

ಕಡೂರು: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪಟ್ಟಣದ ಪಾಂಡುರಂಗ ದೇವಾಲಯದಲ್ಲಿ ಭಾವಸಾರ ಕ್ಷತ್ರಿಯ ಸಮಾಜದಿಂದ ಗುರುವಾರ ದಿಂಡಿ ಉತ್ಸವವನ್ನು ವಿಜೃಂಭಣೆಯಿಂದ ನಡೆಸಲಾಯಿತು.
ಶ್ರೀಕೃಷ್ಣ ಮತ್ತು ರಾಧೆಯ ಉತ್ಸವಮೂರ್ತಿಗಳೊಂದಿಗೆ ಅಲಂಕೃತ ಸಾರೋಟಿನೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಸೆ.5ರಂದು ಆರಂಭವಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. 6ರಂದು ಶ್ರೀಕೃಷ್ಣನ ಜೋಗುಳ ಸೇವೆ ಮತ್ತು ರಾತ್ರಿ ಅಖಂಡ ಭಜನಾ ಕಾರ್ಯಕ್ರಮಗಳು ನೆರವೇರಿಸಲಾಯಿತು. ಗುರುವಾರ ದೇವಾಲಯದಲ್ಲಿ ಕಾಕಡಾರತಿ ಮತ್ತು ಭಜನೆ ನೆರವೇರಿಸಿ ಪ್ರಮುಖ ಬೀದಿಗಳಲ್ಲಿ ಮಹಿಳಾ ಭಜನಾ ಮಂಡಳಿ, ಯುವಕ ಮಂಡಳಿಯಿಂದ ದಿಂಡಿ ಉತ್ಸವ ನಡೆಸಲಾಯಿತು. ಮೆರವಣಿಗೆಯಲ್ಲಿ ನಾಮಕೀರ್ತನೆಗಳ ಭಜನೆಯೊಂದಿಗೆ ಮಹಿಳೆಯರು ಹೆಜ್ಜೆಹಾಕಿದರು. ಉತ್ಸವದೊಂದಿಗೆ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು.
ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಮೂರ್ತಿರಾವ್, ಕಾರ್ಯದರ್ಶಿ ರವಿಶಂಕರ್, ದೇವಾಲಯದ ವ್ಯವಸ್ಥಾಪಕ ಅನಿಲ್‌ಕುಮಾರ್, ಯುವ ಮಂಡಳಿ ಅಧ್ಯಕ್ಷ ದೀಪಕ್ ಇತರರಿದ್ದರು.