ಗಂಗಾ ಕಲ್ಯಾಣಕ್ಕೆ ಬೆಂಬಿಡದ ಗ್ರಹಣ

22 Dwd 4
Published on

ಮಂಜುನಾಥ ಎಸ್. ಅಂಗಡಿ ಧಾರವಾಡ
ಸಣ್ಣ ಮತ್ತು ಅತಿ ಸಣ್ಣ ವರ್ಗಗಳ ರೈತರ ಕಲ್ಯಾಣಕ್ಕಾಗಿ ಜಾರಿಯಲ್ಲಿರುವ ‘ಗಂಗಾ ಕಲ್ಯಾಣ’ ಯೋಜನೆಗೆ ಗ್ರಹಣ ಹಿಡಿದಿದೆ. ಸರ್ಕಾರದ ಸಹಾಯಧನ ಪಡೆದು ಕೊಳವೆಬಾವಿ ಕೊರೆಸಲು ಅರ್ಜಿ ಸಲ್ಲಿಸಿರುವ ರೈತರಿಗೆ ಮತ್ತೆ ನಿರಾಸೆಯಾಗಿದೆ. ಯೋಜನೆ ಅನುಷ್ಠಾನಗೊಳಿಸುವ ನಿಗಮಗಳಿಗೆ ಅತ್ಯಲ್ಪ ಅನುದಾನ ಮೀಸಲಿರಿಸಲಾಗಿದೆ. ಗುರಿ ಸೀಮಿತವಾಗಿದ್ದು, ಅರ್ಜಿ ಸಲ್ಲಿಸಿದವರ ಸಂಖ್ಯೆ ವಿಪರೀತವಾಗಿರುವುದು, ಲಾನುಭವಿಗಳ ಆಯ್ಕೆ ಆಯಾ ಶಾಸಕರಿಗೂ ತಲೆನೋವಾಗಿದೆ.
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳ ವ್ಯಾಪ್ತಿಯ ಆದಿಜಾಂಬವ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ದೇವರಾಜ ಅರಸು ನಿಗಮ ಸೇರಿ ಇತರ ನಿಗಮಗಳಿಂದ ಸಹಾಯಧನದಲ್ಲಿ ರೈತರ ಜಮೀನುಗಳಲ್ಲಿ ಕೊಳವೆಬಾವಿ ಕೊರೆಸಲಾಗುತ್ತದೆ. ಹಿಂದುಳಿದ ವರ್ಗ, ಜಾತಿಗೆ ಅನುಗುಣವಾಗಿ ಆಯಾ ನಿಗಮಕ್ಕೆ ರೈತರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ.
ದೇವರಾಜ ಅರಸು ನಿಗಮದ ಅಡಿ ಲಿಂಗಾಯತ, ಮರಾಠಾ ಹಾಗೂ ಇತರ ಹಿಂದುಳಿದ ವರ್ಗದವರು ಕೊಳವೆಬಾವಿ ಕೊರೆಸಲು ಅರ್ಹರು. 2020- 21ನೇ ಸಾಲಿನ ಕೋವಿಡ್‌ನಿಂದ ಅರ್ಜಿಯನ್ನೇ ಆಹ್ವಾನಿಸಿರಲಿಲ್ಲ. 2021- 22ನೇ ಸಾಲಿನಲ್ಲಿ ಜಿಲ್ಲೆಯ ಗುರಿ ಕೇವಲ 80 ಇದ್ದವರು. ಆಗಲೂ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯ ಸಮಿತಿ ನಿಗದಿತ 80 ಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡಿತ್ತು. 2 ವರ್ಷಗಳಾದರೂ 80ರಲ್ಲಿ 45 ಕೊಳವೆಬಾವಿಗಳನ್ನು ಮಾತ್ರ ಕೊರೆಯಲಾಗಿದೆ. ಪಟ್ಟಿಯಲ್ಲಿ ಆಯ್ಕೆಯಾದ ರೈತರು ಇನ್ನೂ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ.
2023- 24ನೇ ಸಾಲಿಗೆ ಈಗಾಗಲೇ ಅರ್ಜಿ ಸಲ್ಲಿಕೆಯಾಗಿದ್ದು, ಜಿಲ್ಲೆಯ ಲಿಂಗಾಯತ ಸಮಾಜದವರಿಗೆ ಕೇವಲ 14 ಕೊಳವೆಬಾವಿಗಳ ಗುರಿ ನಿಗದಿಪಡಿಸಲಾಗಿದೆ. ಈ ಕೆಟಗರಿಯಲ್ಲಿ 674 ರೈತರು ಅರ್ಜಿ ಸಲ್ಲಿಸಿದ್ದಾರೆ. ಅದೇರೀತಿ ಮರಾಠಾ ಸಮಾಜಕ್ಕೆ 58 ಗುರಿ ನಿಗದಿಯಾಗಿದ್ದು, 334 ಅರ್ಜಿ ಸಲ್ಲಿಕೆಯಾಗಿವೆ. ಇತರ ಹಿಂದುಳಿದ ವರ್ಗಗಳಿಗೆ 60 ಗುರಿ ಇದ್ದು, 315 ರೈತರು ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯ ಕಲಘಟಗಿ, ಕುಂದಗೋಳ, ನವಲಗುಂದ, ಧಾರವಾಡ, ಹು-ಧಾ ಪಶ್ಚಿಮ ಕ್ಷೇತ್ರಗಳ ವ್ಯಾಪ್ತಿಯ ರೈತರು ಆಯಾ ಶಾಸಕರಿಗೆ ದುಂಬಾಲು ಬಿದ್ದಿದ್ದಾರೆ. ಹು-ಧಾ ಪೂರ್ವ ಮತ್ತು ಹು-ಧಾ ಸೆಂಟ್ರಲ್ ಕ್ಷೇತ್ರಗಳು ಯೋಜನೆಯ ವ್ಯಾಪ್ತಿಯಲ್ಲಿಲ್ಲ.

ನಿಗಮದಡಿ ಆಯಾ ವರ್ಗವಾರು ಸಲ್ಲಿಕೆಯಾದ ಅರ್ಜಿಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಆಯಾ ಶಾಸಕರ ಗಮನಕ್ಕೆ ತಂದು ಅನುಮೋದನೆ ಪಡೆದು ಆಯ್ಕೆಯಾದ ಲಾನುಭವಿಗಳ ಪಟ್ಟಿ ಪ್ರಕಟಿಸಲಾಗುವುದು.- ಎಸ್.ಎನ್. ಬನಸಿ, ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net