ಸರಗೂರು ತಲುಪಲು ಬಸ್‌ಗಳಿಲ್ಲದೆ ಪರದಾಟ

ಸರಗೂರು ತಲುಪಲು ಬಸ್‌ಗಳಿಲ್ಲದೆ ಪರದಾಟ
Published on

ಎಚ್.ಡಿ.ಕೋಟೆ: ಪಟ್ಟಣದ ನಿಲ್ದಾಣದಿಂದ ಸರಗೂರು ಪಟ್ಟಣಕ್ಕೆ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯಾದರೂ ಬಸ್ ಇಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ವಹಿಸಿದೆ ನಿರ್ಲಕ್ಷಿಸುತ್ತಿದ್ದಾರೆ ಎಂದು ಪ್ರಯಾಣಿಕರು ಕಿಡಿಕಾರಿದ್ದಾರೆ.

ಆಸ್ಪತ್ರೆ, ಶಿಕ್ಷಣ, ವ್ಯಾಪಾರ, ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಂದ ಜನತೆ ದೂರದ ಊರುಗಳಿಂದ ಎಚ್.ಡಿ.ಕೋಟೆಗೆ ಆಗಮಿಸಿ ತಮ್ಮ ಕಾರ್ಯ ಮುಗಿಸಿ ಸಮಯಕ್ಕೆ ಸರಿಯಾಗಿ ಹಿಂದಿರುಗಲು ಸಾಧ್ಯವಾಗದೇ ಪರದಾಡುವಂತಾಗಿದೆ. ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ ಎಂದು ತುಂಬಸೋಗೆ ಶಿವಕುಮಾರ ಆರೋಪಿಸಿದರು.

ತಾಲೂಕಿನಲ್ಲಿ ಡಿಪೋ ನಿರ್ಮಾಣವಾಗಿದ್ದರೂ ಸಹ ಸರಿಯಾದ ಸಮಯಕ್ಕೆ ಬಸ್‌ಗಳ ಸಂಚಾರವಿಲ್ಲದೇ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅರ್ಧ ಘಂಟೆಯ ಪ್ರಯಾಣದೊಂದಿಗೆ ಸರಗೂರು ತಲುಪಿ, ಸರಗೂರಿನಿಂದ ನಡಾಡಿ, ಕಟ್ಟೆಹುಣಸೂರು, ಕಲ್ಲಂಬಾಳು, ಚಾಮಲಾಪುರ, ಮುಳ್ಳೂರು, ಹಾದನೂರು, ಬಡಗಲಪುರ, ಕೊಡಗಿ , ಕೂರ್ಣಿಗಾಲ, ಬಾಡಿಗೆ, ಬಂಕವಾಡಿ, ನಡಾಡಿ ಸೇರಿದಂತೆ ಅನೇಕ ಕಾಡಂಚಿನ ಗ್ರಾಮಗಳನ್ನು ತಲುಪುವ ಜನರು ಮನೆ ಸೇರುವುದು ತಡರಾತ್ರಿಯಾಗುತ್ತದೆ ಎಂದು ಮುಳ್ಳೂರು ಗ್ರಾಮದ ಚಿನ್ನಮ್ಮ ಅವಲತ್ತುಕೊಂಡರು.

ಈ ಬಗ್ಗೆ ಘಟಕ ವ್ಯವಸ್ಥಾಪಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ ಕರೆಯನ್ನು ಸ್ವೀಕರಿಸುವುದಿಲ್ಲ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಯ ಜಿಲ್ಲಾಮಟ್ಟದ ಅಧಿಕಾರಿಗಳು ಕರೆಗೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಇಲಾಖೆಯ ಅಧಿಕಾರಿಗಳು ನಡೆದುಕೊಂಡು ಹೋಗಿದ್ದರೂ ನೀವು ಊರು ಸೇರಬಹುದಿತ್ತು ಎಂದು ಉತ್ತರ ನೀಡುತ್ತಾರೆ ಎಂದು ಸಿದ್ದಮ್ಮ ನೋವು ತೋಡಿಕೊಂಡರು. ಜನರಿಗೆ ಸ್ಪಂದಿಸಬೇಕಿರುವ ಅಧಿಕಾರಿಗಳೆಲ್ಲರೂ ಈ ರೀತಿಯ ಅಸಡ್ಡೆ ಉತ್ತರ ನೀಡಿದರೆ ಜನರ ತೆರಿಗೆ ದುಡ್ಡಿನಲ್ಲಿ ಸಂಬಳ ಪಡೆಯುವ ಅಧಿಕಾರಿಗಳಿಗೆ ಬುದ್ಧಿ ಬರುವುದು ಯಾವಾಗ ಎಂದು ಬೇಸರ ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net