

ಬೆಂಗಳೂರು:ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವಂತಹ ಬಿಜೆಪಿ-ಜೆಡಿಎಸ್ ಪಕ್ಷಗಳ ರಾಜಕೀಯ ಒಳ ಒಪ್ಪಂದವನ್ನು ಕಾಂಗ್ರೆಸ್ ಸರ್ಕಾರ ನಿಷ್ಪಕ್ಷಪಾತ ಎಸ್ಐಟಿ ತನಿಖೆ ಮೂಲಕ ವಿಫಲಗೊಳಿಸಿದೆ. ಇದೆಲ್ಲವೂ ಪ್ರತಿಪಕ್ಷಗಳ ರಾಜಕೀಯ ನಾಟಕ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಮ್ಮ ರಕ್ತದಾಹ ನಿಲ್ಲಿಸಿ, ಕ್ಷೇತ್ರದ ಪಾವಿತ್ರ್ಯತೆ ಉಳಿಸಿ ಎಂದು ಮಾಜಿ ಸಂಸದ, ಬಮುಲ್ ಅಧ್ಯಕ್ಷ DK ಸುರೇಶ್ ಹರಿಹಾಯ್ದರು.
ನಗರದಲ್ಲಿ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದರು.ಧರ್ಮಸ್ಥಳಕ್ಕೆ ಬಿಜೆಪಿಯವರು ಭೇಟಿ ಜೊತೆಗೆ ಸೌಜನ್ಯ ಅವರ ಮನೆಗೂ ಭೇಟಿ ನೀಡಿದ ಬಗ್ಗೆ ಮಾತನಾಡಿ, “ಯಾತ್ರೆಯಲ್ಲಿ ಅಲ್ಲಿನ ಜನಪ್ರತಿನಿಧಿಗಳೂ ಸಹ ಶ್ರೀಕ್ಷೇತ್ರವನ್ನು ಒಪ್ಪಿ ಮಾತನಾಡಿಲ್ಲ. ಕೇವಲ ಸ್ವಾಮಿ ಮಂಜುನಾಥನ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಆಗ ಸುಖಾಸುಮ್ಮನೆ ಆರೋಪಗಳನ್ನು ಮಾಡಿ, ಈಗ ಕೊಳಕು ರಾಜಕಾರಣದಿಂದ ಆಚೆ ಬರಲು ಧರ್ಮಸ್ಥಳದ ಯಾತ್ರೆ ಮಾಡಲಾಗಿದೆ. ಇದು ಕ್ಷೇತ್ರದ ಮೇಲೆ ಇರುವ ಗೌರವದಿಂದ ಮಾಡಿರುವ ಯಾತ್ರೆಯಲ್ಲ” ಎಂದರು.
“ಬಿಜೆಪಿ- ಜೆಡಿಎಸ್ ಅವರು ಏತಕ್ಕೆ ಯಾತ್ರೆ ಮಾಡಿದ್ದಾರೆ. ಯಾರಿಗೆ ಸಾಂತ್ವನ ಹೇಳಲು ಯಾತ್ರೆಗೆ ಹೋಗಿದ್ದಾರೆ ಎಂದು ಪ್ರಶ್ನೆಸಿದ ಸುರೇಶ್ ಅವರು, ಬಿಜೆಪಿಯವರ ರಾಜಕೀಯ ಬೇಳೆ ಅಲ್ಲಿ ಬೇಯುವುದಿಲ್ಲ. ಏಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯ ಜನ ಬಿಜೆಪಿಗರ ರಾಜಕೀಯ ಒಳ ಒಪ್ಪಂದಗಳನ್ನು ಅರಿತಿದ್ದಾರೆ” ಎಂದರು.
“ಈ ಹಿಂದೆಯೂ ಸೌಜನ್ಯ ಅವರ ಮನೆಗೆ ತೆರಳಿ ಸಾಂತ್ವನವೆಂಬ ನಾಟಕವಾಡಿ ಯಾವ ರೀತಿಯ ಹೇಳಿಕೆಗಳನ್ನು ಕೊಟ್ಟಿದ್ದಾರೆ ಎನ್ನುವುದು ದಾಖಲೆಗಳಲ್ಲಿದೆ. ಈಗಲೂ ಸಹ ಇದೇ ರೀತಿಯ ವ್ಯವಸ್ಥೆ ರೂಪಿಸಿ ಜನರನ್ನು ಮರುಳು ಮಾಡುತ್ತಿದ್ದಾರೆ” ಎಂದು ತಿಳಿಸಿದರು.
“ಧರ್ಮಸ್ಥಳ ಕ್ಷೇತ್ರ ರಾಜಕೀಯ ವಸ್ತುವಲ್ಲ. ಶ್ರೀ ಕ್ಷೇತ್ರದ ರಕ್ಷಣೆಯ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿರುವವರಿಗೆ ನಾಚಿಕೆಯಾಗಬೇಕು. ಸೌಜನ್ಯ ಪ್ರಕರಣ ಸೇರಿದಂತೆ ಅನೇಕ ಆರೋಪಗಳು ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಮುಂಚಿತವಾಗಿಯೂ ನಡೆದಿತ್ತು. ಈ ಆರೋಪಗಳು ಬಂದಂತಹ ಸಂದರ್ಭದಲ್ಲಿ ಬಿಜೆಪಿ- ಜೆಡಿಎಸ್ ನಾಯಕರು ಯಾವುದೇ ರೀತಿಯ ಹೇಳಿಕೆ ನೀಡಿದ ಉದಾಹರಣೆಗಳು ಎಲ್ಲಿಯೂ ಇಲ್ಲ” ಎಂದರು.
ಶಿವಕುಮಾರ್ ಅವರು ಬಿಜೆಪಿಗೆ ಹೋಗಬಹುದು ಎನ್ನುವ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಹೇಳಿಕೆ ಪ್ರತಿಕ್ರಿಯಿಸಿದ ಸುರೇಶ್, “ರಾಜೇಂದ್ರ ಅವರು ಹಾಗೂ ರಾಜಣ್ಣ ಅವರು ಇಬ್ಬರೂ ಹಿರಿಯ ನಾಯಕರು. ಅವರಿಗೆ ಏನೇನು ಮಾಹಿತಿ ಇದೆಯೋ ನನಗೆ ಗೊತ್ತಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿಯವರು, ಎಐಸಿಸಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಯವರು ಉತ್ತರ ನೀಡುತ್ತಾರೆ” ಎಂದರು.