ಧರ್ಮ, ರಾಷ್ಟ್ರಪ್ರಜ್ಞೆ ಜಾಗೃತಿಗಾಗಿ ವೀರ ಬಾಲ ದಿನ: ಮಹೇಶ್

bjp-1-1
Published on

ಬೆಂಗಳೂರು:
ಧರ್ಮಪ್ರಜ್ಞೆ, ರಾಷ್ಟ್ರಪ್ರಜ್ಞೆ ಜಾಗೃತಿಗಾಗಿ ಬಿಜೆಪಿ ವೀರ ಬಾಲ ದಿನ ಆಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ನಡೆದ ವೀರ ಬಾಲ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದ ಮೇಲೆ ಮಹಮ್ಮದೀಯರು, ಮೊಘಲರ ಆಕ್ರಮಣದ ಸಂದರ್ಭದಲ್ಲಿ ಧರ್ಮ ಸಂರಕ್ಷಣೆಗಾಗಿ ಕತ್ತಿ ಎತ್ತಿದ ಪಂಥವೇ ಇವತ್ತಿನ ಸಿಕ್ಖರು ಎಂದು ವಿವರಿಸಿದರು.
ಹಿಂದೂ ಧರ್ಮಕ್ಕೆ ಅಪಾಯ ಬಂದಾಗ ಶಂಕರಾಚಾರ್ಯರು ಜನಿಸಿದ್ದರು. ಗುರು ಗೋಬಿಂದ ಸಿಂಹರ ಮಕ್ಕಳಾದ ಏಳು ವರ್ಷದ ಫತೇಹ್ ಸಿಂಹ ಮತ್ತು 9 ವರ್ಷದ ಜೋರಾವರ ಸಿಂಹ ಅವರು ಔರಂಗಬೇಬನ ವಿರುದ್ಧ ಹೋರಾಡಿದವರು. ಈ ಮಕ್ಕಳನ್ನು ಮೊಘಲರ ಸೇನೆ ಬಂಧಿಸುತ್ತದೆ. ಮುಸ್ಲಿಮರಾಗಬೇಕು ಎನ್ನುವ ಒತ್ತಾಯ ನಿರಾಕರಿಸಿದ್ದಕ್ಕೆ ಆ ಮಕ್ಕಳನ್ನು ಜೀವಂತವಾಗಿ ಸಮಾಧಿ ಮಾಡಿದ್ದರು ಎಂದರು.
ಶಿವಾಜಿ ಮಹಾರಾಜರು ಸೇರಿದಂತೆ ಇಂಥ ಅನೇಕ ಮಹನೀಯರು ತಮ್ಮ ಪ್ರಾಣಾರ್ಪಣೆ ಮೂಲಕ ಹಿಂದೂ ಧರ್ಮವನ್ನು ಹಾಗೂ ದೇಶವನ್ನು ಉಳಿಸಿದ್ದಾರೆ. ಪ್ರಧಾನಿ ಮೋದಿ ಅವರು ಈ ಇಬ್ಬರು ಮಕ್ಕಳು ಸ್ಫೂರ್ತಿ ನೀಡಬೇಕೆಂದು ವೀರ ಬಾಲಕರ ದಿನವನ್ನು ದೇಶಾದ್ಯಂತ ಆಚರಿಸಲು ತಿಳಿಸಿದ್ದಾರೆ ಎಂದು ವಿವರಿಸಿದರು.
ಪ್ರಯತ್ನ, ಪರಿಶ್ರಮದಿಂದ ಮಾತ್ರ ನಾವು ಮಹಾಪುರುಷ ಆಗಲು ಸಾಧ್ಯವಿದೆ. ಅದಕ್ಕಾಗಿ ರಾಷ್ಟ್ರಪ್ರಜ್ಞೆ ನಮ್ಮಲ್ಲಿ ಜಾಗೃತವಾಗಬೇಕು ಎಂದು ತಿಳಿಸಿದರು.
ದೇಶಕ್ಕೆ ಧರ್ಮಕ್ಕೆ ತೊಂದರೆ ಆದ ಸಂದರ್ಭದಲ್ಲಿ ಅನೇಕ ಜನ ಮಹಾಶಯರು ವಿಭೂತಿ ಪುರುಷರ ರೂಪದಲ್ಲಿ ಹುಟ್ಟಿ ಬರುತ್ತಾರೆ ಎಂಬ ಸಂಸ್ಕೃತ ಶ್ಲೋಕವಿದೆ. ಅದು ಹಾಗೆಯೇ ನಡೆದುಕೊಂಡು ಬಂದಿದೆ ಎಂದು ಹೇಳಿದರು.
ಏಕಾತ್ಮತಾ ಸ್ತೋತ್ರದಲ್ಲಿ ಅನೇಕ ಸಂಗತಿಗಳನ್ನು ಉಲ್ಲೇಖಿಸಲಾಗಿದೆ. ಈ ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿದ ಮಹನೀಯರನ್ನು ಸ್ಮರಿಸುವುದೇ ಈ ಏಕಾತ್ಮತಾ ಸ್ತೋತ್ರ ಎಂದು ವಿವರಿಸಿದರು.
ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು ಮತ್ತು ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net