

ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಸಾಹಿತ್ಯದ 12 ಕೃತಿಗಳ ಡಿಜಿಟಲ್ ಆವೃತ್ತಿ ಲೋಕಾರ್ಪಣೆಯಾದ ಒಂದೇ ದಿನದಲ್ಲಿ ಆನ್ಲೈನ್ನಲ್ಲಿ ಲಭ್ಯವಾಗುತ್ತಿವೆ.
ಕನ್ನಡ ರಾಜ್ಯೋತ್ಸವದ ಕೊಡುಗೆಯಾಗಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಭಾನುವಾರ ಈ ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದರು. ಗೂಗಲ್ಪ್ಲೇ ಬುಕ್ನಲ್ಲಿ ಈ ಕೃತಿಗಳು ಮಾರಾಟಕ್ಕಿದ್ದು, ಸಾಹಿತ್ಯಾಸಕ್ತರೂ ಖರೀದಿ ಮಾಡಬಹುದು. ರಾಜ್ಯೋತ್ಸವ ಪ್ರಯುಕ್ತ ಮುದ್ರಿತ ಕೃತಿಗಳಿಗೆ ಶೇ.50 ರಿಯಾಯಿತಿಯನ್ನು ಹಂಪಿ ವಿಶ್ವವಿದ್ಯಾಲಯ ಈಗಾಗಲೇ ಘೋಷಿಸಿದೆ.
ಹಂಪಿ ವಿವಿಯ ಕನ್ನಡ ವಿಭಾಗದ ಪ್ರೊ. ಕೆ.ಸಿ.ಶಿವಾರೆಡ್ಡಿ ಈ ಸಂಪುಟಗಳನ್ನು ಸಂಪಾದಿಸಿದ್ದು, ಮುದ್ರಣ ಆವೃತ್ತಿಯೂ ಮಾರಾಟಕ್ಕಿದೆ. ವಿವಿಯ ಬೆಂಗಳೂರು ಕೇಂದ್ರದಲ್ಲಿ ಈ ಕೃತಿಗಳು ದೊರಕುತ್ತವೆ.
ಆನ್ಲೈನ್ನಲ್ಲಿ ಖರೀದಿಸಲು ಗೂಗಲ್ಪ್ಲೇ ಬುಕ್ಗೆ ಬಂದು ಕುವೆಂಪು ಬುಕ್ಸ್ ಎಂದು ಟೈಪ್ ಮಾಡಿದರೆ ಸಾಕು, ಅಷ್ಟು ಸಂಪುಟಗಳು ತೆರೆದುಕೊಳ್ಳುತ್ತವೆ. ಆಸಕ್ತರು ಖರೀದಿಗೂ ಮುನ್ನ ಅಷ್ಟೂ ಸಂಪುಟಗಳ ಶೇ.20 ಭಾಗವನ್ನು ಆನ್ಲೈನ್ನಲ್ಲಿಯೇ ಓದಬಹುದು. ಉಳಿದ ಭಾಗವನ್ನು ಓದಬೇಕಾದರೆ ಪುಸ್ತಕಗಳನ್ನು ಖರೀದಿ ಮಾಡಬೇಕು.
ಡಿಜಿಟಲ್ ವರ್ಷನ್ ಓದಲು ಅತ್ಯಂತ ವೈಜ್ಞಾನಿಕವಾಗಿದ್ದು, ಸುಲಭವೂ ಆಗಿದೆ ಎಂದು ಡಾ.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟಿದ್ದಾರೆ.