ಬೆಂಗಳೂರಿನಲ್ಲಿ ಡೈನೋಸಾರ್​ಗಳು?; ಈ ವೈರಲ್​ ಫೋಟೋ ಸುಳ್ಳಾದರೂ ಹಿಂದಿನ ಉದ್ದೇಶವೇ ಬೇರೆ!

Dinosars
Published on

ಬೆಂಗಳೂರು: ನಗರದ ಹೆಬ್ಬಾಳ್​ ಕೆರೆಯಲ್ಲಿ ತೆಗೆದಂತಹ ಡೈನೋಸಾರ್​ಗಳ ಫೋಟೋ ಎಂಬ ಅಡಿಬರಹದೊಂದಿಗೆ ಭಾರತೀಯ ಅರಣ್ಯಾಧಿಕಾರಿ ಪರ್ವೀನ್​ ಕಾಸ್ವಾನ್​ ಅವರು ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.

ವೈರಲ್​ ಫೋಟೋ ಪಕ್ಕಾ ಫೋಟೋಶಾಪ್​​​ ಕೈಚಳಕವಾಗಿದೆ. ಆದರೂ ಸಹ ಅನೇಕರು ಚಕಿತಗೊಂಡಿದ್ದಾರೆ. ಖಂಡಿತವಾಗಿ ಇದೊಂದು ಫೋಟೋಶಾಪ್​ ಎಂದು ವಿರೋಧಿಗಳು ಹೇಳುತ್ತಾರೆ. ಲಾಕ್​ಡೌನ್​ನಿಂದಾಗಿ ಡೈನೋಸಾರ್​ಗಳು ಬೆಂಗಳೂರಿನ ಹೆಬ್ಬಾಳ್​ ಕರೆಗೆ ಬಂದಿವೆ ಎಂದು ಕಾಸ್ವಾನ್​ ಟ್ವಿಟರ್​ನಲ್ಲಿ ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

ಅಸಲಿಗೆ ಈ ಡೈನೋಸಾರ್​ ಫೋಟೋ ಹೇಗೆ ಸೃಷ್ಟಿಯಾಯಿತು ಎಂದರೆ ಅದಕ್ಕೆ ಪ್ರಮುಖ ಕಾರಣ ಲಾಕ್​ಡೌನ್​. ಕರೊನಾ ವೈರಸ್​ ತಡೆಗಟ್ಟಲು ಇಡೀ ರಾಷ್ಟ್ರಕ್ಕೆ ದಿಗ್ಭಂದನ ವಿಧಿಸಲಾಗಿದೆ. ಇದರ ನಡುವೆ ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಸೇರಿದಂತೆ ಪರಿಸರ ಸುಧಾರಣೆಯಾಗುತ್ತಿದೆ. ಹೀಗಾಗಿ ಇದನ್ನು ವಿಡಂಬಣಾತ್ಮಕವಾಗಿ ತೋರಿಸುವ ಪ್ರಯತ್ನವಾಗಿ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅನೇಕ ಚಿತ್ರಗಳು ಹರಿದಾಡುತ್ತಿವೆ. ಅದರಲ್ಲಿ ಡೈನೋಸಾರ್​​ಗಳ ಫೋಟೋ ಕೂಡ ಒಂದಾಗಿದೆ. ಮಾನವನ ಕೃತ್ಯದಿಂದಾಗಿ ಪರಿಸರ ಮಾತ್ರವಲ್ಲದೇ ಅನೇಕ ಜೀವಿಗಳು ಅಳಿದು ಹೋಗಿವೆ. ಲಾಕ್​ಡೌನ್​ನಿಂದ ಪ್ರಕೃತಿ ತನ್ನ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಸಾಂಕೇತಿಕವಾಗಿ ತೋರಿಸುವ ಪ್ರಯತ್ನವನ್ನು ಅನೇಕ ನೆಟ್ಟಿಗರು ಮಾಡುತ್ತಿದ್ದಾರೆ.

ಸದ್ಯ ಡೈನೋಸಾರ್​ ಫೋಟೋ ಕಾಸ್ವಾನ್​ ಅವರ ಖಾತೆಯಿಂದ ಡಿಲೀಟ್​ ಆಗಿದ್ದು, ಟ್ವಿಟರ್​ನಲ್ಲಿ ಅಪ್​ಲೋಡ್​ ಆಗಿದ್ದ ವೇಳೆ 3 ಸಾವಿರ ಹೆಚ್ಚು ಲೈಕ್​ಗಳು ಬಂದಿದ್ದವು. ಅಲ್ಲದೆ, ಸಾಕಷ್ಟು ಮಂದಿ ಕಮೆಂಟ್​ ಮಾಡಿ, ಶೇರ್​ ಕೂಡ ಮಾಡಿಕೊಂಡಿದ್ದರು. ನೆಟ್ಟಿಗನೊಬ್ಬ ಭೂಮಿ ತನ್ನಷ್ಟಕ್ಕೆ ತಾನು ಗುಣಮುಖವಾಗುತ್ತಿದೆ ಎಂದರೆ, ಮತ್ತೋರ್ವ ಇದು ನಿಜಕ್ಕೂ ಸುಳ್ಳು ಚಿತ್ರ ಎಂದೆಲ್ಲಾ ಕಮೆಂಟ್​ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net