ಬೆಂಗಳೂರು: ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ, ರಮೇಶ್ ಅರವಿಂದ್, ಹೇಮಾ, ಅಕ್ಷಯ್ ಆನಂದ್ ಮುಖ್ಯಭೂಮಿಕೆಯಲ್ಲಿದ್ದ ಸಿನಿಮಾ ‘ಅಮೆರಿಕಾ ಅಮೆರಿಕಾ’. 1997ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರವು 90ರ ದಶಕದಲ್ಲಿ ಭರ್ಜರಿ ಯಶಸ್ಸು ಕಂಡ ಸಿನಿಮಾಗಳಲ್ಲೊಂದು. ಇಂದಿಗೂ ಈ ಚಿತ್ರದ ಹಾಡುಗಳು ಜನಜನಿತ. ಹೀಗಿರುವಾಗಲೇ 29 ವರ್ಷಗಳ ಬಳಿಕ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ‘ಅಮೆರಿಕಾ ಅಮೆರಿಕಾ 2’ ಚಿತ್ರ ಘೋಷಿಸಿದ್ದಾರೆ. ಟೈಟಲ್ ಹಳೆಯದಾದರೂ, ಕಥೆ ಹೊಸದು ಎಂದು ಹೇಳಿಕೊಂಡಿದ್ದಾರೆ. ಈ ಸೀಕ್ವೆಲ್‌ನಲ್ಲಿ ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್, ಶಾನ್ವಿ ಶ್ರೀವಾಸ್ತವ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ನಿರೂಪ್ ಭಂಡಾರಿ, ‘ನಾಗತಿಹಳ್ಳಿ ಚಂದ್ರಶೇಖರ್ ಅವರು ಕರೆದು ಈ ಚಿತ್ರದ ಕಥೆ ಹೇಳಿದಾಗ, ಶೀರ್ಷಿಕೆ ಕೇಳಿಯೇ ನಟಿಸಬೇಕೆಂದುಕೊಂಡೆ. 29 ವರ್ಷಗಳ ಹಿಂದೆ ಥಿಯೇಟರ್‌ನಲ್ಲಿ ಆ ಚಿತ್ರವನ್ನು ನೋಡಿದ ನೆನಪು ಇನ್ನು ಹಾಗೆ ಉಳಿದಿದೆ. ಇದು ಅದರ ಮುಂದುವರಿದ ಭಾಗವಲ್ಲವಾದರೂ, ಕಥೆ ಹಾಗೂ ಪಾತ್ರಗಳು ಎಲ್ಲರ ನೆನಪಿನಲ್ಲಿರುವಂತದ್ದು. ನನ್ನ ಪಾತ್ರ ಕೂಡ ಚೆನ್ನಾಗಿದೆ’ ಎಂದು ಹೇಳಿಕೊಂಡರು. ಮನೋಮೂರ್ತಿ ಸಂಗೀತ, ನಕುಲ್ ಅಭಯಂಕರ್ ಹಿನ್ನೆಲೆ ಸಂಗೀತ, ಎಸ್.ಕೆ.ರಾವ್ ಛಾಯಾಗ್ರಹಣ ಚಿತ್ರಕ್ಕಿದೆ.