

ಬೆಂಗಳೂರು: ಭೂ ದಾಖಲೆಗಳನ್ನು ಸಂಪೂರ್ಣ ಡಿಜಿಟಲ್ ಮಾಡಿ ಆನ್‌ಲೈನ್ ಸೇವೆ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ನೃಪತುಂಗ ರಸ್ತೆ ಯುವನಿಕಾ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಮತ್ತು ಅಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಭೂಮಿ ಪ್ರತಿಯೊಂದು ದೇಶದ ಮತ್ತು ಜನರ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಬಹುತೇಕ ಜಮೀನಿನ ದಾಖಲೆಗಳಲ್ಲಿ ಸಮಸ್ಯೆ ಇದ್ದು, ಭೂ ಮಾಲೀಕ, ಅದನ್ನು ಸದ್ಬಳಕೆ ಮಾಡಿಕೊಳ್ಳಲಾಗದೆ ಆತನ ಆರ್ಥಿಕತೆ ಮೇಲೆ ವ್ಯತಿರೀಕ್ತ ಪರಿಣಾಮ ಬೀರುತ್ತಿದೆ. ಆದ್ದರಿಂದ ಕಂದಾಯ ಇಲಾಖೆಯ ಭೂ ದಾಖಲೆಗಳನ್ನು ಸಂಪೂರ್ಣ ಡಿಜಿಟಲ್ ಮಾಡಿ ಕಾವೇರಿ 2.0 ತಂತ್ರಾಂಶಕ್ಕೆ ಲಿಂಕ್ ಮಾಡಲಾಗುತ್ತದೆ. ಸಂಪೂರ್ಣ ಡಿಜಿಟಲ್‌ಗೆ ವರ್ಷಗಳೇ ಬೇಕಾಗುತ್ತದೆ. ಈಗ ತಳಪಾಯ ಹಾಕಿದರೇ, ಮುಂದೆ ಲ ಸಿಗಲಿದೆ ಎಂದರು.
ಮೇಲ್ದರ್ಜೆಗೆ ಏರಿಸಲು ಚರ್ಚೆ:
ಪ್ರತಿಯೊಬ್ಬರಿಗೂ ನೇರ ಸೇವೆ ನೀಡುವ ಕಾರಣಕ್ಕೆ ಕಂದಾಯ ಇಲಾಖೆಯನ್ನು ಸರ್ಕಾರದ ‘ತಾಯಿ ಇಲಾಖೆ’ ಎನ್ನುತ್ತಾರೆ. ಜನರ ತೆರಿಗೆ ಹಣದಲ್ಲಿ ಸರ್ಕಾರ ನಡೆಯುತ್ತಿದೆ. ಅವರಿಗೆ ಉತ್ತಮ ಸೇವೆ ನೀಡುವುದು ನಮ್ಮ ಕರ್ತವ್ಯ. ಬಹುತೇಕ ಉಪನೊಂದಣಿ ಕಚೇರಿಗಳಲ್ಲಿ ಶೌಚಗೃಹ, ಕುರ್ಚಿ, ಕುಡಿಯಲು ನೀರು ಸೇರಿ ಮೂಲಸೌಕರ್ಯಗಳಿಲ್ಲ. ಇವುಗಳನ್ನು ಸಬ್ ರಿಜಿಸ್ಟ್ರಾರ್‌ಗಳೇ ಹೊಂದಿಸಿಕೊಳ್ಳಬೇಕು. ಪಾಸ್‌ಪೋರ್ಟ್ ಕಚೇರಿ ರೀತಿ ಅಲ್ಲದಿದ್ದರೂ ಅಂಚೆ ಕಚೇರಿ ರೀತಿಯಾದರು ಮೇಲ್ದರ್ಜೆಗೆ ಏರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಹೆಚ್ಚಿನ ಅನುದಾನ ಕೋರಿ ಹಣಕಾಸು ಇಲಾಖೆ ಜತೆಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಕಾವೇರಿ 2.0 ಸಾಮರ್ಥ್ಯ:
ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಾವೇರಿ 2.0 ತಂತ್ರಾಂಶವನ್ನು ಯಶಸ್ವಿಯಾಗಿ ಅಳವಡಿಸಿದೆ. ದಿನಕ್ಕೆ 10 ಸಾವಿರ ದಸ್ತಾವೇಜುಗಳ ಬದಲಿಗೆ ಒಂದೇ ದಿನ 23 ಸಾವಿರ ದಸ್ತಾವೇಜುಗಳು ನೋಂದಣಿ ಆಗಿವೆ. ಇದರಿಂದ ಕಾವೇರಿ 2.0 ಸಾಮರ್ಥ್ಯ ಸಾಬೀತಾಗಿದೆ. ಕೆಲವೊಂದು ತಾಂತ್ರಿಕ ಸಮಸ್ಯೆಗಳಿದ್ದು, ಅವುಗಳನ್ನು ಸರಿಪಡಿಸಲಾಗುತ್ತದೆ. 2017ರಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆಗೆ ಒಂದೂವರೆ ವರ್ಷ ತೆಗೆದುಕೊಳ್ಳಲಾಗಿತ್ತು. ಈ ಬಾರಿ ಕೇವಲ ಎರಡೂವರೆ ತಿಂಗಳಲ್ಲಿ ವೈಜ್ಞಾನಿಕವಾಗಿ ಪರಿಷ್ಕರಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮೀ ಮಹೇಶ್, ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಮತ್ತು ಹಿರಿಯ ಐಎಎಸ್ ಅಧಿಕಾರಿ ಮೋಹನ್ ರಾಜ್ ಇದ್ದರು.
ಅಧಿಕಾರಿಗಳಿಗೆ ಬಡ್ತಿ ನೀಡುವಲ್ಲಿ ಐದಾರು ವರ್ಷಗಳಿಂದ ವಿಳಂಬವಾಗಿದೆ. ಕೆಲವು ಅಧಿಕಾರಿಗಳ ವಿರುದ್ಧ ತನಿಖೆ ನಡೆದು ನಿರಪರಾಧಿ ಎಂದು ವರದಿ ಇದ್ದರೂ ಕೇಸ್ ರದ್ದಾಗಿಲ್ಲ. ಇದರಿಂದ ಕೆಲವರಿಗೆ ಲಾಭ ಆಗಿದ್ದರೇ ಪ್ರಾಮಾಣಿಕರಿಗೆ ನೋವಿನ ವಿಚಾರ. ಬಡ್ತಿ ಮತ್ತು ಕೇಸ್ ರದ್ದುಪಡಿಸಲು ಸಚಿವರನ್ನು ಭೇಟಿ ಮಾಡುವ ಪದ್ಧತಿ ಇನ್ನೂ ಮುಂದೆ ಇರುವುದಿಲ್ಲ. ಒಂದೆರೆಡು ವಾರಗಳಲ್ಲಿ ತನಿಖಾಧಿಕಾರಿಗಳ ವರದಿ ಆಧಾರದ ಮೇಲೆ ಅಧಿಕಾರಿಗಳ ಮೇಲಿನ ಕೇಸ್ ರದ್ದುಪಡಿಸಿ ಅರ್ಹರಿಗೆ ಬಡ್ತಿ ನೀಡಲಾಗುತ್ತದೆ ಎಂದು ಕೃಷ್ಣಬೈರೇಗೌಡ ಮಾರ್ಮಿಕವಾಗಿ ನುಡಿದರು.
ಸ್ಥಿರಾಸ್ತಿ ದಾಖಲೆ ಪತ್ರಗಳು ಸರಿ ಇದ್ದರೇ ಅದರ ಮೌಲ್ಯ ಸಹ ಹೆಚ್ಚಾಗುತ್ತದೆ. ಬೆಂಗಳೂರು ಸುತ್ತಮುತ್ತ ಜಮೀನು ಖರೀದಿಸಬೇಕಾದರೆ ನೂರೆಂಟು ಸಾರಿ ಯೋಚಿಸುವ ಪರಿಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸಿದ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಸರ್ಕಾರಗಳು ಜನರ ಮೇಲೆ ಹೆಚ್ಚಿನ ತೆರಿಗೆ ವಿಧಿಸಿ ಆದಾಯ ಗಳಿಸುವ ವಿಧಾನ ಸರಿಯಲ್ಲ. ಅದರ ಬದಲು ಭೂಮಿ ದಾಖಲೆಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿದರೇ ಜಮೀನು ಸದ್ಬಳಕೆ ಮಾಡಿಕೊಳ್ಳುವುದರಿಂದ ಮಾಲೀಕನ ಮತ್ತು ಸರ್ಕಾರಗಳ ಆರ್ಥಿಕ ಪರಿಸ್ಥಿತಿ ಹೆಚ್ಚಾಗಲಿದೆ. ಪ್ರತಿ ವರ್ಷ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಬೇಕು. ಇದರಿಂದ ಕಪ್ಪು ಹಣ ಚಲಾವಣೆ ತಪ್ಪಲಿದೆ ಎಂದು ಸಲಹೆ ನೀಡಿದರು.
20 ವರ್ಷದಿಂದ ಹಳೇ ಟಯರ್‌ಗೆ ಪಂಕ್ಚರ್ ಹಾಕಿದಂತೆ ಕಾವೇರಿ 1.0 ತಂತ್ರಾಂಶವನ್ನು ಆತಂಕದಲ್ಲಿ ಬಳಸಲಾಗುತ್ತಿತ್ತು. ಇದೀಗ ಯಶಸ್ವಿಯಾಗಿ ಕಾವೇರಿ 2.0 ಸ್‌ಟಾವೇರ್ ಅಳವಡಿಸಿದ್ದು, ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಿ ಮತ್ತಷ್ಟು ಜನಸ್ನೇಹಿ ಸೇವೆ ನೀಡುತ್ತೆವೆ.
ಬಿ.ಆರ್.ಮಮತಾ, ಆಯುಕ್ತೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ