

ಮುಂಬೈ: 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'(Kapil Show) ಕಾರ್ಯಕ್ರಮದಲ್ಲಿ ಸಿನಿಮಾ ನಿರ್ಮಾಪಕ ಮತ್ತು ನಿರೂಪಕ ಕಪಿಲ್ ಶರ್ಮಾ, ತಮಿಳು ನಿರ್ದೇಶಕ ಅಟ್ಲಿ ಅವರ ಬಗ್ಗೆ ಮಾತನಾಡುವ ಭರದಲ್ಲಿ ಅವರನ್ನು 'ಜನಾಂಗೀಯ' ನಿಂದನೆ ಮಾಡಿದ್ದಾರೆ ಎಂಬ ಆರೋಪ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ.
ಅಟ್ಲಿ ಅವರ ಮುಂದಿನ 'ಬೇಬಿ ಜಾನ್' ಸಿನಿಮಾದ ಬಗ್ಗೆ ಮಾತನಾಡಲು ಚಿತ್ರತಂಡದ ವರುಣ್ ಧವನ್, ವಾಮಿಕ, ಗಬ್ಬಿ ಮತ್ತು ಕೀರ್ತಿ ಸುರೇಶ್ ಶೋಗೆ ಆಗಮಿಸಿದ್ದು, ಸಿನಿಮಾದ ಬಗ್ಗೆ ನಿರೂಪಕ ಕಪಿಲ್ ಮಾತನಾಡುತ್ತಿದ್ದರು. ಅಟ್ಲಿ ಬಳಿ ಪ್ರಶ್ನೆ ಕೇಳುವ ಸಂದರ್ಭದಲ್ಲಿ 'ಜನಾಂಗೀಯ' ಪದವನ್ನು ಪರೋಕ್ಷವಾಗಿ ಹೇಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ ಎನ್ನಲಾಗಿದೆ.
ಶೋನಲ್ಲಿ ನಿರೂಪಕ ಶರ್ಮಾ ಅಟ್ಲಿ ಅವರಿಗೆ '' ನೀವು ದೊಡ್ಡ ಸ್ಟಾರ್ಗಳನ್ನು ಭೇಟಿಯಾಗಲು ಅವರ ಬಳಿ ಹೋದಾಗ ನಿಮ್ಮನ್ನು ಗುರುತಿಸಲಿಲ್ಲವೇ?'' ಎಂದಿದ್ದಾರೆ. ಇದೇ ಮಾತನ್ನು ಉಲ್ಲೇಖಿಸಿ ಅನೇಕ ಸಾಮಾಜಿಕ ಜಾಲತಾಣ ಬಳಕೆದಾರು ಅಟ್ಲಿ ಅವರ ಬಣ್ಣದ ಬಗ್ಗೆ ಗೇಲಿ ಮಾಡಿದ್ದಾರೆ ಎಂದು ಕಪಿಲ್ ಶರ್ಮಾ ವಿರುದ್ಧ ಹರಿಹಾಯ್ದಿದ್ದಾರೆ.
ಕಪಿಲ್ ಶರ್ಮಾರ ಪ್ರಶ್ನೆಗೆ ಉತ್ತರಿಸಿದ ನಿರ್ದೇಶಕ ಅಟ್ಲಿ ಕಠಿಣ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಿದ್ದಾರೆ. ಸರ್, ನಿಮ್ಮ ಪ್ರಶ್ನೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ನಾನು ಉತ್ತರಿಸಲು ಪ್ರಯತ್ನಿಸುತ್ತೇನೆ. ಎಆರ್ ಮುರುಗದಾಸ್ ಸರ್ ಅವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಅವರು, ನನ್ನ ಮೊದಲ ಚಿತ್ರವನ್ನು ನಿರ್ಮಿಸಿದ್ದಾರೆ. ಅವರು ನನ್ನ ಸ್ಕ್ರಿಪ್ಟ್ ಬಗ್ಗೆ ಕೇಳಿದರು, ಅವರಿಗೆ ನನ್ನ ಸ್ಕ್ರಿಪ್ಟ್ನ ನರೆಶನ್ ಬಗ್ಗೆ ತುಂಬಾ ಇಷ್ಟಪಟ್ಟರು ಎಂದ ಅಟ್ಲಿ, ಅವರು ನನ್ನ ಕೆಲಸ ಮಾತ್ರ ನೋಡಿದರು ಎಂದು ಪರೋಕ್ಷವಾಗಿ ಹೇಳಿದರು.
ಜಗತ್ತು ಅದನ್ನು ನೋಡಬೇಕು ಎಂದು ನಾನು ಭಾವಿಸುತ್ತೇನೆ. ನಾವು ನೋಟದಿಂದ ನಿರ್ಣಯಿಸಬಾರದು. ನಿಮ್ಮ ಹೃದಯದಿಂದ ನೀವು ನಿರ್ಣಯಿಸಬೇಕು ಎಂದು ಖಡಕ್ ಉತ್ತರ ನೀಡಿದ್ದರು,(ಏಜೆನ್ಸೀಸ್).