

ಸರಗೂರು: ತಾಲೂಕಿನ ಬಿದರಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರ ವೈದ್ಯ-ಸಿಬ್ಬಂದಿ ಇಲ್ಲದೆ ಪಾಳು ಬಿದ್ದಿದ್ದು, ನಾಗರಿಕರು ಆರೋಗ್ಯ ಸೇವೆ ಸಿಗದೆ ಪರದಾಡುವಂತಾಗಿದೆ.
ಗ್ರಾಮದಲ್ಲಿ 2010-11ನೇ ಸಾಲಿನಲ್ಲಿ ಆರೋಗ್ಯ ಇಲಾಖೆ ಯೋಜನೆ ಅಡಿಯಲ್ಲಿ ಪ್ರಾಥಮಿಕ ಆರೋಗ್ಯ ಉಪ ಕೇಂದ್ರವನ್ನು ನಿರ್ಮಿಸಲಾಯಿತು. ಹೊಸದರಲ್ಲಿ ಒಂದು ವರ್ಷ ವೈದ್ಯರು ಆಸ್ಪತ್ರೆಯಲ್ಲಿ ಉತ್ತಮ ಸೇವೆ ನೀಡಿದ್ದರು. ಇದರಿಂದ ಬಿದರಹಳ್ಳಿ ಗ್ರಾಮಸ್ಥರು ಸೇರಿದಂತೆ ಈ ಭಾಗದ ನಂದಿನಾಥಪುರ , ಉಯ್ಯಂಬಳಿ, ಬಸಾಪುರ, ತೆರಣಿಮುಂಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ವೈದ್ಯಕೀಯ ಸೇವೆ ಪಡೆದುಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ವೈದ್ಯರಿಲ್ಲದೆ ನಾಗರಿಕರು ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಖಾಸಗಿ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ವೈದ್ಯರೂ ಇಲ್ಲ, ಸಿಬ್ಬಂದಿಯೂ ಇಲ್ಲ: ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೇ ಇರುವುದರಿಂದ ಕಳೆದ ಮೂರು ವರ್ಷಗಳಿಂದ ಈ ಭಾಗದ ಸಾರ್ವಜನಿಕರಿಗೆ ವೈದ್ಯಕೀಯ ಸೇವೆಗಳು ಮರೀಚಿಕೆಯಾಗಿದೆ. ಮೂರು ವರ್ಷಗಳಿಂದ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದ ಕಟ್ಟಡಕ್ಕೆ ಬೀಗ ಹಾಕಲಾಗಿದ್ದು, ಗ್ರಾಮಸ್ಥರಿಗೆ ಆರೋಗ್ಯ ಸೇವೆ ಸಿಗದೆ ಪರದಾಡುವಂತಾಗಿದೆ. ಪರಿಣಾಮ ಆಸ್ಪತ್ರೆ ಪಾಳು ಬಿದ್ದಿದ್ದು, ಆಸ್ಪತ್ರೆಯ ಕಟ್ಟಡದ ಸುತ್ತಲು ಆಳೆತ್ತರಕ್ಕೆ ಗಿಡಗಂಟಿಗಳು ಬೆಳೆದು ನಿಂತಿವೆ. ಕಿಟಕಿಯ ಗಾಜುಗಳು ಒಡೆದು ಹೋಗಿವೆ. ಆಸ್ಪತ್ರೆಗೆ ಒಬ್ಬ ಜವಾನನನ್ನು ನೇಮಿಸಿದ್ದು, ಆತ ಪ್ರತಿನಿತ್ಯ ಬೆಳಗ್ಗೆ 10.30ಕ್ಕೆ ಬಂದು ಬೀಗ ತೆರೆದು, ಮಧ್ಯಾಹ್ನ 1.30ರವರೆಗೆ ಇದ್ದು ಮತ್ತೆ ಬೀಗ ಹಾಕಿಕೊಂಡು ಹೋಗುತ್ತಾನೆ.
ಆಸ್ಪತ್ರೆಯಲ್ಲಿ ಮೂರು ವರ್ಷಗಳಿಂದ ವೈದ್ಯ-ಸಿಬ್ಬಂದಿ ಇಲ್ಲದೆ ನಾಗರಿಕರು ವೈದ್ಯಕೀಯ ಸೇವೆ ಸಿಗದೆ ತೊಂದರೆ ಅನುಭವಿಸುವಂತಾಗಿದೆ. ಸಣ್ಣ ಮಕ್ಕಳು, ಮಹಿಳೆಯರು ಹಾಗೂ ವೃದ್ಧರಿಗೆ ತುಂಬ ತೊಂದರೆಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯ-ಸಿಬ್ಬಂದಿ ನೇಮಿಸಿ ವಾರದಲ್ಲಿ ಕನಿಷ್ಠ ಎರಡು, ಮೂರು ದಿನ ಸೇವೆ ಸಲ್ಲಿಸುವಂತೆ ಮಾಡಬೇಕು.
ಬಿ.ಶಿವಣ್ಣ ಉಯ್ಯಂಬಳ್ಳಿ, ಬಿದರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ
ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬ ವೈದ್ಯರು ಇದ್ದಾರೆ. ಮುಂದಿನ ದಿನಗಳಲ್ಲಿ ವಾರದಲ್ಲಿ ಎರಡು ಬಾರಿ ಬಿದರಹಳ್ಳಿ ಆರೋಗ್ಯ ಉಪಕೇಂದ್ರಕ್ಕೆ ತೆರಳಿ ಸೇವೆ ನೀಡುವಂತೆ ಸೂಚಿಸುತ್ತೇನೆ.
ಡಾ.ಟಿ.ರವಿಕುಮಾರ್, ತಾಲೂಕು ಆರೋಗ್ಯಾಧಿಕಾರಿ, ಎಚ್.ಡಿ.ಕೋಟೆ ಮತ್ತು ಸರಗೂರು.