

ನವದೆಹಲಿ: ಭಾರತದಿಂದ 2019ರಲ್ಲಿ ಪಲಾಯನಗೈದು ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ಎಂಬ ಸಾರ್ವಭೌಮ ರಾಷ್ಟ್ರ ಸ್ಥಾಪಿಸಿರುವುದಾಗಿ ಘೋಷಿಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ, ದಕ್ಷಿಣ ಅಮೆರಿಕದ ಬೊಲಿವಿಯಾದಲ್ಲಿ ಬುಡಕಟ್ಟು ಜನಾಂಗದವರಿಗೆ ವಂಚಿಸಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಕೈಲಾಸ ಸ್ಥಾಪನೆಗಾಗಿ ಅಮೆಜಾನ್ ಅರಣ್ಯದ 3900 ಚದರ ಕಿ.ಮೀ. (ಬೆಂಗಳೂರಿನ 5.3 ಪಟ್ಟು ಪ್ರದೇಶ) ಪ್ರದೇಶ ಪಡೆದ ನಿತ್ಯಾನಂದ, ಇದಕ್ಕಾಗಿ ಪ್ರತಿ ವರ್ಷ 89 ಲಕ್ಷ ರೂ. ನೀಡಲು ಬೊಲಿವಿಯಾದ 3 ಬುಡಕಟ್ಟು ಸಮುದಾಯಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಈ ವಿಚಾರ ತನ್ನ ಗಮನಕ್ಕೆ ಬರುತ್ತಿದ್ದಂತೆ ಬೊಲಿವಿಯಾ ಸರ್ಕಾರ ಒಪ್ಪಂದ ರದ್ದುಗೊಳಿಸಿದೆ. ಅಮೆಜಾನ್ ಕಾಡಿನಲ್ಲಿ ವಿದೇಶಿಯರು ಭೂಮಿ ಖರೀದಿಸುವುದನ್ನು ಬೊಲಿವಿಯಾ ಕಾನೂನು ನಿಷೇಧಿಸುತ್ತದೆ. ಸ್ಥಳೀಯರು ಕಾಲ್ಪನಿಕ ದೇಶದ ಜತೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬೊಲಿವಿಯಾದ ಕೃಷಿ ಮತ್ತು ಭೂ ಅಭಿವೃದ್ಧಿ ಸಚಿವರು ಹೇಳಿರುವುದಾಗಿ ವರದಿಯಾಗಿದೆ.