

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ಆಗಮಿಸಿದ್ದರು. ಡೊನಾಲ್ಡ್ ಟ್ರಂಪ್ಗೆ ಇದು ಪ್ರಥಮ ಭೇಟಿಯಾದರೂ, ಅವರ ಪುತ್ರಿ ಇವಾಂಕಾ ಭಾರತಕ್ಕೆ ಆಗಮಿಸಿದ್ದು ಎರಡನೇಬಾರಿ.
ಭಾರತಕ್ಕೆ ಆಗಮಿಸಿದ್ದ ಡೊನಾಲ್ಡ್ ಟ್ರಂಪ್ ಕುಟುಂಬ ಮೊದಲನೇ ದಿನವೇ ಆಗ್ರಾದ ತಾಜ್ಮಹಲ್ಗೆ ಭೇಟಿ ನೀಡಿದೆ. ಟ್ರಂಪ್ ತಮ್ಮ ಪತ್ನಿ ಮೆಲಾನಿಯಾ ಜತೆಗೆ ತಾಜ್ ಮಹಲ್ ಎದುರು ಫೋಟೋ ತೆಗೆಸಿಕೊಂಡರೆ, ಅವರ ಪುತ್ರಿ ಇವಾಂಕಾ ತಮ್ಮ ಪತಿ ಜೇರ್ಡ್ ಕುಶ್ನರ್ ಜತೆ ಪೋಸ್ ಕೊಟ್ಟಿದ್ದಾರೆ. ಆದರೆ ಈಗ ಇವಾಂಕಾ ಫೋಟೋಗಳು ತುಂಬ ವೈರಲ್ ಆಗುತ್ತಿವೆ. ಅದೂ ಕೂಡ ವಿವಿಧ ರೀತಿಯ ಟ್ರೋಲ್ ಮಾಡಿ, ಫೋಟೋಶಾಪ್ ಮೂಲಕ ವಿಭಿನ್ನವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ.
ಆದರೆ ಹೀಗೆ ಟ್ವಿಟರ್ನಲ್ಲಿ ಶೇರ್ ಆದ ಫನ್ನಿ ಫೋಟೋಗಳಿಗೆ ಇವಾಂಕಾ ಟ್ರಂಪ್ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು ತುಂಬ ವಿಶೇಷ. ಅದರಲ್ಲೂ ಭಾರತೀಯರಿಗೆ ಧನ್ಯವಾದ ತಿಳಿಸಿದ ಅವರ ದೊಡ್ಡಗುಣಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ನಟ, ಗಾಯಕ ದಿಲ್ಜಿತ್ ದೋಸಾಂಜ್ ಅವರು ಕೂಡ ಇವಾಂಕಾ ಟ್ರಂಪ್ ಅವರ ಎಡಿಟೆಡ್ ಫೋಟೋವನ್ನು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ತಾಜ್ ಮಹಲ್ ಎದುರಿನ ಬೆಂಚ್ ಮೇಲೆ ಕುಳಿತಿದ್ದ ಇವಾಂಕಾ ಪಕ್ಕ ತಾವು ಕುಳಿತಂತೆ ಎಡಿಟ್ ಮಾಡಿದ ಫೋಟೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿ, ನಾನು ಮತ್ತು ಇವಾಂಕಾ ಎಂದು ಬರೆದುಕೊಂಡಿದ್ದರು. ಅಲ್ಲದೆ, ನಾನೇ ಅವರನ್ನು ತಾಜ್ಮಹಲ್ಗೆ ಕರೆದುಕೊಂಡು ಹೋದೆ ಎಂದು ಫನ್ನಿಯಾಗಿ ಹೇಳಿದ್ದರು.
ಅದಕ್ಕೆ ಇವಾಂಕಾ ಕೂಡ ತುಂಬ ಫನ್ನಿಯಾಗಿ, ಅಷ್ಟೇ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ಗೆ ನನ್ನನ್ನು ಕರೆದುಕೊಂಡು ಹೋಗಿದ್ದಕ್ಕೆ ನಿಮಗೆ ಧನ್ಯವಾದ. ಆ ಸುಂದರ ಅನುಭವವನ್ನು ನಾನೆಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
ಇವಾಂಕಾ ಪ್ರತಿಕ್ರಿಯೆ ನೋಡಿ ಆಶ್ಚರ್ಯಚಕಿತರಾದ ದಿಲ್ಜಿತ್, ಓ ಮೈ ಗಾಡ್..ಅತಿಥಿ ದೇವೋ ಭವ. ಮುಂದಿನ ಬಾರಿ ನಮ್ಮ ಲುಧಿಯಾನಾಕ್ಕೆ ಭೇಟಿ ನೀಡಿ ಎಂದು ಟ್ವೀಟ್ ಮಾಡಿದ್ದಾರೆ.
ಹಾಗೇ ಆದಿತ್ಯ ಚೌಧರಿ ಎಂಬುವರು ಕೂಡ ತಮ್ಮ ಟ್ವಿಟರ್ನಲ್ಲಿ ಇವಾಂಕಾ ಅವರ ಫೋಟೋಶಾಪ್ಡ್ ಫೋಟೋಗಳನ್ನು ಪೋಸ್ಟ್ ಮಾಡಿಕೊಂಡಿದ್ದರು. ಇವಾಂಕಾ ಟ್ರಂಪ್ ಸೈಕಲ್ ಮೇಲೆ ಹೋಗುತ್ತಿರುವಂತೆ, ಅವರ ಪಕ್ಕದಲ್ಲಿ ಹಲವರನ್ನು ಕೂರಿಸಿದಂತೆ ಎಡಿಟ್ ಮಾಡಿದ್ದ ಫೋಟೋಗಳನ್ನೂ, ಮೀಮ್ಸ್ಗಳನ್ನು ಪೋಸ್ಟ್ ಮಾಡಿದ್ದರು. ಈ ಟ್ವಿಟರ್ ಪೋಸ್ಟ್ಗೆ ಕೂಡ ಇವಾಂಕಾ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯರ ಆದರಣೆ ನೋಡಿ ತುಂಬ ಖುಷಿಯಾಗಿದೆ. ನನಗೆ ಹಲವು ಹೊಸ ಸ್ನೇಹಿತರು ಸಿಕ್ಕಂತಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಅವರ ಈ ಸರಳತೆಯನ್ನು ಭಾರತೀಯ ನೆಟ್ಟಿಗರು ತುಂಬ ಮೆಚ್ಚಿಕೊಂಡಿದ್ದಾರೆ. ತಮ್ಮನ್ನು ಟ್ರೋಲ್ ಮಾಡಿದರೂ, ಮನಬಂದಂತೆ ಎಡಿಟ್ ಮಾಡಿದ ಫೋಟೋಗಳನ್ನು ನೋಡಿ ಕೂಡ ಇವಾಂಕಾ ತುಂಬ ಪ್ರಬುದ್ಧವಾಗಿ ಪ್ರತಿಕ್ರಿಯೆ ನೀಡಿದ್ದಾರೆಂದು ಹಲವರು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)