ಗಣತಿ ಕಾರ್ಯದಿಂದ ವಿನಾಯಿತಿಗೆ ಅಂಗವಿಕಲ ನೌಕರರ ಮನವಿ

caste census
Published on

ಬೆಂಗಳೂರು: ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಅಂಗವಿಕಲರನ್ನು ನೇಮಿಸಿರುವುದಕ್ಕೆ ಕರ್ನಾಟಕ ರಾಜ್ಯ ವಿಕಲಚೇತನ ನೌಕರರ ಸಂಘವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಅಂಗವಿಕಲರು ಸರ್ಕಾರಿ ಕಚೇರಿ ಬಂದು ಕಾರ್ಯನಿರ್ವಹಿಸಿ ಮನೆಗೆ ತೆರಳುತ್ತಾರೆ. ಆದರೆ, ಸಮೀಕ್ಷೆಗೆ ನೇಮಿಸಿರುವುದರಿಂದ ಕಟ್ಟಡಗಳ ಮೆಟ್ಟಿಲುಗಳನ್ನು ಹತ್ತಲು ಹರಸಾಹಸ ಮಾಡಬೇಕಿದೆ. ಅಲ್ಲದೆ, ಬಹುತೇಕ ಅಂಗವಿಕಲರಿಗೆ ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಿಲ್ಲ. ಸಮೀಕ್ಷೆಗೆ ಹೋದಂತಹ ಸಮಯದಲ್ಲಿ ಹೇಗೆ ಸಮೀಕ್ಷಾ ಕಾರ್ಯವನ್ನು ಮಾಡುವುದು ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಗ್ರೇಟರ್ ಬೆಂಗಳೂರಿನ ವ್ಯಾಪ್ತಿಯ ವಿವಿಧ ಇಲಾಖೆಯಲ್ಲಿ ಸುಮಾರು 300 ಅಂಗವಿಕಲ ನೌಕರರು ಕೆಲಸ ಮಾಡುತ್ತಿದ್ದು,ಇವರಲ್ಲಿ ಸುಮಾರು 45 ವಿಕಲಚೇತನ ನೌಕರರನ್ನು ಸಮೀಕ್ಷೆಗೆ ನೇಮಕ ಮಾಡಲಾಗಿದೆ. ಅಂಗವಿಕಲ ನೌಕರರು ತಮ್ಮ ವೃತ್ತಿಗೆ ಬರುವಾಗ ಅವರ ವಿವಿಧ ಅಂಗವೈಕಲ್ಯಗೆ ಅನುಗುಣವಾಗಿ ಕ್ಯಾಲಿರ್ಪ,ಊರು ಗೋಲು, ವ್ಹೀಲ್‌ಚೇರ್ ಸೇರಿ ವಿವಿಧ ಸಾಧನಗಳನ್ನು ಬಳಸಿಕೊಂಡು ಸರಿಯಾಗಿ ಸಮಯದಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತಾರೆ. ಆದರೆ ಪ್ರಸ್ತುತ ಗಣತಿ ಕಾರ್ಯಕ್ಕೆ ನೇಮಕ ಮಾಡಿರುವುದರಿಂದ ಮಹಾನಗರದ ಮನೆಗಳ ಮಹಡಿಗಳನ್ನು ಏರಿ ಯಾವ ರೀತಿಯಲ್ಲಿ ವಿಕಲಚೇತನ ನೌಕರರು ಗಣತಿ ಕಾರ್ಯ ಬಲ್ಲರು ಎಂಬುದು ಯಕ್ಷೆ ಪ್ರಶ್ನೆಯಾಗಿದೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಬೀರಪ್ಪ ಅಂಡಗಿ.

ಜಿಬಿಎಗೆ ಇಂದು ಮನವಿ:

ನಾವು ಸರ್ಕಾರಿ ನೌಕರರಾಗಿದ್ದು, ನೇಮಕವಾದ ವೃತ್ತಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತೇವೆ. ಆದರೆ, ಗಣತಿಯಂತಹ ಹೆಚ್ಚುವರಿ ಕಾರ್ಯವನ್ನು ಹೇಗೆ ಮಾಡಲು ಸಾಧ್ಯ. ಇದು ಕಷ್ಟದ ಕೆಲಸವಾಗಿದೆ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಯೋಚಿಸಿ ಗಣತಿ ಕಾರ್ಯದಿಂದ ವಿನಾಯಿತಿ ನೀಡುವಂತೆ ಸಂಘದ ವತಿಯಿಂದ ಗ್ರೇಟರ್ ಬೆಂಗಳೂರಿನ ಆಯುಕ್ತರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net