Murder Case; ಮಹಾಲಕ್ಷ್ಮಿ ಹತ್ಯೆಗೆ ಪ್ರೇರಣೆಯಾಯ್ತಾ ಶ್ರದ್ಧಾ ವಾಕರ್​​ ಪ್ರಕರಣ?

Untitled-design-2024-09-27T135555.354
Published on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ (Bengaluru) ಬರ್ಬರವಾಗಿ ಮಹಾಲಕ್ಷ್ಮಿ ಹತ್ಯೆ ಪ್ರಕರಣ(Murder Case) ದೇಶಾದ್ಯಂತ ಸಂಚಲನ ಮೂಡಿಸಿದೆ. 40ಕ್ಕೂ ಹೆಚ್ಚು ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್​ನಲ್ಲಿ ಇರಿಸಿದ್ದ ಮಹಾಲಕ್ಷ್ಮೀ ಮೃತದೇಹವನ್ನು ಹೊರತೆಗೆಯಲಾಯಿತು. ಪ್ರಕರಣದ ತನಿಖೆ ವೇಳೆ ಸುಮಾರು 20 ದಿನಗಳ ಹಿಂದೆ ಅಂದರೆ ಸೆಪ್ಟೆಂಬರ್ 2 ರಿಂದ 3 ರ ನಡುವೆ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಘಟನೆ ಶ್ರದ್ಧಾ ವಾಕರ್ ಪ್ರಕರಣವನ್ನು ಹೋಲುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿದೆ.

ಪ್ರಕರಣದ ತನಿಖೆಯನ್ನು ಆರಂಭಿಸಿದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಆರೋಪಿಯನ್ನು 31 ವರ್ಷದ ಮುಕ್ತಿ ರಂಜನ್​ ಪ್ರತಾಪ್​ ಎಂದು ಗುರುತಿಸಲಾಯಿತು. ಆದರೆ ಆತ ಒಡಿಶಾದ ಭದ್ರಕ್ ಜಿಲ್ಲೆಯ ಧುಸುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಉಪಪೊಲೀಸ್ ಆಯುಕ್ತ (ಕೇಂದ್ರ) ಶೇಖರ್ ಎಚ್ ತೆಕ್ಕಣ್ಣವರ್ ತಿಳಿಸಿದರು. ಸ್ಥಳದಲ್ಲಿ ದೊರೆತ ಸೂಸೈಡ್ ನೋಟ್‌ನಲ್ಲಿ ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಒಡಿಶಾ ಪೊಲೀಸರು ತಿಳಿಸಿದ್ದಾರೆ.

ಡೆತ್‌ನೋಟ್‌ನಲ್ಲಿ ಏನಿದೆ?:

ಮಹಾಲಕ್ಷ್ಮಿ ಹತ್ಯೆ ಕೇಸ್​ನ ಆರೋಪಿ ಮುಕ್ತಿ ರಂಜನ್​ ಪ್ರತಾಪ್​ ಬರೆದ ಡೆತ್​ನೋಟ್​​​ ಅನ್ನು ಒಡಿಶಾ ಪೊಲೀಸರು ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮಹಾಲಕ್ಷ್ಮಿ ಮತ್ತು ನಾನು ಇಬ್ಬರೂ ಆತ್ಮೀಯವಾಗಿದ್ದೆವು. ಆದರೆ ಸಣ್ಣ ಸಣ್ಣ ವಿಚಾರಗಳಿಗೂ ಜಗಳವಾಡುತ್ತಿದ್ದಳು. ಇದು ನನಗೆ ಇಷ್ಟವಾಗುತ್ತಿರಲಿಲ್ಲ. ಆತ್ಮೀಯವಾಗಿದ್ದರೂ ಮುನಿಸಿಕೊಳ್ಳುವುದು ಏಕೆ ಎಂದು ನನಗೆ ತಿಳಿಯುತ್ತಿರಲಿಲ್ಲ. ಸೆಪ್ಟೆಂಬರ್‌ 3ರಂದು ನಾನು ಆಕೆಯನ್ನು ಭೇಟಿಯಾಗಲು ಮನೆಗೆ ಹೋಗಿದ್ದೆ. ಅಂದು ಸಹ ಜಗಳವಾಯಿತು. ಜಗಳವಾಡುವಾಗ ಆಕೆ ನನ್ನ ಮೇಲೆ ಹಲ್ಲೆ ಮಾಡಿದ್ದಳು. ನಾನು ಪ್ರತಿಯಾಗಿ ಹಲ್ಲೆ ಮಾಡಿದೆ. ಬಳಿಕ ಕೊಲೆ ಮಾಡಿ ಮೃತದೇಹವನ್ನು ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್​​​ನಲ್ಲಿ ಇಟ್ಟಿದ್ದೆ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ ಎಂದು ಹೇಳಲಾಗಿದೆ.

ಹತ್ಯೆಯ ಬಳಿಕ ಆಗಿದ್ದೇನು?:

ಹತ್ಯೆಯ ನಂತರ ಮುಕ್ತಿ ರಂಜನ್​ ಪ್ರತಾಪ್​ ತನ್ನ ಕಿರಿಯ ಸಹೋದರನಿಗೆ ಕರೆ ಮಾಡಿ ಬಾಡಿಗೆ ಮನೆಯನ್ನು ಕೂಡಲೇ ಖಾಲಿ ಮಾಡುವಂತೆ ಸೂಚಿಸಿದ್ದ ಎನ್ನಲಾಗಿದೆ. ತನ್ನ ಸಹೋದರ ಕಾರಣ ಕೇಳಿದಾಗ ಫೋನ್​ನಲ್ಲಿ ಹೇಳಲು ಸಾಧವಿಲ್ಲ ಖುದ್ದಾಗಿ ಹೇಳುವುದಾಗಿ ತಿಳಿಸಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊಲೆ ಮಾಡಿದ ನಂತರ ಮುಕ್ತಿ ರಂಜನ್​ ಪ್ರತಾಪ್​ ಮನೆಗೆ ಹಿಂದಿರುಗಿ ಅಪರಾಧವನ್ನು ಒಪ್ಪಿಕೊಂಡಿದ್ದು, ತಾನು ಇನ್ನು ಮುಂದೆ ನಗರದಲ್ಲಿ ವಾಸಿಸಲು ಸಾಧ್ಯವಿಲ್ಲ. ತನ್ನ ಹುಟ್ಟೂರಿಗೆ ಹೋಗುತ್ತೇನೆಂದು ತಿಳಿಸಿದ್ದಾಗಿ ವಿಚಾರಣೆ ವೇಳೆ ಆತನ ಸಹೋದರ ಹೇಳಿದ್ದಾನೆ ಎನ್ನಲಾಗಿದೆ.

2022ರಲ್ಲಿ ನಡೆದಿದ್ದ ಶ್ರದ್ಧಾ ವಾಕರ್​​ ಹತ್ಯೆ:

ಶ್ರದ್ಧಾ ವಾಕರ್ ಡೇಟಿಂಗ್​​​ ಆ್ಯಪ್​​ ಮೂಲಕ ಅಫ್ತಾಬ್ ಅಮೀನ್ ಪೂನಾವಾಲಾ ಅವರನ್ನು ಭೇಟಿಯಾಗಿದ್ದರು. ನಂತರ ಇಬ್ಬರೂ ದೆಹಲಿಗೆ ಬಂದು ಮೆಹ್ರಾಲಿಯ ಛತ್ತರ್‌ಪುರ ಪ್ರದೇಶದಲ್ಲಿ ಬಾಡಿಗೆ ಫ್ಲಾಟ್‌ನಲ್ಲಿ ಲೀವಿಂಗ್​ ಟು ಗೆದರ್​ ರಿಲೇಷನ್​ಶಿಪ್​ನಲ್ಲಿ ಇದ್ದರು. ಮೇ 2022ರಲ್ಲಿ ಮದುವೆ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿತ್ತು. ಜಗಳದಿಂದ ಕೋಪಗೊಂಡ ಅಫ್ತಾಬ್ ಶ್ರದ್ಧಾಳನ್ನು ಬರ್ಬರವಾಗಿ ಹತ್ಯೆ ಮಾಡಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದಾನೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಅಫ್ತಾಬ್ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ್ದರು. ಶ್ರದ್ಧಾ ವಾಕರ್​​ ಅವರ ದೇಹದ ಕತ್ತರಿಸಿದ ತುಂಡುಗಳನ್ನು ಅಫ್ತಾಬ್ ಮನೆಯ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿದ್ದ. ಪ್ರತಿದಿನ ರಾತ್ರಿ 2 ಗಂಟೆ ಸುಮಾರಿಗೆ ಶ್ರದ್ಧಾ ಅವರ ದೇಹದ ತುಂಡುಗಳನ್ನು ಸಮೀಪದ ಕಾಡಿನಲ್ಲಿ ವಿವಿಧೆಡೆ ಎಸೆದಿದ್ದಾಗಿ ವಿಚಾರಣೆಯಲ್ಲಿ ತಿಳಿದು ಬಂತು. ಕಳೆದ ವರ್ಷ ಜನವರಿಯಲ್ಲಿ ದೆಹಲಿ ಪೊಲೀಸರು ಸಲ್ಲಿಸಿದ್ದ 6629 ಪುಟಗಳ ಚಾರ್ಜ್​​ಶೀಟ್​​ನಲ್ಲಿ ಶ್ರದ್ಧಾ ಅವರ ಹತ್ಯೆ ಸಂಪೂರ್ಣ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net