾಜಕಾರಣದಲ್ಲಿ ಸಕ್ರಿಯರಾಗಿ ಇರಲು ಬಯಸಿದ್ದರು. ಅವರಿಗೂ ಸಹ ಪಕ್ಷದ ತೀರ್ಮಾನ ನಿರಾಸೆ ಮೂಡಿಸಿದೆ.

ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ವಿಚಾರವಾಗಿ ಮಾಧ್ಯಮಗಳು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಲ್ಲಿ ಪ್ರತಿಕ್ರಿಯೆ ಬಯಸಿದಾಗ, ಮೊದಲ ಪಟ್ಟಿಯಲ್ಲಿ ಮೊದಲ ಬಾರಿಗೆ ಶಾಸಕರಾದವರಿಗೆ ಅವಕಾಶ ನೀಡಿಲ್ಲ. ಮುಂದಿನ ಪಟ್ಟಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಲು ತೀರ್ಮಾನವಾಗಿದೆ ಎಂದರು.

ನಿಗಮ ಮಂಡಳಿ ನೇಮಕಾತಿ, ಕಾರ್ಯಕರ್ತರಿಗೂ ಅವಕಾಶ ಸಂಬಂಧ ನಾನು ಸಿದ್ದರಾಮಯ್ಯ ಹಾಗೂ ಸುರ್ಜೆವಾಲ ಅವರು ಮಾತನಾಡಿದ್ದೇವೆ. ನಾವು ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ನೀಡಿದ್ದು ಅವರು ಅದನ್ನು ದೆಹಲಿಗೆ ತೆಗದುಕೊಂಡು ಹೋಗಿದ್ದಾರೆ. ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದ ನಂತರ ಹೈಕಮಾಂಡ್ ನಾಯಕರು ನಮ್ಮ ಪಟ್ಟಿಯನ್ನು ಪರಿಶೀಲಿಸಿ ಎರಡು- ಮೂರು ದಿನಗಳಲ್ಲಿ ಅಂತಿಮ ಪಟ್ಟಿಯನ್ನು ರವಾನಿಸುತ್ತಾರೆ ಎಂದು ಹೇಳಿದರು.

ನಾವು ನೀಡಿದ ಪಟ್ಟಿಯನ್ನು ಪಕ್ಷದ ಹೈಕಮಾಂಡ್ ಪರಿಶೀಲಿಸಬೇಕು. ಏಕೆಂದರೆ ಚುನಾವಣೆ ಹೊತ್ತಿನಲ್ಲಿ ಒಂದಷ್ಟು ಮಾತುಗಳನ್ನು ಕೊಟ್ಟಿರುತ್ತಾರೆ. ಹೈಕಮಾಂಡ್ ಯಾರಿಗೆ ಏನು ಸೂಚನೆ ನೀಡಿತ್ತೊ ಅದರ ಪ್ರಕಾರ ಅಂತಿಮ ಪಟ್ಟಿ ಸಿದ್ಧವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net