ಅನುದಾನಿತ ಪಿಯು ಕಾಲೇಜು ಉಪನ್ಯಾಸಕರಿಗೆ ಸಂದಿಗ್ಧ | MLCs urge to CM

Memorandum
Published on

ಬೆಂಗಳೂರು: ಬಿ.ಇಡಿ ಪದವಿ ಕಡ್ಡಾಯದ ಆದೇಶವು ಖಾಸಗಿ ಅನುದಾನಿತ ಪಿಯು ಕಾಲೇಜು ಉಪನ್ಯಾಸಕರು ಅಯೋಮಯ ಪರಿಸ್ಥಿತಿಗೆ ಸಿಲುಕಿದ್ದಾರೆ. ಖಾಸಗಿ ಅನುದಾನಿತ ಪಿಯು ಕಾಲೇಜಿಗೆ 364 ಉಪನ್ಯಾಸಕರ ನೇಮಕದ ವೇಳೆ ಸ್ನಾತಕೋತ್ತರ ಪದವಿ ತೇರ್ಗಡೆ ಮಾತ್ರ ಅರ್ಹತೆಗೆ ಪರಿಗಣಿಸಲಾಗಿತ್ತು.

ನೇಮಕ ಪಟ್ಟಿಗೆ 2008ರಲ್ಲಿ ಅನುಮೋದಿಸಿದ ಬಳಿಕ ಅದೇ ವರ್ಷ ಬಿ.ಇಡಿ ಪದವಿ ಕಡ್ಡಾಯವೆಂಬ ಆದೇಶ ಹೊರಡಿಸಿರುವುದು ಗಮನಕ್ಕಿದೆ. ಈ ಹಿನ್ನೆಲೆಯಲ್ಲಿ ಬಿ.ಇಡಿ ಪದವಿ ಪೂರ್ಣಗೊಳಿಸಲು ಐದು ವರ್ಷಗಳ ಕಾಲಾವಕಾಶ ನೀಡಲಾಗಿತ್ತು.

ನಂತರ ಅವಧಿಯನ್ನು ಪದೇ ಪದೆ ವಿಸ್ತರಿಸುತ್ತಲೇ ಬಂದಿದ್ದು, 15 ವರ್ಷಗಳ ಕಳೆದರೂ ಬಿ.ಇಡಿ ಪದವಿ ಪೂರ್ಣಗೊಳಿಸಿಲ್ಲ. ಈಗ 364 ಎದುರಿಸುತ್ತಿರುವ ಸಮಸ್ಯೆಗೆ ಆರ್ಥಿಕ, ಶಿಕ್ಷಣ ಇಲಾಖೆಗಳು ಹೊಣೆಯಲ್ಲ ಎಂದು ಅಧಿಕಾರಿ ವರ್ಗ ಹೇಳುತ್ತಿದೆ.

ಅವಕಾಶ ಅನ್ವಯಿಸಲು ಮೊರೆ

ಕಳೆದ 10-15 ವರ್ಷಗಳಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ವೇತನರಹಿತವಾಗಿ ಬಿ.ಇಡಿ ವ್ಯಾಸಂಗ ಪೂರ್ಣಗೊಳಿಸಬೇಕು ಎಂದು ಇಲಾಖೆ ಆದೇಶಿಸಿದೆ. ಈಗ ಬಿ.ಇಡಿ ವ್ಯಾಸಂಗದ ಅವಧಿ ಎರಡು ವರ್ಷಗಳಾಗಿವೆ. ವೇತನವಿಲ್ಲದೆ ಕುಟುಂಬ ನಿರ್ವಹಣೆ, ಸಾಲದ ಕಂತು ಪಾವತಿ, ಮತ್ತಿತರ ಖರ್ಚು-ವೆಚ್ಚಗಳು ನಿಭಾಯಿಸುವುದು ಕಷ್ಟವಾಗಲಿದೆ.

ಈ ಹಿಂದೆ ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕರಿಗೆ ವೇತನಸಹಿತ (ಆಗ ಬಿ.ಇಡಿ ವ್ಯಾಸಂಗ ಒಂದು ವರ್ಷವಿತ್ತು), ಎರಡನೇ ಹಂತದ ಶಿಷ್ಯ ವೇತನ ರೂಪದಲ್ಲಿ ಬಿ.ಇಡಿ ವ್ಯಾಸಂಗಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು.

ಜೆಒಸಿ ಮಾದರಿಗೆ ಬಿಗಿಪಟ್ಟು

ಅಷ್ಟೇ ಅಲ್ಲ, ಅರೆಕಾಲಿಕ ವೃತ್ತಿ ಆಧಾರಿತ ಕೋರ್ಸ್ (ಜೆಒಸಿ)ಗಳನ್ನು ವಿಲೀನಗೊಳಿಸಿದ ಸಂದರ್ಭದಲ್ಲಿ ಸರ್ಕಾರಿ ಪಿಯು ಕಾಲೇಜುಗಳ 79, ಖಾಸಗಿ ಅನುದಾನಿತ ಪಿಯು ಕಾಲೇಜು 82 ಉಪನ್ಯಾಸಕರಿಗೆ ಬಿ.ಇಡಿ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಒಟ್ಟು 161 ಉಪನ್ಯಾಸಕರ ಬಿ.ಇಡಿ ವ್ಯಾಸಂಗದ ಅವಧಿಯಲ್ಲಿ ಪಿಯು ಕಾಲೇಜುಗಳಲ್ಲಿ ಬೋಧನೆಗೆ ತೊಂದರೆಯಾಗದಂತೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿತ್ತು. ಜೆಒಸಿ ಉಪನ್ಯಾಸಕರ ವೇತನದಲ್ಲಿ ಕಡಿತ ಮಾಡಿ ಅತಿಥಿ ಉಪನ್ಯಾಸಕರ ಮಾಸಿಕ ಸಂಭಾವನೆ ಪಾವತಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿಪೂರ್ವ ಶಿಕ್ಷಣ) ಆದೇಶಿಸಿ, ಅನುಕೂಲ ಮಾಡಿಕೊಟ್ಟಿದೆ.

ಆದರೆ ನಮಗೆ ಮಾತ್ರ ವೇತನರಹಿತ ವ್ಯಾಸಂಗಕ್ಕೆ ಸೂಚಿಸಲಾಗುತ್ತಿದೆ ಎಂದು ಖಾಸಗಿ ಅನುದಾನಿತ ಉಪನ್ಯಾಸಕರು ಅಳಲು ತೋಡಿಕೊಂಡಿದ್ದು, ಜೆಒಸಿ ಉಪನ್ಯಾಸಕರ ಮಾದರಿಯಲ್ಲಿ ಬಿ.ಇಡಿ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಬಿಗಿಪಟ್ಟು ಹಿಡಿದಿದ್ದಾರೆ.

ವಿಧಾನ ಪರಿಷತ್ ಸದಸ್ಯರ ಒತ್ತಾಯ

ಖಾಸಗಿ ಅನುದಾನಿತ ಪಿಯು ಉಪನ್ಯಾಸಕರು ಬಿ.ಇಡಿ ವ್ಯಾಸಂಗ ಪೂರ್ಣಗೊಳಿಸಲು ಸಿದ್ಧರಿದ್ದು, ಎರಡು ವರ್ಷ ವೇತನವಿಲ್ಲದೆ ಓದಬೇಕು ಎನ್ನುವುದು ಕಷ್ಟಸಾಧ್ಯವೆಂಬುದು ಪದವೀಧರ, ಶಿಕ್ಷಕರ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವ ವಿಧಾನ ಪರಿಷತ್ ಸದಸ್ಯರ ಅಭಿಪ್ರಾಯವಾಗಿದೆ.

ಅನುದಾನಿತ ಪಿಯು ಕಾಲೇಜುಗಳ 364 ಉಪನ್ಯಾಸಕರ ಕೋರಿಕೆಯನ್ನು ಸರ್ಕಾರ ಮಾನವೀಯ ನೆಲೆಯಲ್ಲಿ ಪರಿಗಣಿಸಿ, ಜೆಒಸಿ ಉಪನ್ಯಾಸಕರಿಗೆ ನೀಡಿದ ಅವಕಾಶವನ್ನು ಇವರಿಗೂ ಅನ್ವಯಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರು, ಹಣಮಂತ ನಿರಾಣಿ, ಶಶಿಲ್ ನಮೋಶಿ ಮತ್ತಿತರರು ಜಂಟಿಯಾಗಿ ಮನವಿಪತ್ರ ಸಲ್ಲಿಸಿ, ಸಿಎಂ ಸಿದ್ದರಾಮಯ್ಯ ಗಮನಸೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net