ನವಲಗುಂದ ಲಾಡ್ಜ್​ನಲ್ಲಿ ಯುವಜೋಡಿ ಸಾವಿಗೆ ಶರಣು: ಅಣ್ಣ-ತಂಗಿ ಅಂತಾ ಗೊತ್ತಿದ್ರೂ ಪ್ರೀತಿಸಿ ದುರಂತ ಅಂತ್ಯ

Navalagunda Love Case
Published on

ಧಾರವಾಡ: ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡು ಯುವಜೋಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದ ನವಲಗುಂದ ಪಟ್ಟಣದಲ್ಲಿ ನಿನ್ನೆ (ಡಿ.7) ರಾತ್ರಿ ನಡೆದಿದೆ.

ನವಲಗುಂದ ತಾಲೂಕು ಬೆಳವಟಗಿ ಗ್ರಾಮದ ಕುಮಾರ ತಳವಾರ (22) ಹಾಗೂ ಧಾರವಾಡ ತಾಲೂಕು ನೀರಲಕಟ್ಟಿ ಗ್ರಾಮದ ದೀಪಾ ಎತ್ತಿನಗುಡ್ಡ (18) ಆತ್ಮಹತ್ಯೆ ಮಾಡಿಕೊಂಡ ಜೋಡಿ. ನವಲಗುಂದ ಪಟ್ಟಣದ ಅಶೋಕ ಲಾಡ್ಜ್‌ನಲ್ಲಿ ಇಬ್ಬರು ಸಾವಿಗೆ ಶರಣಾಗಿದ್ದಾರೆ. ಇಬ್ಬರು ಕಳೆದ ಮೂರು ದಿನಗಳಿಂದ ಲಾಡ್ಜ್‌ನಲ್ಲಿದ್ದರು. ಪರಿಚಯಸ್ಥರ ಮೂಲಕ ಲಾಡ್ಜ್‌ನಲ್ಲಿ ರೂಮ್ ಪಡೆದಿದ್ದರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ನವಲಗುಂದ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಆತ್ಮಹತ್ಯೆ ಮಾಡಿಕೊಂಡವರಿಬ್ಬರೂ ಸಂಬಂಧದಲ್ಲಿ ಅಣ್ಣ-ತಂಗಿ. ಇಬ್ಬರು ಅಕ್ಕ-ತಂಗಿಯರ ಮಕ್ಕಳಾಗಿದ್ದರು. ಆಗಾಗ ಕುಮಾರ ನೀರಲಕಟ್ಟಿ ಗ್ರಾಮಕ್ಕೆ ಬರುತ್ತಿದ್ದ.

ಅಣ್ಣ-ತಂಗಿಯರಾಗಿದ್ದ ಕಾರಣಕ್ಕೆ ಇಬ್ಬರ ಬಗ್ಗೆ ಯಾರಿಗೂ ಸಂಶಯ ಇರಲಿಲ್ಲ. ಆದರೆ, ಕುಮಾರ ತಂಗಿಯನ್ನೇ ಪ್ರೀತಿಸಲಾರಂಭಿಸಿದ್ದ. ಕಳೆದ ಎರಡು ದಿನಗಳ ಹಿಂದೆ ಕಾಲೇಜಿಗೆ ಹೋಗಿದ್ದ ದೀಪಾ, ಮನೆಗೆ ವಾಪಸ್ ಬರದೆ ನಾಪತ್ತೆಯಾಗಿದ್ದಳು. ಅಣ್ಣ-ತಂಗಿ ಇಬ್ಬರೂ ಎಲ್ಲೋ ಹೋಗಿರಬಹುದೆಂದು ಕುಟುಂಬಸ್ಥರು ಸುಮ್ಮನಾಗಿದ್ದರು.

ಇಬ್ಬರು ಎರಡು ದಿನಗಳಿಂದ ನವಲಗುಂದ ಲಾಡ್ಜ್‌ನಲ್ಲೇ ಇದ್ದರು. ಸ್ನೇಹಿತರ ಸಹಾಯದಿಂದ ಅಶೋಕ ಲಾಡ್ಜ್‌ನಲ್ಲಿ ಕುಮಾರ ರೂಮ್ ಪಡೆದಿದ್ದ. ಆತ್ಮಹತ್ಯೆ ಮಾಡಿಕೊಂಡ ರೂಮ್‌ನಲ್ಲಿ ಇಬ್ಬರ ಬಟ್ಟೆಗಳಿರುವ ಬ್ಯಾಗ್‌ಗಳು ಪತ್ತೆಯಾಗಿದೆ. ತಮ್ಮ ಸಂಬಂಧದ ಬಗ್ಗೆ ಪಶ್ಚಾತಾಪ ಪಟ್ಟು ಕೃತ್ಯ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರ ತನಿಖೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net