

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶದಲ್ಲಿ ಡಿಜಿಟಲ್ ಇ-ಸ್ಟಾಂಪ್ ಸೇವೆ ಲಭ್ಯವಾಗಿದ್ದು, ಭೌತಿಕ ಇ-ಸ್ಟಾಂಪ್ ಸೌಲಭ್ಯ ಕೆಲವೇ ದಿನಗಳಲ್ಲಿ ಮರೆಯಾಗಲಿದೆ.
ಕಾನೂನು ದಾಖಲೆಗಳಿಗೆ ಅಗತ್ಯ ಇರುವ ಸ್ಟಾಂಪ್ ಡ್ಯೂಟಿ ಪಾವತಿಸಿರುವುದಕ್ಕೆ ಸಾಕ್ಷಿಯಾಗಿ ಬಳಸುವ ಕಾಗದಕ್ಕೆ ಸ್ಟಾಂಪ್ ಪೇಪರ್ ಎನ್ನಲಾಗುತ್ತದೆ. ಇದು ಅಫಿಡವಿಟ್, ಒಪ್ಪಂದ (ಬಾಡಿಗೆ, ಲೀಸ್, ಮಾರಾಟ) ಬಾಂಡ್‌ಗಳು ಮುಂತಾದ ದಾಖಲೆಗಳನ್ನು ಕಾನೂನುಬದ್ಧವಾಗಿ ಮಾನ್ಯಗೊಳಿಸುತ್ತದೆ. ಸ್ಟಾಂಪ್ ಡ್ಯೂಟಿ ಪಾವತಿಸಲು ಭೌತಿಕ ಸ್ಟಾಂಪ್ ಪೇಪರ್‌ಗಳನ್ನು ಅಧಿಕೃತ ಮಾರಾಟಗಾರರಿಂದ ಖರೀದಿಸಬೇಕಾಗಿತ್ತು. ಛಾಪಾ ಕಾಗದ ಹಗರಣ ನಡೆದು ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟವಾದ ಹಿನ್ನೆಲೆಯಲ್ಲಿ ಮುದ್ರಿತ ಪೇಪರ್ ರದ್ದು ಮಾಡಲಾಗಿತ್ತು.
ಆ ನಂತರ ಅಧಿಕೃತ ಮಾರಾಟಗಾರರು ಮತ್ತು ಸಹಕಾರ ಬ್ಯಾಂಕಿನವರು ಇ-ಸ್ಟಾಂಪ್ ಪೇಪರ್ ಸೇವೆ ಪರಿಚಯಿಸಿದರು. ಇದೀಗ ಈ ಸೇವೆಯನ್ನು ಮತ್ತಷ್ಟು ಅಪ್‌ಡೇಟ್ ಮಾಡಿದ ಇಲಾಖೆ ಕಾವೇರಿ 2.0 ವೆಬ್‌ಸೈಟ್‌ನಲ್ಲೇ ಡಿಜಿಟಲ್ ಇ-ಸ್ಟಾಂಪ್ ಪೇಪರ್ ಸೇವೆ ಪರಿಚಯಿಸಿದೆ. ಇದಕ್ಕಾಗಿ ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಸೆಕ್ಷನ್ 10, 68ಕ್ಕೆ ತಿದ್ದುಪಡಿ ತಂದಿದೆ.
ಪ್ರಸ್ತುತ ನೋಂದಣಿ ಕಡ್ಡಾಯವಲ್ಲದ ದಸ್ತಾವೇಜುಗಳಿಗೆ ಮಾತ್ರ ಡಿಜಿಟಲ್ ಇ-ಸ್ಟಾಂಪ್ ಪೇಪರ್ ನೀಡಲಾಗುತ್ತಿದೆ. ಇದನ್ನು ಪಡೆಯಲು ಪಕ್ಷಕಾರರ ಆಧಾರ್ ಆಧಾರಿತ ಇ-ಸಹಿ ಅಗತ್ಯ ಇರುವ ಕಾರಣ ಆಧಾರ್ ಕಡ್ಡಾಯವಾಗಿ ಬೇಕಾಗಿದೆ. ಇ-ಸಹಿ ಜತೆಗೆ ೆಟೋ ಸಹ ಡಿಜಿಟಲ್ ಇ-ಸ್ಟಾಂಪ್‌ನಲ್ಲಿ ಮುದ್ರಿತವಾಗಿ ಕೈಸೇರಲಿದೆ.
ಯಾವ ಉದ್ದೇಶಕ್ಕೆ ಡಿಜಿಟಲ್ ಇ-ಸ್ಟಾಂಪ್ ಪೇಪರ್ ಖರೀದಿ ಮಾಡಲಾಗುತ್ತಿದೆ. ಅದರ ಮೌಲ್ಯ ಎಷ್ಟೆಂದು ಮುದ್ರಣ ಮಾಡಿದರೆ ಸಾಕು ಮುದ್ರಣ ಶುಲ್ಕವನ್ನು ಸ್ವಯಂಚಾಲಿತವಾಗಿ ಲೆಕ್ಕಚಾರ ಮಾಡಿ ತೋರಿಸಲಿದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಿದರೆ ಡಿಜಿಟಲ್ ಇ-ಸ್ಟಾಂಪ್ ಅಪ್ಲಿಕೇಷನ್‌ನಲ್ಲಿ ವಿಶಿಷ್ಟ ಸಂಖ್ಯೆಯ ಇ-ಸ್ಟಾಂಪ್ ಸಿಗಲಿದೆ. ಇದನ್ನು ಮುಖ್ಯ ನಿಯಂತ್ರಕ ರಾಜಸ್ವ ಪ್ರಾಧಿಕಾರ ದೃಢೀಕರಿಸಿದ ಮೇಲೆ ಇ-ಸ್ಟಾಂಪ್ ಭಂಡಾರದಲ್ಲಿ ಶಾಶ್ವತವಾಗಿ ಸಂಗ್ರಹಿಸಲಾಗುತ್ತದೆ.
ಇದರೊಂದಿಗೆ ಇ-ಸ್ಟಾಂಪ್‌ಗೆ ಆಧಾರ್ ಇ-ಸೈನ್ ಅಥವಾ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ನಿಬಂಧನೆಗಳ ಪ್ರಕಾರ ನೀಡಲಾದ ಡಿಜಿಟಲ್ ಸಹಿಯುಳ್ಳ ಪ್ರಮಾಣ ಪತ್ರ ನೀಡಲಾಗುತ್ತದೆ. ಡಿಜಿಟಲ್ ಇ-ಸ್ಟಾಂಪ್ ಭಂಡಾರದಲ್ಲಿ ಸಂಗ್ರಹಿಸಿದ ಡಿಜಿಟಲ್ ಇ-ಸ್ಟಾಂಪ್‌ಗಳನ್ನು ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೇವೆ ಪಡೆಯುವುದು ಹೇಗೆ
ಕಾವೇರಿ 2.0 ತಂತ್ರಾಂಶಕ್ಕೆ ಸಿಟಿಜನ್ ಲಾಗಿನ್ ಮೂಲಕ ಪ್ರವೇಶಿಸಿ ಡಿಜಿಟಲ್ ಇ-ಸ್ಟಾಂಪ್ ಸೇವೆ ಮೇಲೆ ಕ್ಲಿಕ್ ಮಾಡಿದಾಗ ನೇಚರ್ ಆ್ ಡಾಕ್ಯೂಮೆಂಟ್‌ನಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಆ ನಂತರ ಸಬ್ ಆರ್ಟಿಕಲ್ ಒಕೆ ಮಾಡಿ ಮುಂದುವರಿದರೆ ಅಲ್ಲಿ ವೈಯಕ್ತಿಕ ಮತ್ತು ಸಂಘ-ಸಂಸ್ಥೆಯೇ ಎಂಬುದರ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ಆ ನಂತರ ಪಕ್ಷಕಾರರ ವಿವರದ ಜಾಗದಲ್ಲಿ ಆಧಾರ್ ನಂಬರ್ ಅಪ್‌ಲೋಡ್ ಮಾಡಿದಾಗ ಅದರಲ್ಲಿನ ಇ-ಸಹಿ ಮತ್ತು ೆಟೋ ತೆಗೆದುಕೊಳ್ಳಲಿದೆ. ಆ ನಂತರ ಎಷ್ಟು ಮೊತ್ತದ ವ್ಯವಹಾರ ಎಂದು ನಮೂದಿಸಿದಾಗ ಸ್ವಯಂ ಚಾಲಿತವಾಗಿ ಮುದ್ರಾಂಕ ಶುಲ್ಕ ಲೆಕ್ಕಾಚಾರ ಮಾಡಿ ತೋರಿಸಲಿದೆ. ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಿದಾಗ ನಮಗೆ ಡಿಜಿಟಲ್ ಇ-ಸ್ಟಾಂಪ್ ಸೇವೆ ದೊರೆಯಲಿದೆ.
ಜನರ ಜೇಬಿಗೆ ಕತ್ತರಿ ಆತಂಕ :
ಡಿಜಿಟಲ್ ಇ-ಸ್ಟಾಂಪ್ ಪಡೆಯಬೇಕಾದರೆ ಕಡ್ಡಾಯವಾಗಿ ಆಧಾರ್ ಬೇಕಾಗಿದೆ. ಈ ಸೇವೆಯಿಂದ ಅನಿವಾಸಿ ಭಾರತೀಯರು ವಂಚಿತರಾಗುವ ಸಾಧ್ಯತೆ ಇದೆ. ಅಲ್ಲದೆ, ಮನೆ, ಕಟ್ಟಡ, ಭೂಮಿ ಇನ್ನಿತರ ಸ್ಥಿರಾಸ್ತಿಗಳ ಬಾಡಿಗೆ ಕರಾರು ಪತ್ರಗಳಿಗೆ ಇ-ಸ್ಟಾಂಪ್ ಪಡೆಯುವಾಗ ಮುದ್ರಾಂಕ ಶುಲ್ಕ ಪಾವತಿಸಬೇಕಾ ಎಂಬ ಆತಂಕ ಹುಟ್ಟಿಕೊಂಡಿದೆ. ಜನರು ತಮಗೆ ಬೇಕಾದ ಮೌಲ್ಯದ ಇ-ಸ್ಟಾಂಪ್ ಪೇಪರ್ ಪಡೆಯುತ್ತಿದ್ದರು. ಇನ್ನು ಮುಂದೆ ಏನಾಗುತ್ತದೆ ಎಂಬ ಗೊಂದಲವಿದೆ.
ನೋಂದಣಿ ಕಡ್ಡಾಯವಲ್ಲದ ದಸ್ತಾವೇಜು
-ಬ್ಯಾಂಕ್ ಗ್ಯಾರಂಟಿ
-ಸಾಲ ಒಪ್ಪಂದ
-ಇಂಡೆಮ್ನಿಟಿ ಬಾಂಡ್
-ಹೈಪೋಥೆಕೇಶನ್ ಒಪ್ಪಂದ
-ಪಣ ಮತ್ತು ಅಡಮಾನ
-ಘೋಷಣೆ (ಡಿಕ್ಲರೇಷನ್)
-ಪ್ರಾಮಿಸ್ಸರಿ ನೋಟ್ಸ್
-ಅಫಿಡವಿಟ್
-ಸ್ವಾಧೀನರಹಿತ ಕ್ರಯದ ಕರಾರು