ಉಪವಾಸ ಸತ್ಯಾಗ್ರಹದ ಬದಲು ಸಂಸದರ ಮನೆ ಮುಂದೆ ಧರಣಿ|Dharna in front of MP's house instead of hunger strike

kb (3)
Published on

ಬೆಂಗಳೂರು: ದೆಹಲಿ ರೈತರ ಹೋರಾಟ ಬೆಂಬಲಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿದ್ದ ಸರದಿ ಉಪವಾಸ ಸತ್ಯಾಗ್ರಹದ ಸ್ವರೂಪ ಬದಲಿಸಿ ರಾಜ್ಯದ ಸಂಸದರ ಮನೆ ಮುಂದೆ ಪ್ರತಿಭಟನೆ(Dharna in front of MP's house instead of hunger strike)  ನಡೆಸಲು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ತೀರ್ಮಾನಿಸಿದೆ.

ಮೂರು ದಿನ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ ರೈತ ಹೋರಾಟಗಾರರು ಸೋಮವಾರ ಬೆಂಗಳೂರಿನಲ್ಲಿ ಸಂಸದ ತೇಜಸ್ವಿ ಸೂರ್ಯ, ಚಾಮರಾಜನಗರ ಹಾಗೂ ದಾವಣಗೆರೆ ಸಂಸದರ ಮನೆ ಮುಂದೆ ಪ್ರತಿಭಟನೆ ನಡೆಸಿದರು.

ಮಂಗಳವಾರದಿಂದ ರಾಜ್ಯಾದ್ಯಂತ ಇರುವ ಸಂಸದರ ಮನೆ ಮುಂದೆ ಪ್ರತಿಭಟನೆ ನಡೆಸಲು ನಿಧರಿಸಿರುವುದಾಗಿ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.

ಸಂಸತ್ ಅಧಿವೇಶದಲ್ಲಿ ಚರ್ಚಿಸಿ

ರೈತರ ಬಗ್ಗೆ ನಿರ್ಲಕ್ಷ ಬೇಡ. ದೆಹಲಿ ರೈತ ಹೋರಾಟದ ಮುಖಂಡ ಜಗಜಿತ್ ಸಿಂಗ್ ದಲೈವಾಲ ಉಪವಾಸ ಸತ್ಯಾಗ್ರಹ 14ನೇ ದಿನಕ್ಕೆ ಮುಂದುವರೆದಿದೆ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಪಂಜಾಬ್ ಹರಿಯಾಣ ಭಾಗದಲ್ಲಿ ನಿರಂತರವಾಗಿ ಚಳುವಳಿ ನಡೆಸುತ್ತಿರುವ ರೈತರು ಎರಡು ದಿನಗಳ ಹಿಂದೆ ದೆಹಲಿಗೆ ಕಾಲ್ನಡಿಗೆ ಮೂಲಕ ಹೋಗಲು ಬರುತ್ತಿದ್ದಾಗ ಪೊಲೀಸರು ತಡೆದು ಆಶ್ರುವಾಯು ಸಿಡಿಸಿ ಜಲ ಪಿರಂಗಿ ಪ್ರಯೋಗ ಮಾಡಿದ್ದಾರೆ. ಹಲವು ರೈತರು ಆಸ್ಪತ್ರೆ ಸೇರಿದ್ದಾರೆ. ಇಂತಹ ಪೊಲೀಸ್ ದಬ್ಬಾಳಿಕೆಯನ್ನು ನಾವು ಖಂಡಿಸುತ್ತೇವೆ. ಇಂಥ ದಬ್ಬಾಳಿಕೆ ನಡೆದರು ಸಹ ಸಂಸತ್ ಅಧಿವೇಶನದಲ್ಲಿ ಚರ್ಚಿಸದೆ ಇರುವುದು ನಮಗೆ ನೋವಿನ ಸಂಗತಿ. ಕೇಂದ್ರ ಸರ್ಕಾರ ಗಂಭೀರವಾಗಿ ಪ್ರತಿಕ್ರಿಯೆ ನೀಡದೆ ಮಾತುಕತೆಗೂ ಆಹ್ವಾನಿಸದೆ ನಿರ್ಲಕ್ಷತನ ತೋರುತ್ತಿದೆ ಎಂದು ಆರೋಪಿಸಿ ರೈತ ಮುಖಂಡರು ಸಂಸದ ತೇಜಸ್ವಿ ಸೂರ್ಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾವು ಕೂಡಲೇ ಸರ್ಕಾರದ ಗಮನಸೆಳೆದು ರೈತರ ಹಿತ ಕಾಪಾಡಬೇಕು. ದೇಶದ ರೈತರ ಸಮಸ್ಯೆಯನ್ನು ಬಗೆಹರಿಸಬೇಕು. ಸಂಸತ್ ಅಧಿವೇಶನದಲ್ಲಿ ವಿಷಯ ಚರ್ಚೆಗೆ ಎತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸಂಸದರು ದೆಹಲಿಗೆ ಪ್ರಯಾಣ ಬೆಳೆಸಿದ್ದರಿಂದ ಬಳಿಕ ರೈತ ನಾಯಕರ ಜತೆ ಮಾತುಕತೆ ನಡೆಸುವ ಭರವಸೆಯನ್ನು ಕಚೇರಿ ಸಿಬ್ಬಂದಿ ನೀಡಿದರು. ಹೀಗಾಗಿ ಪ್ರತಿಭಟನೆ ಹಿಂಪಡೆಯಲಾಯಿತು ಎಂದು ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.

ರೈತ ನಾಯಕರಾದ ಹತ್ತಳ್ಳಿ ದೇವರಾಜ್, ಪರಶುರಾಮ್ ಎತ್ತಿನಗುಡ್ಡ, ಪಿ. ಸೂಮಶೇಖರ್, ಕಿರಗಸೂರ ಶಂಕರ್, ಬರಡನಪುರ ನಾಗರಾಜ್, ನೀಲಕಂಠಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ರೈತರ ಬೇಡಿಕೆಗಳೇನು..?

-ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ತರಬೇಕು.

-ಡಾ ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು.

- ರೈತರ ಸಾಲ ಸಂಪೂರ್ಣ ಮನ್ನಾ ಆಗಬೇಕು.

-60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ಬರಬೇಕು.

-ರೈತರಿಗಾಗಿ ಹೋರಾಟ ಮಾಡಿದ ರೈತರ ಮೇಲೆ ಇರುವ ಎಲ್ಲಾ ಕೇಸುಗಳನ್ನು ಕೇಂದ್ರ ರಾಜ್ಯ ಸರ್ಕಾರಗಳು ವಾಪಸ್ ಪಡೆಯಬೇಕು.

-ಫಸಲ್ ಭೀಮಾ ಬೆಳೆ ವಿಮೆ ಯೋಜನೆ ತಿದ್ದುಪಡಿಯಾಗಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net