

ಬೆಂಗಳೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಕಾರ್ ಬಾಂಬ್ ಸ್ಫೋಟ ಮತ್ತು ಕರ್ನಾಟಕದ ಮಂಗಳೂರಿನಲ್ಲಿ ಆಟೋದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕರ್ನಾಟಕ, ತಮಿಳುನಾಡು ಮತ್ತು ಕೇರಳದ 40 ಸ್ಥಳಗಳಲ್ಲಿ ಬುಧವಾರ ದಾಳಿ ನಡೆಸಿದೆ. ಭಯೋತ್ಪಾದಕ ಸಂಘಟನೆ ಐಸಿಸ್ ಜತೆ ಸಂಪರ್ಕವಿರುವ ಶಂಕಿತರ ಹೆಡೆಮುರಿ ಕಟ್ಟಲು ನಡೆದ ಕಾರ್ಯಾಚರಣೆ ವೇಳೆ ಅಪಾರ ಪ್ರಮಾಣದ ಡಿಜಿಟಲ್ ಉಪಕರಣಗಳು ಪತ್ತೆಯಾಗಿವೆ.
2022ರ ಅ.23ರಂದು ಕೊಯಮತ್ತೂರಿನಲ್ಲಿ ನಡೆದ ಸ್ಪೋಟದಲ್ಲಿ 23 ವರ್ಷದ ಶಂಕಿತ ಉಗ್ರ ಜಮೇಶಾ ಮುಬಿನ್ ಮೃತಪಟ್ಟಿದ್ದ. ಐಸಿಸ್ ಜತೆ ನಂಟು ಹೊಂದಿದ್ದ ಅನುಮಾನದ ಮೇಲೆ ಎನ್ಐಎ 2019ರಲ್ಲಿಯೇ ಆತನ ವಿಚಾರಣೆ ನಡೆಸಿತ್ತು. ಎರಡು ಗ್ಯಾಸ್ ಸಿಲಿಂಡರ್ ಹೊಂದಿದ್ದ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕೋಮು ಸೂಕ್ಷ್ಮ ಪ್ರದೇಶ ಉಕ್ದಮ್ ಕೊಟ್ಟೆ ೖಮೇಡು ಎಂಬಲ್ಲಿ ಕೊಟ್ಟೈ ಈಶ್ವರನ್ ದೇವಸ್ಥಾನದ ಮುಂಭಾಗ ಸಿಲಿಂಡರ್ ಸ್ಪೋಟಿಸಿ ಮುಬಿನ್ ಮೃತಪಟ್ಟಿದ್ದ.
ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಐಸಿಸ್ನೊಂದಿಗೆ ಗುರುತಿಸಿಕೊಂಡಿದ್ದ ಜಮೇಶಾ ಮುಬೀನ್, ಭಯೋತ್ಪಾದನೆ ಉಂಟುಮಾಡಲೆಂದೇ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ್ದ. ಧಾರ್ವಿುಕ ಕೇಂದ್ರಗಳು ಮತ್ತು ಸ್ಮಾರಕಗಳನ್ನು ಟಾರ್ಗೆಟ್ ಮಾಡಿದ್ದ. ಅಂತೆಯೇ, ಸ್ಪೋಟದಲ್ಲಿ ದೇವಾಲಯದ ಸಂಕೀರ್ಣಕ್ಕೆ ವ್ಯಾಪಕ ಹಾನಿಯುಂಟಾಗಿತ್ತು. 2022ರ ದೀಪಾವಳಿ ಹಿಂದಿನ ದಿನ ನಡೆದ ಸ್ಪೋಟವನ್ನು ‘ಒಂಟಿ ತೋಳ’ ದಾಳಿ ಎಂದು ಕರೆಯಲಾಗುತ್ತದೆ. ಮುಬಿನ್ ದೇವಸ್ಥಾನದ ಮೇಲೆ ಆತ್ಮಹತ್ಯಾ ದಾಳಿ ನಡೆಸಿ ದೇವಾಲಯ ಸಂಕೀರ್ಣವನ್ನು ಧ್ವಂಸಗೊಳಿಸುವ ಯೋಜನೆ ಹೊಂದಿದ್ದ. ಅಲ್ಲದೆ, ಸಮುದಾಯದಲ್ಲಿ ಭಯದ ವಾತಾವರಣ ಹುಟ್ಟಿಸುವುದು ಆತನ ಉದ್ದೇಶವಾಗಿತ್ತು ಎಂದು ಎನ್ಐಎ ತಿಳಿಸಿದೆ. ಕೊಯಮತ್ತೂರು ಸ್ಫೋಟ ಸಂಬಂಧ 2022ರ ಅ.23ರಂದು ಉಕ್ದಮ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ನಂತರ ಪ್ರಕರಣದ ತನಿಖೆಯನ್ನು ಎನ್ಐಎ ವಹಿಸಿಕೊಂಡಿತ್ತು.
2022ರ ನ.19ರಂದು ಮಂಗಳೂರು ನಗರದಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿತ್ತು. ಆಟೋ ಚಾಲಕ ಮತ್ತು ಆರೋಪಿ ಮಹಮ್ಮದ್ ಶಾರಿಕ್ ಗಾಯಗೊಂಡಿದ್ದರು. ಈ ಎರಡೂ ಪ್ರಕರಣಗಳಲ್ಲಿ ಒಂದೇ ಉಗ್ರ ಸಂಘಟನೆಯ ಕೈವಾಡ ಇರುವುದು ಗೊತ್ತಾಗಿತ್ತು. ಹೀಗಾಗಿ ಎನ್ಐಎ ಅಧಿಕಾರಿಗಳು ತನಿಖೆ ಕೈಗೊಂಡಿದ್ದರು.
ಎರಡೂ ಪ್ರಕರಣಗಳ ತನಿಖೆಯ ಮುಂದುವರಿದ ಭಾಗವಾಗಿ ಬುಧವಾರ ಕೊಯಮತ್ತೂರಿನಲ್ಲಿ 15 ಕಡೆ, ತಿರುಚ್ಚಿ-1, ನೀಲಗಿರಿ-2, ತಿರುನ್ವೇಲಿ-3, ಟುಟಿಕೋರಿನ್-1, ಚೆನ್ನೈ-3, ತಿರುವಣ್ಣಾಮಲೈ-2, ದಿಂಡಿಗಲ್-1, ಮೈಲಾಡುತುರೈ-1, ಕೃಷ್ಣಗಿರಿ-1, ಕನ್ಯಾಕುಮಾರಿ-1, ತೆಂಕಾಶಿ-1, ಕೇರಳದ ಎರ್ನಾಕುಲಂ-5 ಮತ್ತು ತಿರುಪ್ಪೂರ್-2 ಮತ್ತು ಮೈಸೂರಿನಲ್ಲಿ ಒಂದು ಕಡೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ. ಭಾರಿ ಪ್ರಮಾಣದ ಡಿಜಿಟಲ್ ಸಾಧನಗಳು ಹಾಗೂ 4 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಐಸಿಸ್ ಧ್ವಜ ವಶಕ್ಕೆ: ಕೊಯಮತ್ತೂರಿನ ಸ್ಫೋಟ ಪ್ರಕರಣಕ್ಕೂ ಮುಂಚೆ ಸ್ಥಳೀಯ ಪೊಲೀಸರು ಶಂಕಿತ ಉಗ್ರ ಮುಬಿನ್ನಿಂದ 75 ಕೆಜಿ ಸ್ಪೋಟಕಗಳು ಮತ್ತು ಐಸಿಸ್ ಧ್ವಜವನ್ನು ಹೋಲುವ ಬಾವುಟ ಸಹಿತ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಭಯೋತ್ಪಾದನೆ ಹುಟ್ಟಿಸುವಂತಹ ಹಲವು ಬರಹಗಳೂ ಅದರಲ್ಲಿ ಸೇರಿದ್ದವು. ಇ-ಕಾಮರ್ಸ್ ವೇದಿಕೆಗಳಲ್ಲಿ ಸ್ಪೋಟಕಗಳನ್ನು ಖರೀದಿಸಿ ಅವುಗಳನ್ನು ಬಾಡಿಗೆ ಮನೆಯಿಂದ ಇನ್ನೊಂದು ಮನೆಗೆ ಸಾಗಿಸಲು ಮುಬಿನ್ಗೆ ನೆರವಾದ ಆರೋಪದಲ್ಲಿ ಸ್ಥಳೀಯ ಪೊಲೀಸರು 11 ಜನರನ್ನು ಬಂಧಿಸಿದ್ದರು.
ತುಂಗಾ ನದಿ ತೀರದಲ್ಲಿ ಟ್ರಯಲ್ ಬ್ಲಾಸ್ಟ್: ತುಂಗಾನದಿ ತೀರದಲ್ಲಿ ಕಳೆದ ವರ್ಷ ನಡೆದಿದ್ದ ಟ್ರಯಲ್ ಬ್ಲಾಸ್ಟ್ ಮತ್ತು ಪ್ರೇಮ್ಂಗ್ ಮೇಲೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು, ಶಿವಮೊಗ್ಗ ನಗರಕ್ಕೆ ಭೇಟಿ ನೀಡಿ ದಾಖಲೆಗಳನ್ನು ಕಲೆಹಾಕಿದ್ದಾರೆ. ಎನ್ಐಎ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಅಧಿಕಾರಿಗಳು ಸಾಗರ ರಸ್ತೆಯ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಎರಡೂ ಪ್ರಕರಣಗಳ ಆರೋಪಿಗಳ ಕುಟುಂಬಸ್ಥರನ್ನು ಕರೆಸಿ ವಿಚಾರಣೆ ನಡೆಸಿದರು. ಈ ವೇಳೆ ಪೊಲೀಸರಿಂದಲೂ ಕೆಲ ಮಾಹಿತಿ ಪಡೆದರು. 2022ರ ಆಗಸ್ಟ್ 15ರಂದು ಅಮೀರ್ ಅಹಮ್ಮದ್ ವೃತ್ತದಲ್ಲಿ ಸಾವರ್ಕರ್ ಫ್ಲೆಕ್ಸ್ ವಿಚಾರದಲ್ಲಿ ನಡೆದ ಗಲಭೆ ವೇಳೆ ಯುವಕ ಪ್ರೇಮ್ಂಗ್ ಚಾಕು ಇರಿತಕ್ಕೊಳಗಾಗಿದ್ದರು. ಬಳಿಕ ನವೆಂಬರ್ನಲ್ಲಿ ಟ್ರಯಲ್ ಬ್ಲಾಸ್ಟ್ ಪ್ರಕರಣ ದಾಖಲಾಗಿತ್ತು. ಎರಡು ಪ್ರಕರಣಗಳೂ ಎನ್ಐಎಗೆ ವರ್ಗಾವಣೆ ಬಳಿಕ ಕಳೆದ ಡಿಸೆಂಬರ್ನಲ್ಲಿ ಪ್ರಮುಖ ಆರೋಪಿ ಶಾರೀಕ್ ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಬಂಧಿತನಾಗಿದ್ದ.