ಕಸದ ತೊಟ್ಟಿಯಲ್ಲಿ 5 ಲಕ್ಷ ರೂ. ಮೌಲ್ಯದ ಡೈಮಂಡ್​ ನೆಕ್ಲೇಸ್ ​ಪತ್ತೆ! ಮಾಲೀಕನಿಗೆ ಮತ್ತೆ ಸಿಕ್ಕಿತೇ?

Diamond Necklace
Published on

ಚೆನ್ನೈ: ಕಸದ ತೊಟ್ಟಿಯಲ್ಲಿ ಪತ್ತೆಯಾದ ಬರೋಬ್ಬರಿ 5 ಲಕ್ಷ ರೂಪಾಯಿ ಮೌಲ್ಯದ ಡೈಮಂಡ್​ ನೆಕ್ಲೇಸ್​ ಅನ್ನು ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಪೌರ ಕಾರ್ಮಿಕರು ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಈ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆದಿದೆ.

ಚೆನ್ನೈ ನಗರದ ನಿವಾಸಿ ದೇವರಾಜ್​ ಎಂಬುವರು ಬೆಲೆ ಬಾಳುವ ಆಭರಣವನ್ನು ಆಕಸ್ಮಿಕವಾಗಿ ಕಳೆದುಕೊಂಡಿದ್ದರು. ಮುಂಬರುವ ತನ್ನ ಮಗಳ ಮದುವೆಗಾಗಿ ದೇವರಾಜ್​ ಅವರ ತಾಯಿ ಆ ಆಭರಣವನ್ನು ಉಡುಗೊರೆಯಾಗಿ ನೀಡಿದ್ದರು. ಆಭರಣವನ್ನು ಕಳೆದುಕೊಂಡಿರುವುದು ತನ್ನ ಅರಿವಿಗೆ ಬರುತ್ತಿದ್ದಂತೆ ತಕ್ಷಣ ಸ್ಥಳೀಯ ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದ್ದರು.

ತ್ಯಾಜ್ಯ ನಿರ್ವಹಣೆಗಾಗಿ ಚೆನ್ನೈ ಕಾರ್ಪೊರೇಷನ್ ಗುತ್ತಿಗೆ ಪಡೆದಿರುವ ಉರ್ಬಸರ್ ಸುಮೀತ್ ಅವರ ಚಾಲಕ ಜೆ. ಆಂಥೋನಿಸಾಮಿ ನೇತೃತ್ವದಲ್ಲಿ ಸಮೀಪದ ಕಸದ ತೊಟ್ಟಿಗಳಲ್ಲಿ ಹುಡುಕಾಟವನ್ನು ಪ್ರಾರಂಭಿಸಲಾಯಿತು. ಈ ವೇಳೆ ಹಿರಿಯ ಅಧಿಕಾರಿಗಳು ಕೂಡ ಸ್ಥಳದಲ್ಲಿದ್ದರು. ತೀವ್ರ ಹುಡುಕಾಟದ ಬಳಿಕ ಕಸದ ತೊಟ್ಟಿಯೊಳಗೆ ಹಾರದಲ್ಲಿ ಸಿಕ್ಕಿಕೊಂಡಿದ್ದ ಡೈಮಂಡ್​ ನೆಕ್ಲೇಸ್​ ಪತ್ತೆಯಾಯಿತು.

ತನ್ನ ಮನವಿಗೆ ತಕ್ಷಣ ಸ್ಪಂದಿಸಿ ಬೆಲೆ ಬಾಳುವ ಉಡುಗೊರೆಯನ್ನು ಹುಡುಕಿ ಕೊಟ್ಟಿದ್ದಕ್ಕೆ ದೇವರಾಜ್ ಅವರು ಅಂಥೋನಿಸಾಮಿ ಹಾಗೂ ಕಸ ಸಂಗ್ರಹ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net