ಧರ್ಮಸ್ಥಳ ಪ್ರಕರಣ: ಎನ್‌ಐಎ ಪ್ರವೇಶ ಸದ್ಯಕ್ಕೆ ಡೌಟು : BJP delegation visit Amith sha

BJP team visit Sha
Published on

ಬೆಂಗಳೂರು: ಕೊಪ್ಪಳದ ಹಿಂದು ಕಾರ್ಯಕರ್ತ ಗವಿಸಿದ್ದಪ್ಪ ಕೊಲೆ ಪ್ರಕರಣದ ತನಿಖೆ ನಡೆಸಿ ಪೊಲೀಸರು ವರದಿ ಸಲ್ಲಿಸಲಿ, ಧರ್ಮಸ್ಥಳ ಪ್ರಕರಣದ ವಿಚಾರವಾಗಿ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ವರದಿ ಸಲ್ಲಿಸುವ ತನಕ ಕಾದು ನೋಡೋಣವೆಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳುವ ಮೂಲಕ, ತನಿಖಾ ಅಖಾಡಕ್ಕೆ ಎನ್‌ಐಎ ಪ್ರವೇಶ ಸದ್ಯಕ್ಕೆ ಡೌಟು ಎಂಬ ಸುಳಿವು ನೀಡಿದ್ದಾರೆ.

ದೆಹಲಿಯಲ್ಲಿ ಸೋಮವಾರ ರಾತ್ರಿ ಭೇಟಿಯಾದ ರಾಜ್ಯ ಬಿಜೆಪಿ ನಿಯೋಗವು ರಾಜ್ಯ ಸರ್ಕಾರದ ಟಾರ್ಗೆಟ್ ಹಿಂದುತ್ವ, ಇತ್ತೀಚಿನ ವಿದ್ಯಮಾನಗಳ ಬಗ್ಗೆ ವಿವರಿಸಿದೆ. ಧರ್ಮಸ್ಥಳ ಪ್ರಕರಣದಲ್ಲಿ ಎನ್‌ಐಎ ತನಿಖೆ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದೆ ಎಂದು ತಿಳಿದಿದೆ.

ಮನವಿಗೆ ಅಮಿತ್ ಷಾ ಪ್ರತಿಕ್ರಿಯಿಸಿ, ಹಿಂದು ವಿರೋಧಿ ಮೂಲಭೂತವಾದಿಗಳು ಇನ್ನಿತರರ ಕೈವಾಡ, ವಿದೇಶದಿಂದ ಂಡಿಂಗ್ ಎಂಬ ವಿಷಯಗಳೆಲ್ಲ ಸದ್ಯಕ್ಕಂತೂ ಹೇಳಿಕೆಗಳಾಗಿವೆ. ಎಸ್‌ಐಟಿ ವರದಿ ಗಮನಿಸಿದ ನಂತರ ರಾಷ್ಟ್ರೀಯ ತನಿಖಾ ದಳಕ್ಕೆ ಕೊಡಬೇಕೋ ಬೇಡವೋ ಎಂದು ತೀರ್ಮಾನಿಸಲಾಗುವುದು ಎಂದಿದ್ದಾರೆ.

ಕಾನೂನಿನ ಚೌಕಟ್ಟು

ನಮ್ಮಂತೆ ಅವರು (ಕಾಂಗ್ರೆಸ್) ರಾಜಕಾರಣ ಮಾಡುತ್ತಾರೆ. ಎಲ್ಲದರಲ್ಲೂ ರಾಜಕಾರಣ ಮಾಡಲು ಸಾಧ್ಯವಾಗುವುದಿಲ್ಲ. ಆಡಳಿತದ ಚುಕ್ಕಾಣಿ ಹಿಡಿದವರು ಕಾನೂನು ಚೌಕಟ್ಟಿನಲ್ಲಿ ಅಧಿಕಾರ ಚಲಾವಣೆ ಮಾಡಲೇಬೇಕಾಗುತ್ತದೆ.

ಐಟಿ, ಇಡಿ, ಸಿಬಿಐ ಬಳಸಿಕೊಳ್ಳುತ್ತಾರೆ ಎಂದು ಅವರು ರಾಜಕೀಯವಾಗಿ ಆರೋಪಿಸುತ್ತಾರೆ. ಆದರೆ ಕಾನೂನು ಮೀರಿ ಏನನ್ನೂ ಮಾಡಲಾಗುವುದಿಲ್ಲ ಎಂದು ಅವರಿಗೂ ಗೊತ್ತಿದೆ. ಸರ್ಕಾರ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದ್ದಾರೆ.

ಕಾನೂನು ಚೌಕಟ್ಟು ದಾಟಿದ ನಿರ್ಣಯವು ನ್ಯಾಯಾಲಯಗಳಲ್ಲಿ ಬಿದ್ದು ಹೋಗುತ್ತದೆ. ಜನತಾ ನ್ಯಾಯಾಲಯದಲ್ಲಿ ಎದುರಿಸುವುದು ಕಷ್ಟವಾಗುತ್ತದೆ. ಕಾಂಗ್ರೆಸ್‌ನವರು ಬೇಕಾದ್ದು ಹೇಳಿಕೊಳ್ಳಲಿ, ನಾವಂತೂ ಕಾನೂನು ಮೀರಿದ ನಿರ್ಣಯ ತೆಗೆದುಕೊಳ್ಳುವುದಿಲ್ಲ ಎಂದು ಅಮಿತ್ ಷಾ ತಮ್ಮ ನಿಲುವು ಸ್ಪಷ್ಟಪಡಿಸಿದರು ಎಂದು ಮೂಲಗಳು ಮಾಹಿತಿ ನೀಡಿವೆ.

ನಿಯೋಗದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಮಂಡಲ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಹರೀಶ್ ಪೂಂಜಾ, ಎಸ್.ಆರ್.ವಿಶ್ವನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net