

ಶಿವಮೊಗ್ಗ: ನಾಡನ್ನು ಸರಿ ದಿಕ್ಕಿನಲ್ಲಿ ತರಲು ಇಂತಹ ಧರ್ಮಸಭೆಗಳ ಅವಶ್ಯಕತೆ ಇದೆ. ಸ್ವಾಭಿಮಾನ ಎತ್ತು ಹಿಡಿದು ಅವಮಾನ ಮೆಟ್ಟಿ ನಿಲ್ಲಲು ವೀರಭದ್ರೇಶ್ವರ ಜಯಂತಿ ಆಚರಣೆ ಅಗತ್ಯ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ವೀರಶೈವರು ಸಮಾನತೆಯ ಸಂದೇಶವನ್ನು ಸಾರಿ ಎಲ್ಲ ಸಮಾಜದ ನಾಯಕತ್ವವನ್ನು ಒಟ್ಟಾಗಿ ಕೊಂಡೊಯ್ಯುವಂತಹ ಸಮಾಜ ಇದು. ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಸಂಬಂಧಗಳನ್ನು ಕಡಿದುಕೊಳ್ಳುವಂತಹ ಈ ಸಂದರ್ಭದಲ್ಲಿ ಬೆಸೆಯುವ ಕೆಲಸವನ್ನು ಈ ಸಭೆ ಮಾಡುತ್ತಿದೆ. ಸಮಾಜದ ಅಸ್ತಿತ್ವ ಸಿಡಿಲವಾಗುತ್ತಿದೆ. ಸಮಾಜದಲ್ಲಿ ಒಡಕನ್ನು ತರುವ ಕೆಲಸವದು ಎಂದು ಹೇಳಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಹಾವೇರಿಯಲ್ಲಿ ನೂರಕ್ಕೂ ಹೆಚ್ಚು ವೀರಶೈವ ಕುಟುಂಬಗಳು ಅನ್ಯ ಧರ್ಮಕ್ಕೆ ಮತಾಂತರವಾಗಿದೆ. ಎಲ್ಲ ಮೂಲೆ ಮೂಲೆಯಲ್ಲೂ ಮತಾಂತರ ನಡೆಯುತ್ತಿದ್ದು ವೀರಶೈವರು ಜಾಗರೂಕರಾಗಬೇಕಿದೆ. ಸ್ವಾಮೀಜಿಗಳ ನೇತೃತ್ವದಲ್ಲಿ ನಮ್ಮ ಸಮಾಜವನ್ನು ಬಿಟ್ಟು ಹೋದವರನ್ನು ಮರಳಿ ತರುವ ಕೆಲಸ ಆಗಬೇಕಾಗಿದೆ ಎಂದರು.
ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ ಮಾತನಾಡಿ, ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಸಮಾಜದ ಅಸ್ತಿತ್ವಕ್ಕೆ ಕುಂದು ಉಂಟಾದಾಗ ಸಿಡಿದೇಳುವವನೇ ನಿಜವಾದ ವೀರಭದ್ರ. ವೀರಭದ್ರನು ಉಗ್ರ ಸ್ವರೂಪಿಯೂ ಸ್ವಾಭಿಮಾನದ ಪ್ರತೀಕವೂ ಆಗಿದ್ದಾನೆ. ಸಮಾಜದ ಆತ್ಮಾಭಿಮಾನಕ್ಕೆ ಮತ್ತು ಪರಂಪರೆಗೆ ಹಲವಾರು ಘಟನೆಗಳು ಧಕ್ಕೆ ತಂದಿದ್ದು ಸಮಾಜ ಬಾಂಧವರು ಜಾಗೃತ ಮತ್ತು ವೀರಭದ್ರನ ನಿಜಭಕ್ತರಾದಾಗ ಮಾತ್ರ ಈ ಜಯಂತಿ ಸಾರ್ಥಕವಾಗುತ್ತದೆ ಎಂದರು.