

ಕೋಲಾರ: ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲಿ ಕಾರ್ಯಕರ್ತರು, ಮುಖಂಡರ ಒಮ್ಮತ ಪಡೆದುಕೊಂಡಿಲ್ಲ. ಇದರಿಂದಾಗಿ ಮುಂದಿನ ದಿನಗಳಲ್ಲಿ ಪಕ್ಷದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಭೇಟಿ ನೀಡಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಅಧ್ಯಕ್ಷರ ನೇಮಕ ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತ ಕೆಂಬೋಡಿ ನಾರಾಯಣಸ್ವಾಮಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಜಿಲ್ಲಾ ಬಿಜೆಪಿ ವ್ಯವಸ್ಥೆ ಹಾಳಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯು ಮತ್ತಷ್ಟು ಹಾಳಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಎಂಎಲ್ಸಿ ಅಶ್ವತ್ಥ್ನಾರಾಯಣ ಅವರು ತಪ್ಪು ಮಾಡಿದ್ದಾರೆ. ಅನುಕೂಲಕ್ಕೆ ತಕ್ಕಂತೆ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದರೆ ಕಾರ್ಯಕರ್ತರು, ಪಕ್ಷ ಬೆಳೆಯುವುದು ಹೇಗೆ?, ರಾಜ್ಯಾಧ್ಯಕ್ಷರೇ ಒಂದು ಬಾರಿ ಕೋಲಾರಕ್ಕೆ ಬಂದು ಇಲ್ಲಿ ಏನಾಗಿದೆ ಎಂಬುದನ್ನು ನೋಡಲಿ. ಬೇರೆ ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಇದೆ, ಅದರ ಬಗ್ಗೆ ನಾವು ಮಾತನಾಡುವುದಿಲ್ಲ. ವ್ಯವಸ್ಥೆ ಸರಿಪಡಿಸಿ ಎಲ್ಲರ ಅಭಿಪ್ರಾಯ ಪಡೆದು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ನಡೆದ ಪಕ್ಷದ ಚುನಾವಣೆ ಪ್ರಕ್ರಿಯೆಯನ್ನು ಯಾರ ಗಮನಕ್ಕೂ ತಂದಿಲ್ಲ. ಬೆರಳೆಣಿಕೆಯಷ್ಟು ಮಂದಿಗೆ ಅವಕಾಶ ನೀಡುವ ಉದ್ದೇಶದಿಂದ ತೀರ್ಮಾನ ಕೈಗೊಂಡಿದ್ದಾರೆ. ಇದು ಪಕ್ಷದ ಕಾರ್ಯಕರ್ತರಲ್ಲಿ ನೋವುಂಟು ಮಾಡಿದೆ. ಇಂತಹವರನ್ನೇ ಅಧ್ಯಕ್ಷರನ್ನಾಗಿ ಮಾಡಿ ಎಂದು ನಾವು ಹೇಳುತ್ತಿಲ್ಲ. ಎಲ್ಲರ ಗಮನಕ್ಕೆ ತಂದು ಒಮ್ಮತದಿಂದ ನೇಮಕ ಮಾಡಿದರೆ ಎಲ್ಲರಿಗೂ ಸಮಾಧಾನವಾಗುತ್ತದೆ. ಆದರೆ, ಕೆಲವರು ನಂದೇ ಬಿಜೆಪಿ, ನಾನೆ ಕಟ್ಟಿದ್ದು ಎಂದು ಹೇಳಿಕೊಳ್ಳುವವರು ಮಾತ್ರ ಅವರಿಗೆ ಬೇಕಾದವರನ್ನು ಕರೆಯಿಸಿಕೊಂಡು ಪ್ರಕ್ರಿಯೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜ.16ರಂದು ಚುನಾವಣಾ ಪ್ರಭಾರಿಯಾಗಿ ಶಿವಕುಮಾರ್, ಸಂಘಟನೆ ಉಸ್ತುವಾರಿಗಳಾಗಿ ಅಶ್ವತ್ಥನಾರಾಯಣ, ನರೇಂದ್ರರಂಗಪ್ಪ ಆಗಮಿಸಿದ್ದರು. ಆದರೆ, ಯಾರಿಗೂ ಮಾಹಿತಿಯನ್ನೇ ನೀಡಿಲ್ಲ ಎಂದು ದೂರಿದರು.
ತಾಲೂಕು, ಜಿಲ್ಲಾಧ್ಯಕ್ಷರ ಆಕಾಂಕ್ಷಿಗಳ ಪಟ್ಟಿ ಕೇಳಿದ್ದರು. ತಲಾ 3 ತಾಲೂಕುಗಳ ಪಟ್ಟಿ ಪಡೆದು ಮಾತನಾಡುವುದಾಗಿ ಹೇಳಿ ಕೊನೆಗೆ ಹೊರಟು ಹೋದರು. ಜಿಲ್ಲಾಧ್ಯಕ್ಷರ ಆಕಾಂಕ್ಷಿಗಳ ಪಟ್ಟಿ ಪಡೆಯದೇ ಹೋಗಿದ್ದರು. ನಾನು ರಾಜ್ಯಕ್ಕೆ ಕರೆ ಮಾಡಿದಾಗ ಶುಕ್ರವಾರ ಘೋಷಣೆ ಎಂದು ಹೇಳಿದ್ದರು. ಆದರೆ ಬುಧವಾರವೇ ಘೋಷಣೆ, ಚುನಾವಣಾಧಿಕಾರಿ ಶಿವಕುಮಾರ್ ಅವರನ್ನೇ ಬದಲಾಯಿಸಲಾಗಿದೆ. ಬಿಳಿ ಚೀಟಿಯಲ್ಲಿ ಜಿಲ್ಲಾಧ್ಯಕ್ಷರ ಹೆಸರು ಬರೆದು ಘೋಷಣೆ ಮಾಡಲಾಗಿದೆ ಎಂಬುದು ಬೇಸರ ತಂದಿದೆ ಎಂದರು.
ಬಾಕ್ಸ್..
* ನೂತನ ಅಧ್ಯಕ್ಷರ ವಿರುದ್ಧ ಆಕ್ರೋಶ
ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕುಡಾ ಅಧ್ಯಕ್ಷ ಇವೆಲ್ಲವನ್ನೂ ಒಬ್ಬರಿಗೇ ನೀಡಬೇಕಾ? ವಿಸಿಟಿಂಗ್ ಕಾರ್ಡ್ಗೆ ಮಾತ್ರ ಪ್ರಧಾನ ಕಾರ್ಯದರ್ಶಿಯಾ?, ಸಭೆಯ ಮಾಹಿತಿಯನ್ನು ಜಿಲ್ಲಾಧ್ಯಕ್ಷರು ನೀಡಬೇಕೆಂದರೆ ಪ್ರಧಾನ ಕಾರ್ಯದರ್ಶಿಗಳು ಏನು ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ನೂತನ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ವಿರುದ್ಧ ಕೆಂಬೋಡಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.