

ಬೆಂಗಳೂರು: ಕರೊನಾ ವೈರಸ್ ಭೀತಿಯಿಂದ ಕಳೆದ ಎರಡು ತಿಂಗಳಿಂದ ಸಂಪೂರ್ಣ ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಇದು ಕ್ರೀಡಾಪಟುಗಳ ಪಾಲಿಗಂತೂ ನುಂಗಲಾರದ ತುತ್ತಾಗಿದೆ. ಈ ವೇಳೆಗೆ ಐಪಿಎಲ್‌ನಲ್ಲಿ ಮಿಂಚುತ್ತಿದ್ದ ಕ್ರಿಕೆಟಿಗರ ಪರಿಸ್ಥಿತಿ ಹೇಳತೀರದು. ಮನೆಯಲ್ಲೇ ಲಾಕ್ ಆಗಿದ್ದರೂ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಸಕ್ರಿಯರಾಗುವ ಮೂಲಕ ಕಾಲ ಕಳೆಯುತ್ತಿದ್ದಾರೆ. ಮನೆಯಲ್ಲೇ ದೈಹಿಕ ಕಸರತ್ತು, ಪುಸ್ತಕ ಓದುವುದು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇವರಲ್ಲಿ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ವಿಶೇಷವಾಗಿ ನಿಲ್ಲುತ್ತಾರೆ. ಲಾಕ್‌ಡೌನ್ ವೇಳೆ ಸಾಕಷ್ಟು ಸಕ್ರಿಯರಾಗಿರುವ ಧವನ್, ಇದೀಗ ಕೊಳಲು ಊದುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
ಪತ್ನಿ, ಮಗನೊಂದಿಗೆ ಮನೆಯಲ್ಲೇ ಕ್ರಿಕೆಟ್ ಆಡುವುದು, ಡ್ಯಾನ್ಸ್, ಫಿಟ್ನೆಸ್ ಹೀಗೆ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ಧವನ್ ಲಾಕ್‌ಡೌನ್ ಕಳೆಯುತ್ತಿದ್ದಾರೆ. ತಮ್ಮ ಮಗನೊಂದಿಗೆ ಕ್ರಿಕೆಟ್ ಆಡಿದರೆ, ಪತ್ನಿಯೊಂದಿಗೆ ಫಿಟ್ನೆಸ್ ಕೈಗೊಳ್ಳುತ್ತಿದ್ದಾರೆ. ಟೀಮ್ ಇಂಡಿಯಾ ಜತೆಗಿರುವಾಗಲು ಡ್ಯಾನ್ಸ್ ಮಾಡುವುದು, ಸಹ ಆಟಗಾರರೊಂದಿಗೆ ತುಂಟಾಟಕ್ಕೆ ಹೆಸರುವಾಸಿಯಾಗಿರುವ 34 ವರ್ಷದ ಧವನ್, ಕೊಳಲು ಊದುತ್ತಿರುವ ವಿಡಿಯೋ ವೈರಲ್ ಆಗಿದೆ. ‘ನಿಮ್ಮ ಹೃದಯದೊಳಗೆ ಸೇರಿದ ಪ್ರಜ್ಞೆಯಂತೆ, ಎಲ್ಲವೂ ಶಾಂತಿಮಯವಾಗಿರಲಿ’ ಎಂದು ಧವನ್ ಪತ್ನಿ ಅಯಿಷಾ ಧವನ್ ಪೋಸ್ಟ್ ಮಾಡಿದ್ದಾರೆ.
ಜನವರಿಯಲ್ಲಿ ಕಡೆಯ ಬಾರಿಗೆ ರಾಷ್ಟ್ರೀಯ ತಂಡ ಪ್ರತಿನಿಧಿಸಿರುವ ಧವನ್, ಗಾಯದ ಸಮಸ್ಯೆಯಿಂದಾಗಿ ನ್ಯೂಜಿಲೆಂಡ್ ಪ್ರವಾಸದಿಂದಲ್ಲೂ ಹೊರಗುಳಿದಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್ ) ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರತಿನಿಧಿಸಬೇಕಿತ್ತು. ಆದರೆ, ಐಪಿಎಲ್ ಕೋವಿಡ್-19 ರಿಂದ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆಯಾಗಿದೆ. ಇದೀಗ ಎಡಗೈ ಆಟಗಾರ ಕೊಳಲು ಊದುತ್ತಿರುವ ವಿಡಿಯೋ ಎಲ್ಲೆಡೆ ಸದ್ದುಮಾಡುತ್ತಿದೆ.