ಡಿಜಿಟಲ್ ಅರೆಸ್ಟ್ ಕಂಪನಿ!

ವಿಜಯವಾಣಿ (2)
Published on

ಬೆಂಗಳೂರಲ್ಲಿ ಕುಳಿತು ಅಮೆರಿಕ, ಕೆನಡಾ ಪ್ರಜೆಗಳಿಗೆ ಗಾಳ

ಬೇರೆ ಬೇರೆ ರಾಜ್ಯಗಳ ಒಟ್ಟು 16 ಜನರ ಬಂಧನನೌಕರರಿಗೆ 20-22 ಸಾವಿರ ರೂ. ಮಾಸಿಕ ವೇತನವಂಚನೆ ಹಣ ಕ್ರಿಪ್ಟೋ ಕರೆನ್ಸಿಗೆ ಬದಲಾವಣೆ ದಂಧೆಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಾಲ್ ಸೆಂಟರ್ ಕಚೇರಿ ತೆರೆದು ಇಲ್ಲಿಂದಲೇ ಅಮೆರಿಕ, ಕೆನಡಾ ದೇಶದ ಪ್ರಜೆಗಳನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದ ಸೈಬರ್ ವಂಚಕರ ಜಾಲವನ್ನು ನಗರದ ಆಗ್ನೇಯ ವಿಭಾಗದ ಪೊಲೀಸರು ಬಲೆಗೆ ಕೆಡವಿದ್ದಾರೆ. ಡಿಜಿಟಲ್ ವಂಚಕರ ಬಂಧನಕ್ಕಾಗಿ ಇತ್ತೀಚೆಗೆ ರಚನೆಯಾಗಿದ್ದ ವಿಶೇಷ ಪೊಲೀಸ್ ತಂಡ 16 ಸೈಬರ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬೇರೆ ಬೇರೆ ರಾಜ್ಯಗಳ ಜನರನ್ನು ಆಯ್ಕೆ ಮಾಡಿ ಅವರಿಗೆ ಡಿಜಿಟಲ್ ಅರೆಸ್ಟ್ ಮಾಡುವ ತರಬೇತಿ ನೀಡಲಾಗುತ್ತಿತ್ತು. ಆಧುನಿಕ ತಂತ್ರಜ್ಞಾನ ಹೊಂದಿರುವ ಹಲವು ಉಪಕರಣ ಬಳಸಲಾಗುತ್ತಿತ್ತೆಂಬುದು ಬೆಳಕಿಗೆ ಬಂದಿದೆ. 2 ವರ್ಷಗಳಿಂದ ಈ ಗ್ಯಾಂಗ್ ಎಚ್​ಎಸ್​ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೈಬರ್ ಅಪರಾಧ ಕೃತ್ಯಕ್ಕಾಗಿ ಕಂಪನಿ ತೆರೆದುಕೊಂಡು ವಂಚಿಸುತ್ತಿತ್ತು.

ಡಿಜಿಟಲ್ ಅರೆಸ್ಟ್ ಹೇಗೆ?: ಆನ್​ಲೈನ್​ನಲ್ಲಿ ವಿದೇಶಿಗರ ವಿಳಾಸ, ದೂರ

ವಾಣಿ, ಮೊಬೈಲ್ ನಂಬರ್ ಪಡೆದುಕೊಂಡು ನಿಮ್ಮ ಹೆಸರಿನಲ್ಲಿ ಮಾದಕ ವಸ್ತು ಸಾಗಣೆ ಕಾಯ್ದೆ ಅಡಿ ಅಪರಾಧ ನಡೆದಿದ್ದು, ಮನಿಲ್ಯಾಂಡರಿಂಗ್ ವಂಚನೆಯಲ್ಲಿ ಭಾಗಿಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಬೆದರಿಕೆ ಹಾಕುತ್ತಿದ್ದರು. ಅಲ್ಲದೆ ವಿವಿಧ ತನಿಖಾ ಸಂಸ್ಥೆ, ಪೊಲೀಸ್ ಏಜೆನ್ಸಿ ಅಧಿಕಾರಿಗಳೆಂದು ಹೇಳಿಕೊಂದು ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಕೆಲವರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಖಾತೆಯಲ್ಲಿದ್ದ ಹಣವನ್ನು ತನಿಖಾ ಸಂಸ್ಥೆ ಬ್ಯಾಂಕ್ ಖಾತೆಗೆ ಜಮೆ ಮಾಡಿ ಪುನಃ ವರ್ಗಾವಣೆ ಮಾಡುವ ಭರವಸೆ ನೀಡಿ ವಂಚಿಸುತ್ತಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲೇ ಕುಳಿತು ಅಮೆರಿಕ, ಕೆನಡಾ ಪ್ರಜೆಗಳಿಗೆ ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದ ಸೈಬರ್ ವಂಚಕರ ಜಾಲ ಪತ್ತೆ ಮಾಡಲಾಗಿದೆ. ಈ ಜಾಲ ದೊಡ್ಡ ಮಟ್ಟದಲ್ಲಿ ವಿಸ್ತರಣೆಯಾಗಿದೆ. ಸಂಪೂರ್ಣ ತನಿಖೆ ಕೈಗೊಳ್ಳುವ ಬಗ್ಗೆ ವಿಶೇಷ ತಂಡ ರಚನೆ ಮಾಡಲಾಗಿದೆ. ಸದ್ಯ 16 ಮಂದಿಯನ್ನು ಬಂಧಿಸಲಾಗಿದೆ. ಮೂಲ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. | ಸೀಮಂತ್ ಕುಮಾರ್ ಸಿಂಗ್ ನಗರ ಪೊಲೀಸ್ ಆಯುಕ್ತರು.

ಏನೆಲ್ಲಾ ವಸ್ತುಗಳು ವಶ ?

41 ಕಂಪ್ಯೂಟರ್ ಸಿಸ್ಟಮ್ಸ್​​ , 41 ಮಾನಿಟರ್, 40 ಸಿಪಿಯು, 40ಕ್ಕೂ ಹೆಚ್ಚು ವಿಜಿಎಸ್ ಕೇಬಲ್, 82 ಪವರ್ ಕೇಬಲ್, 21 ಲ್ಯಾನ್ ಕೇಬಲ್, 2 ಅಟೆಂಡನ್ಸ್ ರಜಿಸ್ಟರ್, 4 ಸ್ಕ್ರೀಪ್ಟ್ ನೋಟ್​ಬುಕ್, 25 ಮೊಬೈಲ್ ಪೋನ್, ಐಡಿ ಕಾರ್ಡ್, 1 ಕಂಪ್ಯೂಟರ್ ಡಿವೈಎಸ್, 4 ಡಿಲಿಂಕ್ ಸ್ವಿಚ್ 4 ರೂಟರ್ ಸೇರಿ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗುಜರಾತಿನ ಮಾಧೇವ್ ಸಿಂಗ್ ರಾಥೋಡ್(28), ಮಹಾರಾಷ್ಟ್ರದ ಫ್ರಾನ್ಸಿಸ್ ಅಂಥೋನಿ (29), ಕಾರ್ತಿಕ್ ರಾಜು, (25) ಅರವಿಂದ್ ಪೂಜಾರಿ (31), ರೋಹನ್ (28), ರಿಷಿತ್ ರಮೇಶ್ (23), ಇಂದರ್ ಲಾಲ್ಮನಿ (31), ಮುಂಬೈನ ಸುನಿಲ್ ನಾಯ್ಡು (30, ಗುರುಪ್ರಸನ್ನ ಆಚಾರ್ಯ (32), ಮೇಘಾಲಯದ ಮಿನೋಟ್ ಕಂಕೈ (32), ಫಣಿ ಲೇಭಾ (27), ರೆಮಿಸನ್ ಬಾಮನ್ (30) ಎಲ್ಜಿಬಾ ಮೇರಿ (23) ಒಡಿಶಾದ ರಾಕೇಶ್ ಕುಮಾರ್ ಸಿಂಗ್ (29), ಮಧ್ಯಪ್ರದೇಶದ ರಾಮಕೃಷ್ಣ ಸೋನಿ (43) ಹಾಗೂ ಪಶ್ಚಿಮ ಬಂಗಾಳದ ಪ್ರಿಯಾಂಕಾ ಗುರುಂಗ್ (24) ಎಂಬುವವರನ್ನು ಬಂಧಿಸಲಾಗಿದೆ.

ವಂಚನೆಗೆ ವ್ಯವಸ್ಥಿತ ತರಬೇತಿ: ಡಿಜಿಟಲ್ ವಂಚನೆ ಸಂಬಂಧ ಅನುಮಾನ ಬಾರದ ರೀತಿಯಲ್ಲಿ ‘ಸೈಬಿಟ್ಸ್ ಸಲ್ಯೂಷನ್ ಪ್ರೖೆ. ಲಿ.’ ಕಂಪನಿ ನಾಮಫಲಕ ಹಾಕಿಕೊಂಡು ಈ ತಂಡ ಕೃತ್ಯ ಎಸಗುತ್ತಿತ್ತು. ವ್ಯವಸ್ಥಿತ ಕಚೇರಿ ತೆರೆದಿದ್ದ ವಂಚಕರು ‘ವರ್ಕ್ ಇಂಡಿಯಾ’, ಲಿಂಕ್ಡಿನ್ ಮಾದರಿಯ ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗದ ಅವಕಾಶ ಹಾಗೂ ವೆಬ್​ಸೈಟ್​ನಲ್ಲಿ ಕೆಲಸ ಕೊಡಿಸುವ ಮಾಹಿತಿಯನ್ನು ಅಪ್​ಲೋಡ್ ಮಾಡುತ್ತಿದ್ದರು. ನಂತರ ಕಂಪನಿ ಮ್ಯಾನೇಜರ್ ಉಸ್ತುವಾರಿಗಳು ಬೆಂಗಳೂರಿನಲ್ಲಿರುವ ಯುಎಸ್​ಎ, ಕೆನಡಾ ಸೇರಿ ಇತರ ದೇಶಗಳಿಗೆ ಆನ್​ಲೈನ್ ಮಾಹಿತಿ ಒದಗಿಸುವ ಕಾಲ್​ಸೆಂಟರ್​ನಲ್ಲಿ ಕೆಲಸ ನೀಡಲಾಗುವುದು. ಊಟ, ವಸತಿ ಸೇರಿ 20-22 ಸಾವಿರ ರೂ. ಮಾಸಿಕ ವೇತನ ನೀಡುವ ಆಮಿಷವೊಡ್ಡಿ ಕರೆಯಿಸಿಕೊಳ್ಳುತ್ತಿದ್ದರು. ಆಂಗ್ಲ ಭಾಷೆ, ತಾಂತ್ರಿಕ ಕ್ಷೇತ್ರದಲ್ಲಿ ಪರಿಣತಿ ಹೊಂದಿದ ಹೊರ ರಾಜ್ಯದ 20 ರಿಂದ 25 ಯುವಕ, ಯುವತಿಯರನ್ನು ಆಯ್ಕೆ ಮಾಡಿ ಅವರಿಗೆ ಆನ್​ಲೈನ್ ಮೂಲಕ ಸೈಬರ್ ಕ್ರೖೆಂ ಬಗ್ಗೆ ತರಬೇತಿ ನೀಡುತ್ತಿದ್ದರು. ನಂತರ ಅವರಲ್ಲಿ ಆಯ್ದ ಕೆಲವರನ್ನು ಬೆಂಗಳೂರಿಗೆ ಕರೆಸಿಕೊಂಡು ಅಪರಾಧಿಕ ಒಳಸಂಚಿನೊಂದಿಗೆ ಆನ್​ಲೈನ್ ಮೂಲಕ ಹೊರ ದೇಶದ ಪ್ರಜೆಗಳನ್ನು ವಂಚಿಸುವ ಕೃತ್ಯದಲ್ಲಿ ತೊಡಗಿಸುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

3 ವಾರ ಟೆಲಿಕಾಂ ತರಬೇತಿ: ಕರ್ನಾಟಕ ಹೊರತುಪಡಿಸಿ ಮೇಘಾಲಯ, ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ ಸೇರಿ 6 ರಾಜ್ಯಗಳ ಯುವಕ, ಯುವತಿಯರಿಗೆ 3 ವಾರಗಳ ಕಾಲ ಟೆಲಿಕಾಂ ತರಬೇತಿ ನೀಡುತ್ತಿದ್ದರು. ನಂತರ ಯುಎಸ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್, ಯುಎಸ್ ಪೋಸ್ಟಲ್ ಸರ್ವಿಸ್, ಯುಎಸ್. ಕಸ್ಟಮ್ಸ್​ ಆಂಡ್ ಬಾರ್ಡರ್ ಪ್ರೊಟೆಕ್ಷನ್ ಫೋರ್ಸ್​ನಿಂದ ಗ್ರಾಹಕರಿಗೆ ಕರೆ ಮಾಡುವಂತೆ ತಿಳಿಸಿ, ಕಂಪನಿಯವರು ನೀಡಿರುವ ಲೈವ್ ಸರ್ವರ್​ನಲ್ಲಿ ಫೋನ್ ಮುಖೇನ ವಿದೇಶಿ ಪ್ರಜೆಗಳನ್ನು ಮಾತನಾಡಿಸಿ ಡ್ರಗ್ಸ್ ಟ್ರ್ಯಾಪಿಂಗ್​​, ಮನಿ ಲಾಂಡರಿಂಗ್ ದಂಧೆಯಲ್ಲಿ ಸಿಲುಕಿಕೊಂಡಿದ್ದೀರಿ ಎಂದು ಬೆದರಿಸಿ, ನಕಲಿ ಅರೆಸ್ಟ್ ವಾರೆಂಟ್ ತೋರಿಸುತ್ತಿದ್ದರು. ತಮ್ಮ ಮಾತು ಕೇಳುವಂತೆ ಡಿಜಿಟಲ್ ಅರೆಸ್ಟ್ ಮಾಡಿ ವಿದೇಶಿ ಕರೆನ್ಸಿಯನ್ನು ಕಂಪನಿ ವ್ಯಾಲೆಟ್ ಮತ್ತು ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡುತ್ತಿದ್ದರು. ನಂತರ ಮೇಲಧಿಕಾರಿಗಳೊಂದಿಗೆ ಕಾಲ್ ಕನೆಕ್ಟ್ ಮಾಡುವುದಾಗಿ ಹೇಳಿ ಕಂಪನಿಯಿಂದ ನೀಡಿರುವ ಲೈವ್ ಸರ್ವರ್ ಸಾಫ್ಟ್​ವೇರ್​ನಲ್ಲಿ ವ್ಯವಹರಿಸುವಂತೆ ಹೇಳಿ ಕೋಟ್ಯಂತರ ರೂ. ವಂಚನೆ ಮಾಡುತ್ತಿರುವುದು ಬಹಿರಂಗವಾಗಿದೆ.

ಉದ್ಯೋಗಿಗಳಿಗೆ ವಸತಿ ಸೌಕರ್ಯ: ಡಿಜಿಟಲ್ ಅರೆಸ್ಟ್ ಕಾಲ್ ಸೆಂಟರ್​ನಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಉಳಿದುಕೊಳ್ಳಲು ಎಚ್​ಎಸ್​ಆರ್ ಲೇಔಟ್ ಮತ್ತು ಬಿಟಿಎಂ ಲೇಔಟ್​ನಲ್ಲಿ 2 ಮನೆಗಳನ್ನು ಬಾಡಿಗೆ ಪಡೆದುಕೊಂಡು ಪಿ.ಜಿ. ಸೆಂಟರ್ ಮಾಡಿಕೊಂಡಿದ್ದರು. ಕಾಲ್ ಸೆಂಟರ್ ಕೇಂದ್ರಕ್ಕೆ ಉದ್ಯೋಗಿಗಳಿಗೆ ಕ್ಯಾಬ್ ಸೇರಿ ಇತರ ಸೌಲಭ್ಯ ಒದಗಿಸಲಾಗುತ್ತಿತ್ತು.

ಸೈಬರ್ ವಂಚನೆ , ಆಸ್ತಿ ಜಪ್ತಿ: ರಾಯಚೂರು: ಐದು ವರ್ಷಗಳ ಹಿಂದಿನ ಸೈಬರ್ ವಂಚನೆ ಪ್ರಕರಣ ಭೇದಿಸಿರುವ ಸೈಬರ್ ಠಾಣೆ ಪೊಲೀಸರು 18.29 ಲಕ್ಷ ರೂ.ಗಳನ್ನು ತಮಿಳುನಾಡು ಮೂಲದ ಆರೋಪಿ ಹಾಗೂ ಆತನ ಸಂಬಂಧಿಕರ ಖಾತೆಗಳಿಂದ ಜಪ್ತಿ ಮಾಡಿ ಮೋಸ ಹೋಗಿದ್ದ ಲಕ್ಷ್ಮೀಕಾಂತ ಅವರಿಗೆ ಹಿಂದಿರುಗಿಸಿದ್ದಾರೆ. 2020ರಲ್ಲಿ ಲಕ್ಷ್ಮೀಕಾಂತ ಫೇಸ್​ಬುಕ್​ನಲ್ಲಿ ಟ್ರೇಡ್ ಎಂಟಿಎಫ್​ಎಸ್ ಎಂಬ ಜಾಹೀರಾತು ನೋಡಿ, ವಂಚಕ ಕೀಲಕರೈನ ಬಥುರುಸ್ಮಾನ್ ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ 58.57 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ಯಾವುದೇ ಲಾಭಾಂಶ ಹಾಗೂ ಸಂಪರ್ಕಕ್ಕೆ ಸಿಗದ ಕಾರಣ ಮೋಸ ಹೋಗಿರುವುದು ಅರಿವಿಗೆ ಬಂದಿದ್ದು, 2021ರ ಆ.25ರಂದು ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದರು.

ನೂರಾರು ಕೋಟಿ ವಂಚನೆ

ಕಳೆದ ಎರಡು ವರ್ಷಗಳಿಂದ ನಗರದಲ್ಲಿ ಡಿಜಿಟಲ್ ಅರೆಸ್ಟ್ ಕಂಪನಿ ತೆರೆದುಕೊಂಡು ಸೈಬರ್ ವಂಚನೆ ದಂಧೆ ಮಾಡುತ್ತಿದ್ದವರಿಂದ ನೂರಾರು ಕೋಟಿ ರೂ. ವಂಚನೆಯಾಗಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ವಿದೇಶಿ ಕರೆನ್ಸಿ, ಡಾಲರ್ ಮೂಲಕ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ಹಣ ಕ್ರಿಪ್ಟೋ ಕರೆನ್ಸಿಗೆ ಕನ್ವರ್ಟ್ ಮಾಡಿಕೊಳ್ಳುತ್ತಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net