ಡಿಜಿಟಲ್ ವಾಟರ್ ಸ್ಟಾಕ್

Peanuts_irrigation_in_india
Published on

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ರಾಜ್ಯದ ಜಲಮೂಲಗಳ ನಿರ್ವಹಣೆ ಮತ್ತು ಸಂರಕ್ಷಣೆಯಲ್ಲಿ ಪಾರದರ್ಶಕತೆ ತರಲು ಉಪಗ್ರಹ ದತ್ತಾಂಶ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ‘ಡಿಜಿಟಲ್ ವಾಟರ್ ಸ್ಟಾಕ್’ (ಡಿಡಬ್ಲ್ಯುಎಸ್) ಯೋಜನೆ ರೂಪಿಸಲಾಗಿದೆ. ದೇಶದಲ್ಲೇ ಪ್ರಥಮ ಬಾರಿಗೆ ವಿನೂತನ ಯೋಜನೆ ರೂಪಿಸಿರುವ ಸಣ್ಣ ನೀರಾವರಿ ಇಲಾಖೆ ‘ನೀರಿದ್ದರೆ ನಾಳೆ’ ಕಾರ್ಯಕ್ರಮದೊಂದಿಗೆ ಅನುಷ್ಠಾನಕ್ಕೆ ಮುಂದಾಗಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆ, ಡಿಜಿಟಲ್ ವಾಟರ್ ಸ್ಟಾಕ್ ಹೆಸರಿನಲ್ಲಿ ತಂತ್ರಜ್ಞಾನ ಆಧಾರಿತ ನೀರಿನ ನಿರ್ವಹಣಾ ವೇದಿಕೆ ಸ್ಥಾಪಿಸಿದೆ. ಅನುಷ್ಠಾನದ ಜವಾಬ್ದಾರಿ ರಾಜ್ಯ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಿದೆ.

ಉಪಗ್ರಹಗಳ ಸೆನ್ಸಾರ್‌ಗಳು, ಇಮೇಜಿಂಗ್ ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗ್ ಸಹಾಯದಿಂದ ಜಲಮೂಲಗಳ ಸಮಗ್ರ ದತ್ತಾಂಶ ಸಂಗ್ರಹಿಸಲಾಗುತ್ತದೆ. ಕಳೆದ 5 ವರ್ಷಗಳ ಹಿಂದಿನ ದತ್ತಾಂಶಗಳನ್ನು ಪಡೆದು ಪ್ರಸ್ತುತ ಇರುವ ಸ್ಥಿತಿ-ಗತಿಗಳ ಹೋಲಿಕೆ ಮಾಡಿ ಜಲಮೂಲದ ಸ್ವರೂಪ, ಮೂಲ ಪ್ರದೇಶ, ಆಕಾರ, ಬರ್ ವಲಯ, ನೀರಿನ ಶೇಖರಣೆಯಲ್ಲಿ ಆಗುತ್ತಿರುವ ವ್ಯತ್ಯಾಸ, ನೀರಿನ ಗುಣಮಟ್ಟ, ನೀರಿನ ಸಂಗ್ರಹಣಾ ಸಾಮರ್ಥ್ಯದ ನೈಜ ಸಮಯದಲ್ಲಿ ಮಾಹಿತಿ ಸಂಗ್ರಹಿಸಿ ಅಂತರ್ಜಲ ಅಭಿವೃದ್ಧಿಗಾಗಿ ನೀತಿ-ನಿರೂಪಣೆಗಳನ್ನು ರಚಿಸಲಾಗುತ್ತದೆ. ಇದರಿಂದ ಜಾಗೃತಿ ಅಭಿಯಾನವು ಸಂರಕ್ಷಣೆ ಮತ್ತು ಜವಾಬ್ದಾರಿಯುತ ನೀರಿನ ಬಳಕೆಯ ಸಂಸ್ಕೃತಿ ಬೆಳೆಸಲು ಸಹಾಯವಾಗಲಿದೆ. ಶಾಲಾ-ಕಾಲೇಜಿನಲ್ಲಿ ಅರಿವು, ಸಮುದಾಯ ಕಾರ್ಯಾಗಾರ ಮತ್ತು ಡಿಜಿಟಲ್ ಅಭಿಯಾನಗಳು ರೂಪಿಸಲು ನಿರ್ಧಾರ ಮಾಡಲಾಗಿದೆ.

‘ನೀರಿದ್ದರೆ ನಾಳೆ’ ವಿಶೇಷ ಪರಿಕಲ್ಪನೆಯ ಜಲ ಮೂಲಗಳ ಸಂರಕ್ಷಣೆ ಅಭಿಯಾನವನ್ನು ಅಕ್ಟೋಬರ್ 9ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ 16 ಜಿಲ್ಲೆಗಳಲ್ಲಿನ 27 ತಾಲೂಕುಗಳ 525 ಅಂತರ್ಜಲ ಅತಿಬಳಕೆ ಗ್ರಾಮ ಪಂಚಾಯಿತಿಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಪೈಕಿ ಕಲ್ಯಾಣ ಕರ್ನಾಟಕ ಭಾಗದ 100ಕ್ಕೂ ಹೆಚ್ಚು ಅಂತರ್ಜಲ ಅತಿಬಳಕೆ ಗ್ರಾಮ ಪಂಚಾಯಿತಿಗಳಲ್ಲಿ ಸಣ್ಣ ನೀರಾವರಿ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ 200 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಇದರಡಿ ಡಿಜಿಟಲ್ ವಾಟರ್ ಸ್ಟಾಕ್ ಅನುಷ್ಠಾನ ಮಾಡಲಾಗುತ್ತದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶೇ.70 ಕೆರೆ ಒತ್ತುವರಿ ತೆರವು

ರಾಜ್ಯದಲ್ಲಿ 41,849 ಜಲಮೂಲಗಳ ಪೈಕಿ 35,989 ಜಲಮೂಲಗಳ ಅಳತೆ ಪೂರ್ಣಗೊಂಡಿದೆ. ಈ ಪೈಕಿ 13,644 ಕೆರೆಗಳ ಒತ್ತುವರಿ ಗುರುತಿಸಲಾಗಿದೆ. ಇದರಲ್ಲಿ 7987 ಕೆರೆಗಳ (ಶೇ.70) ಒತ್ತುವರಿ ತೆರವು ಮಾಡಲಾಗಿದೆ.

44 ತಾಲೂಕಿನಲ್ಲಿ ಅತಿಬಳಕೆ

ರಾಜ್ಯದ 237 ತಾಲೂಕುಗಳ ಪೈಕಿ 44 ಕಡೆಯಲ್ಲಿ ಅಂತರ್ಜಲ ಅತಿಬಳಕೆ ಮಾಡಲಾಗುತ್ತಿದೆ. ವಿಶೇಷವಾಗಿ ಬೆಂಗಳೂರು, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳ ಅನೇಕ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಉಳಿದಂತೆ 11 ತಾಲೂಕಿನಲ್ಲಿ ಶೇ.90, 36 ತಾಲೂಕಿನಲ್ಲಿ ಶೇ.70-90 ಮತ್ತು 145 ತಾಲೂಕಿನಲ್ಲಿ ಶೇ.70 ಸುರಕ್ಷಿತ ಬಳಕೆ ಮಾಡಲಾಗುತ್ತಿದೆ.

ಪ್ರಮುಖಾಂಶಗಳು

-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರಿಯಾ ಯೋಜನೆ ರೂಪಿಸುವುದು

-ನೀರಿನ ಬಳಕೆಯ ಬಗ್ಗೆ ಅರಿವು ಮೂಡಿಸುವುದು

-ತಂತ್ರಜ್ಞಾನ ಬಳಸಿ ನೈಜ ಜಲಮೂಲಗಳ ಸ್ಥಿತಿಗತಿ ತಿಳಿದು ಸುಧಾರಣಾ ನೀತಿ

-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀರಿನ ಲಭ್ಯತೆ ಮತ್ತು ಬಳಕೆ ಸಮತೋಲನ

-ವಿಶ್ವ ಜಲ ದಿನದಂದು ‘ನೀರಿದ್ದರೆ ನಾಳೆ’ ವಿಶೇಷ ಗ್ರಾಮ ಸಭೆ ಆಯೋಜನೆ

ಡಿಜಿಟಲ್ ವಾಟರ್ ಸ್ಟಾಕ್ ದತ್ತಾಂಶ ಆಧರಿಸಿ ಜಲ ಸಮೃದ್ಧ, ಸುಭದ್ರ, ಸುಸ್ಥಿರ ರಾಜ್ಯ ನಿರ್ಮಾಣದ ಗುರಿ ಹೊಂದಲಾಗಿದೆ. ಇದಕ್ಕಾಗಿ ನೀರಿದ್ದರೆ ನಾಳೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಎನ್.ಎಸ್.ಬೋಸರಾಜು, ಸಣ್ಣ ನೀರಾವರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net