ಆಪತ್ಕಾಲದಲ್ಲಿ ಶ್ರೀ ಶಂಕರರಿಂದ ಧರ್ಮೋತ್ಥಾನ ಕಾರ್ಯ

Shri Shankara
ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಅಂಜು ಭಟ್, ವಿನಯ್ ಆರಾಧ್ಯ, ಬಾಲಕೃಷ್ಣಜೋಯ್ಸ, ಗೌರಿ ಭಟ್, ಸುಮಾ ಜೋಯ್ಸ್, ವೀಣಾ, ರಾಘವೇಂದ್ರ ಇತರರಿದ್ದರು.
Published on

ಶಿಕಾರಿಪುರ: ಆದಿ ಶಂಕರರು ಧರ್ಮೋತ್ಥಾನಕ್ಕಾಗಿ ಕಾಲ್ನಡಿಗೆಯಲ್ಲಿ ದೇಶ ಪರ್ಯಟನೆ ಮಾಡಿ ನಾಲ್ಕೂ ದಿಕ್ಕಿನಲ್ಲಿ ಆಮ್ನಾಯ ಪೀಠ ಸ್ಥಾಪಿಸಿ ಧರ್ಮರಕ್ಷಣೆ ಮಾಡಿದ ಯುಗಪುರುಷ ಎಂದು ತಾಲೂಕು ಬ್ರಾಹ್ಮಣ ಸಮಾಜದ ಕಾರ್ಯದರ್ಶಿ ಅಂಜು ಭಟ್ ಹೇಳಿದರು.

ವಿಪ್ರ ಸಮಾಜ ಮತ್ತು ತಾಲೂಕು ಆಡಳಿತದಿಂದ ಭಾನುವಾರ ಆಯೋಜಿಸಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾವು ಜೀವಿಸಿದ ಅಲ್ಪ ಕಾಲದಲ್ಲಿ ಅಪರಿಮಿತ ಸಾಧನೆ ಮಾಡಿದವರು ಶ್ರೀ ಶಂಕರರು ಎಂದರು.
ದೈವ ಸ್ವರೂಪಿಯಾಗಿದ್ದ ಶಂಕರಾಚಾರ್ಯರು ಸಂಕಷ್ಟದಲ್ಲಿದ್ದ ಧರ್ಮವನ್ನು ರಕ್ಷಣೆ ಮಾಡಬೇಕೆಂದು ಸಂಕಲ್ಪ ಮಾಡಿ ಅದರಂತೆ ಧರ್ಮೋದ್ಧಾರ ಕಾರ್ಯವನ್ನು ಮಾಡಿದವರು. ಶಂಕರರು ಅದ್ವೈತ ಸಿದ್ಧಾಂತದಿಂದ ಜಗವವನ್ನು ಬೆಳಗಿದ್ದಾರೆ. ಸರ್ವಜ್ಞಾನ ಸಂಪನ್ನರಾಗಿದ್ದ ಗುರುಗಳು ಹತ್ತು ಹಲವು ಗ್ರಂಥಗಳು, ವಿಮರ್ಶೆಗಳು, ಸ್ತುತಿಗಳು, ಅಷ್ಟೋತ್ತರಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ಶ್ರೀಚಕ್ರ ಆರಾಧಕರಾಗಿದ್ದ ಶಂಕರರು ಜಗನ್ಮಾತೆಯಾದ ಸರಸ್ವತಿಯನ್ನು ಕಾಶ್ಮೀರದಿಂದ ಶೃಂಗೇರಿಗೆ ತಂದು ನೆಲೆಗೊಳಿಸಿದರು. ಶೃಂಗೇರಿಯಲ್ಲಿ ಪರಸ್ಪರ ವೈರಿಗಳಾದ ಹಾವು-ಕಪ್ಪೆಗಳ ಸಖ್ಯ ನೋಡಿ ಸಂತಸಗೊಂಡು ಪರಮ ಪವಿತ್ರವಾದ ಪುಣ್ಯದ ನೆಲ ಶೃಂಗೇರಿಯಲ್ಲಿ ಶಕ್ತಿಪೀಠ ಸ್ಥಾಪಿಸಿದರು ಎಂದು ಹೇಳಿದರು.
ವಿಪ್ರ ಸಮಾಜ ಯಾವತ್ತೂ ಸಮಾಜಮುಖಿ. ಧರ್ಮ, ಜ್ಞಾನ ಪ್ರಸಾರಕ್ಕಾಗಿ ಶ್ರಮಿಸುವಂತಹ ಸಮುದಾಯ. ನಮ್ಮ ಸಮಾಜ ಇತರರಂತೆ ಇನ್ನಷ್ಟು ಸಂಘಟಿತವಾಗಬೇಕು. ಆರ್ಥಿಕವಾಗಿ ಸಮಾಜ ಸದೃಢವಾಗುವ ಅಗತ್ಯವಿದೆ. ವಿಪ್ರರು ನಮ್ಮ ಸಂಸ್ಕಾರದಿಂದ ದೂರ ಹೋಗುತ್ತಿದ್ದಾರೆ. ನಾವು ಜೀವನ ನೀರ್ವಹಣೆಗೆ ಯಾವುದೇ ಕಾಯಕ ಮಾಡಿದರೂ ಜಪ, ತಪ, ಪೂಜೆ ಪುನಸ್ಕಾರಗಳಿಂದ ವಿಮುಖರಾಗಬಾರದು ಎಂದರು.
ಉಪತಹಸಿಲ್ದಾರ್ ವಿನಯ್ ಆರಾಧ್ಯ ಮಾತನಾಡಿ, ಶ್ರೀ ಆದಿ ಶಂಕರಾಚಾರ್ಯರು ಶ್ರೇಷ್ಠ ಯತಿಗಳಲ್ಲಿ ಒಬ್ಬರು. ಹಿಂದು ಧರ್ಮೋತ್ಥಾನ ಕಾರ್ಯದಲ್ಲಿ ಇವರ ಕೊಡುಗೆ ಅಪಾರ. ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿ ಧರ್ಮದ ರಕ್ಷಣೆಗಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಶಂಕರರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜದ ಪ್ರಮುಖರಾದ ರಾಘವೇಂದ್ರ ತಡಗಣಿ, ಬಾಲಕೃಷ್ಣ ಜೋಯ್ಸ, ಗೌರಿ ಭಟ್, ಸುಮಾ ಜೋಯ್ಸ, ವೀಣಾ, ಲಲಿತಾ, ಜಯಲಕ್ಷ್ಮೀ, ಶ್ರೀದೇವಿ, ಸುಷ್ಮಾ ದೀಕ್ಷಿತ್, ರಾಜೇಶ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net