ಖಾಸಗಿ ಕಾಲೇಜು ಪ್ರಾಂಶುಪಾಲೆಗೆ ಡಿಜಿಟಲ್ ಆರೆಸ್ಟ್

Cyber Crime
Published on

ಬೆಂಗಳೂರು :ವಿದೇಶಕ್ಕೆ 180 ಮಕ್ಕಳನ್ನು ಅಕ್ರಮವಾಗಿ ಸಾಗಣೆ ಮಾಡಿದ್ದಾಗಿ ಖಾಸಗಿ ಕಾಲೇಜು ಪ್ರಾಂಶುಪಾಲರಿಗೆ ಹೆದರಿಸಿ ಡಿಜಿಟಲ್ ಆರೆಸ್ಟ್ ಮಾಡಿ ಸೈಬರ್ ಕಳ್ಳರು 24.36 ಲಕ್ಷ ರೂ. ಸುಲಿಗೆ ಮಾಡಿದ್ದಾರೆ.

ಹಳೇ ವಿಮಾನ ನಿಲ್ದಾಣ ರಸ್ತೆ ವಿಮಾನಪುರ ನೆಲೆಸಿರುವ ಪ್ರಾಂಶುಪಾಲೆ ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ವೈಟ್‌ಫೀಲ್ಡ್ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಕೊಂಡು ತನಿಖೆ ಕೈಗೊಂಡಿದ್ದಾರೆ.

ನ. 22ರಂದು ಅಪರಿಚಿತ ವ್ಯಕ್ತಿ, ಪ್ರಾಂಶುಪಾಲರ ಮೊಬೈಲ್‌ಗೆ ಕರೆ ಮಾಡಿ ಅಶೀಶ್ ಶರ್ಮಾ ಸಿಬಿಐ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದ.

ಬಳಿಕ ‘ನಿಮ್ಮ ಮೊಬೈಲ್ ನಂಬರ್ ಬಳಸಿ ಮಾನವ ಕಳ್ಳಸಾಗಣೆ ಮತ್ತು ಮನಿ ಲಾಂಡರಿಂಗ್ ನಡೆಯುತ್ತಿದೆ. 16 ಪಾಸ್‌ಪೋರ್ಟ್, 58 ಎಟಿಎಂ ಕಾರ್ಡ್, 140 ಗ್ರಾಂ ಡ್ರಗ್ಸ್ ನಿಮ್ಮ ಹೆಸರಿನಲ್ಲಿ ಸಿಂಗಾಪುರಕ್ಕೆ ಹೋಗುತ್ತಿದ್ದ ಪಾರ್ಸೆಲ್ ಪತ್ತೆಯಾಗಿದೆ. ಅಲ್ಲದೆ, 180 ಮಕ್ಕಳು ಸಿಂಗಾಪುರದಲ್ಲಿ ಸಿಲುಕಿರುವ ವರದಿ ಬಂದಿದ್ದು, ನಿಮ್ಮ ವಿರುದ್ಧ ದೂರು ಬಂದಿದೆ. ನಿಮ್ಮ ವಿರುದ್ಧ ಎ್ಐಆರ್ ದಾಖಲಿಸುವ ಸಲುವಾಗಿ ಕರೆ ಮಾಡಿದ್ದೇವೆ. ಅದಕ್ಕೂ ಮೊದಲು ನಿಮಗೆ ಸಹಾಯ ಮಾಡುತ್ತೇವೆ. ಸಹಕಾರ ಕೊಡಬೇಕು. ನಿಮ್ಮೊಂದಿಗೆ ದೆಹಲಿ ಪೊಲೀಸರು ಮಾತನಾಡಲಿದ್ದಾರೆ’ ಎಂದು ಹೇಳಿ ಕರೆ ಸ್ಥಗಿತ ಮಾಡಿದ್ದರು.

ಕೆಲವೇ ನಿಮಿಷಕ್ಕೆ ದೆಹಲಿ ಪೊಲೀಸರ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಕರೆ ಮಾಡಿದ ವ್ಯಕ್ತಿ, ನಕಲಿ ದಾಖಲೆ ಪತ್ರಗಳನ್ನು ಕಳುಹಿಸಿ ನಂಬಿಸಿದ್ದ. ಬಳಿಕ ಹೇಳಿಕೆ ದಾಖಲು ಮಾಡಿಕೊಳ್ಳಬೇಕೆಂದು ವಿಚಾರಣೆ ನೆಪದಲ್ಲಿ ಹೇಳಿಕೆ ಮಾಹಿತಿ ಕಲೆ ಹಾಕಿದ್ದ. ಇದಾದ ಮೇಲೆ ‘ಮನಿಲಾಂಡರಿಂಗ್ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸಬೇಕು’ ಎಂದು ಹೇಳಿ ವಿವರ ಪಡೆದುಕೊಂಡಿದ್ದ.

‘ನಿಮ್ಮ ಬ್ಯಾಂಕ್ ಖಾತೆಯಲ್ಲಿ ಅಕ್ರಮ ವಹಿವಾಟು ನಡೆದಿದೆ. ಈ ಕೂಡಲೇ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನು ಸರ್ಕಾರದ ಖಾತೆಗೆ ವರ್ಗಾವಣೆ ಮಾಡಿದರೆ ತನಿಖೆ ಮುಗಿದ ಕೂಡಲೇ ವಾಪಸ್ ಬರಲಿದೆ’ ಎಂದು ಹೇಳಿ 24.36 ಲಕ್ಷ ರೂ. ಅನ್ನು ಆರ್‌ಟಿಜಿಎಸ್ ಮಾಡಿಸಿಕೊಂಡಿದ್ದ. ಹಣ ವರ್ಗಾವಣೆ ಆದ ಮೇಲೆ ಅನುಮಾನ ಬಂದು ಪ್ರಾಂಶುಪಾಲರು, ವಾಪಸ್ ಕರೆ ಮಾಡಿದಾಗ ಮೊಬೈಲ್ ಸಂಪರ್ಕಕ್ಕೆ ಸಿಕ್ಕಿಲ್ಲ. ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net