Hemanth Rao Interview ; ಗಾಂಧಿನಗರದ ವ್ಯವಸ್ಥೆ ಬದಲಾಗಿ, ಥಿಯೇಟರ್​ಗಾಗಿ ಸಿನಿಮಾ ಮಾಡಬೇಕು

scasc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಗೋಧಿಬಣ್ಣ ಸಾಧಾರಣ ಮೈಕಟ್ಟು', "ಕವಲುದಾರಿ', "ಸಪ್ತಸಾಗರದಾಚೆ ಎಲ್ಲೋ' ಚಿತ್ರಗಳನ್ನು ನಿರ್ದೇಶಿಸಿರುವ, ಬಾಲಿವುಡ್​ನ "ಅಂಧಾಧುನ್​' ಸಿನಿಮಾಗೆ ಅತ್ಯುತ್ತಮ ಚಿತ್ರಕಥೆ ರಾಷ್ಟ್ರಪ್ರಶಸ್ತಿ ಪಡೆದಿರುವ ಹೆಗ್ಗಳಿಕೆ ಹೇಮಂತ್​ ರಾವ್​ಗೆ ಸಲ್ಲುತ್ತದೆ. ನಿರ್ದೇಶನದ ಜತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವ ಹೇಮಂತ್​, ಇದೀಗ ತಮ್ಮ ತಾಯಿಯ ನೆನಪಿನಲ್ಲಿ "ದಾಕ್ಷಾಯಿಣಿ ಟಾಕೀಸ್​' ಬ್ಯಾನರ್​ ಪ್ರಾರಂಭಿಸಿದ್ದಾರೆ. ಅದರಡಿಯಲ್ಲಿ ನಿರ್ಮಿಸಿರುವ ಮೊದಲ ಸಿನಿಮಾ "ಅಜ್ಞಾತವಾಸಿ'. "ಗುಳ್ಟೂ', "ಪೌಡರ್​' ಖ್ಯಾತಿಯ ಜನಾರ್ಧನ್​ ಚಿಕ್ಕಣ್ಣ ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದು, ರಂಗಾಯಣ ರು, ಪಾವನಾ ಗೌಡ, ಸಿದ್ದು ಮೂಲಿಮನಿ, ರವಿಶಂಕರ್​, ಶರತ್​ ಲೋಹಿತಾಶ್ವ ಪ್ರಮುಖ ತಾರಾಗಣದಲ್ಲಿದ್ದಾರೆ.

ಚಿತ್ರದ ಬಗ್ಗೆ ಹೇಮಂತ್​, "1997ರಲ್ಲಿ ಮಲೆನಾಡಿನಲ್ಲಿ ನಡೆಯುವ ಮರ್ಡರ್​ ಮಿಸ್ಟರಿ ಕಥೆಯಿದು. ಸಸ್ಪೆನ್ಸ್​ ಥ್ರಿಲ್ಲರ್​, ಮರ್ಡರ್​ ಮಿಸ್ಟರಿ ತುಂಬ ಕಷ್ಟದ ಜಾನರ್​. ಚಿತ್ರಕಥೆಯ ಮೂಲಕ ಜನರನ್ನು ಬೋರ್​ ಆಗದಂತೆ, ಕೊನೆಯವರೆಗೆ ನೋಡಿಸಿಕೊಂಡು ಹೋಗಬೇಕು. ಆ ಹೊಸತನ ಈ ಚಿತ್ರದಲ್ಲಿದೆ' ಎಂದು ಮಾಹಿತಿ ನೀಡುತ್ತಾರೆ.

ಜನ ನಮಗಿಂತ ಬುದ್ಧಿವಂತರು

"ಜನ ನನಗೆ ಸಮ ಅಥವಾ ನನಗಿಂತ ಬುದ್ಧಿವಂತರೇ ವಿನಃ ನನಗಿಂತ ಕಡಿಮೆ ಅಂತ ಯಾವತ್ತೂ ಅಂದುಕೊಂಡಿಲ್ಲ. ಕಥೆ ಚೆನ್ನಾಗಿದ್ದು, ಟ್ರೇಲರ್​ ವೀಸಿಯೇ ಸಿನಿಮಾ ನೋಡಬೇಕು ಅಂತ ಅನ್ನಿಸದರೆ, ಜನ ಆ ಚಿತ್ರ ನೋಡುತ್ತಾರೆ. ಅವರಿಗೆ ಏನು ಇಷ್ಟವಾಗುತ್ತೋ, ನನಗೂ ಅದೇ ಇಷ್ಟವಾಗುವುದು. ಸಿನಿಮಾ ಮಾಡುವಾಗ ಶ್ರಮದ ಜತೆ ಶಿಸ್ತು ಕೂಡ ಇರಬೇಕು. ಅದನ್ನು ನನ್ನ ಕರಿಯರ್​ನಲ್ಲೇ ಕಂಡುಕೊಂಡಿದ್ದೇನೆ. ಅದನ್ನೇ ನಂಬಿ ಸಿನಿಮಾ ಮಾಡುತ್ತೇನೆ' ಎಂದು ಹೇಮಂತ್​ ಹೇಳಿಕೊಳ್ಳುತ್ತಾರೆ.

ಗಾಂಧಿನಗರದ ವ್ಯವಸ್ಥೆ ಬದಲಾಗಬೇಕು

ಚಿತ್ರರಂಗಕ್ಕೆ ಬಂದ ಹೊಸತರಲ್ಲಿ "ಗೋಧಿಬಣ್ಣ ಸಾಧಾರಣ ಮೈಕಟ್ಟು' ಮಾಡಲು ಹೇಮಂತ್​ ಕೂಡ ಸಾಕಷ್ಟು ಒದ್ದಾಡಿದ್ದರಂತೆ. "ಕಥೆ ಕೇಳಲೂ ಸಹ ರೆಡಿಯಿರಲಿಲ್ಲ. ಅವರು ಸಿನಿಮಾ ಅಂದರೆ ಹೀಗೇ ಇರಬೇಕು ಅಂತ ನಂಬಿದ್ದರು. ಆದರೆ, ಜನ ಕಥೆ ನೋಡಲು ಥಿಯೇಟರ್​ಗೆ ಬರಬೇಕು ಅನ್ನೋದು ನನ್ನ ನಂಬಿಕೆ. ಆಗ ನಾನು, ರತ್​ ನಿರ್ಮಾಣ ಸಂಸ್ಥೆ ಕಟ್ಟಿ ಇಂತಹ ಕಥೆಗಳನ್ನು ಮಾಡಬೇಕು ಅಂತ ಮಾತನಾಡಿಕೊಳ್ಳುತ್ತಿದ್ದೆವು. ಶಿಸ್ತು ಇದ್ದರೆ ಸೋಲುವುದಿಲ್ಲ' ಎನ್ನುತ್ತಾರೆ ಹೇಮಂತ್​.

ಎಲ್ಲ ಚಿತ್ರರಂಗಗಳದ್ದೂ ಇದೇ ಸಮಸ್ಯೆ

ಒಟಿಟಿಗಳು ಸಿನಿಮಾ ಖರೀದಿಸುತ್ತಿಲ್ಲ ಎಂಬ ದೂರುಗಳ ಬಗ್ಗೆ ಹೇಮಂತ್​, "ಕನ್ನಡ ಮಾತ್ರವಲ್ಲ ತೆಲುಗು, ತಮಿಳು, ಮಲಯಾಳಂಗಳಲ್ಲೂ ಇದೇ ಸಮಸ್ಯೆ. ಸಿನಿಮಾ ಥಿಯೇಟರ್​ನಲ್ಲಿ ದುಡಿದರೆ ಅದನ್ನು ಒಟಿಟಿಯಲ್ಲೂ ಖರೀದಿಸುತ್ತಾರೆ. ಇಲ್ಲದಿದ್ದರೆ ಇಲ್ಲ. ಹೀಗಾಗಿ ಥಿಯೇಟರ್​ಗೋಸ್ಕರ ಸಿನಿಮಾ ಮಾಡಬೇಕು. ಮೊದಲು ಟಿವಿ ರೈಟ್ಸ್​ಗೆಂದೇ ಚಿತ್ರಗಳನ್ನು ಮಾಡುತ್ತಿದ್ದರು. ಸಿನಿಮಾ ಅನೌನ್ಸ್​ ಆಗುತ್ತಲೇ ನಿರ್ಮಾಪಕರಿಗೆ ಚೆಕ್​ ಸಿಗುತ್ತಿತ್ತು. ಸಿನಿಮಾ ಕೇವಲ ವ್ಯಾಪಾರವಾಗಿ ಚೆನ್ನಾಗಿದ್ಯಾ, ಚೆನ್ನಾಗಿಲ್ವಾ ಅಂತನೂ ಯಾರೂ ನೋಡುತ್ತಿರಲಿಲ್ಲ. ಥಿಯೇಟರ್​ನಲ್ಲೇ ದುಡಿಯುತ್ತೇವೆ ಅಂತ ಸಿನಿಮಾ ಮಾಡಿದರೆ, ಉತ್ತಮ ಕಂಟೆಂಟ್​ ನೀಡಬಹುದು' ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಸದ್ಯಕ್ಕಿಲ್ಲ ಭೈರವನ ಕೊನೆ ಪಾಠ

ಹೇಮಂತ್​ ನಿರ್ದೇಶನದಲ್ಲಿ, ಶಿವರಾಜಕುಮಾರ್​ ಅಭಿನಯಿಸಲಿರುವ "ಭೈರವನ ಕೊನೆ ಪಾಠ' ಘೋಷಣೆಯಾಗಿ ಹಲವು ತಿಂಗಳೇ ಕಳೆದಿವೆ. ಆದರೆ, ಅಮೆರಿಕದಿಂದ ಚಿಕಿತ್ಸೆ ಪಡೆದು ಬಂದು ಶಿವಣ್ಣ ಇನ್ನೂ ಚೇತರಿಸಿಕೊಳ್ಳುತ್ತಿರುವ ಕಾರಣ, ಹೇಮಂತ್​ ಚಿತ್ರವನ್ನು ಮುಂದೂಡಿದ್ದಾರೆ. "ಆರೋಗ್ಯ ಎಲ್ಲಕ್ಕಿಂತ ಮುಖ್ಯ. ಶಿವಣ್ಣ ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕು. ಚಿತ್ರದಿಂದ ಅವರಿಗೂ ಸಮಸ್ಯೆ ಆಗಬಾರದು, ಚಿತ್ರಕ್ಕೂ ಸಮಸ್ಯೆ ಆಗಬಾರದು. ಹೀಗಾಗಿ, ಅವರು ಗುಣಮುಖರಾಗುವಷ್ಟರಲ್ಲಿ ಇನ್ನೊಂದು ಸಿನಿಮಾ ಮಾಡಲು ಯೋಚಿಸಿದ್ದೇನೆ. ಈಗಾಗಲೇ ಕಥೆಯ ಕೆಲಸ ನಡೆಯುತ್ತಿದೆ' ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net