ಹಾವೇರಿ ಕಬ್ಬು ಬೆಳೆಗಾರರಿಗೂ 3300 ರೂ. ನೀಡುವಂತೆ ಧರಣಿ ಆರಂಭ

10-RNR-11
Published on

ಹಾವೇರಿ: ಸರ್ಕಾರ ಘೋಷಣೆ ಮಾಡಿದ ಟನ್​ ಕಬ್ಬಿಗೆ 3,300 ರೂ. ದರವನ್ನು ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೂ ನೀಡುವಂತೆ ಆಗ್ರಹಿಸಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ರೈತ ಮುಖಂಡರು ಸೋಮವಾರದಿಂದ ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದರು.

ನೇತೃತ್ವ ವಹಿಸಿದ್ದ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ಬೆಳಗಾವಿ, ಬಾಗಲಕೋಟೆ ರೈತರಿಗೆ 11.25 ಇಳುವರಿ ಆಧಾರದ ಮೇಲೆ 3,300 ರೂ. ಕೊಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಆದರೆ, ಹಾವೇರಿ ಜಿಲ್ಲೆಯಲ್ಲೂ ಸರಾಸರಿ ಅಷ್ಟೇ ರಿಕವರಿ ಬರುತ್ತದೆ. ಕಾರ್ಖಾನೆಯವರು ಇಳುವರಿ ಕಡಿಮೆ ತೋರಿಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸರ್ಕಾರ ಕೂಡ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂದು ತಾರತಮ್ಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ದ್ರೋಹ ಮಾಡುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆಯಲ್ಲಿ 11.25 ಇಳುವರಿ ಬರುತ್ತದೆ ಎಂದು ಟನ್​ ಕಬ್ಬಿಗೆ 3,300 ರೂ. ಘೋಷಣೆ ಮಾಡಿದ್ದಾರೆ. ಆದರೆ, ಹಾವೇರಿ ಜಿಲ್ಲೆಯಲ್ಲಿರುವ ಕಾರ್ಖಾನೆಗಳು 9.42 ಇಳುವರಿ ತೋರಿಸಿ ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡುತ್ತಿವೆ. ಉತ್ತರ ಕರ್ನಾಟಕದ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಒಂದೇ ದರ ನಿಗದಿ ಮಾಡಿ ನೀಡಬೇಕೆಂದು ಆಗ್ರಹಿಸಿದರು.

ಸಂಧಾನ ವಿಫಲ...

ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಚಚಿರ್ಸಿದರು. ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಬುಧವಾರದೊಳಗೆ ಖುದ್ದು ಸಕ್ಕರೆ ಸಚಿವರೇ ಬಂದು ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಿ, ಬಗೆಹರಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಗುರುವಾರದಿಂದ ಜಿಲ್ಲೆಯಲ್ಲಿರುವ ಮೂರು ಸಕ್ಕರೆ ಕಾರ್ಖಾನೆಗಳನ್ನು ಬಂದ್​ ಮಾಡಿಸಿ, ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿ, ಧರಣಿ ಮುಂದುವರಿಸಿದರು.

ಕಬ್ಬು ಕಟಾವು ಸ್ಥಗಿತಕ್ಕೆ ಕರೆ...

ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೂ ಟನ್​ ಕಬ್ಬಿನ ದರ 3,300 ರೂ.ನಿಗದಿ ಮಾಡುವವರೆಗೂ ಜಿಲ್ಲೆಯಲ್ಲಿ ಯಾವ ರೈತರು ಕಬ್ಬು ಕಟಾವು ಮಾಡಿಸಬಾರದು. ಈಗಾಗಲೇ ಕಬ್ಬು ಕಟಾವು ಮಾಡಿಸಿರುವ ರೈತರು ಎರಡು ದಿನದೊಳಗಾಗಿ ಕಾರ್ಖಾನೆಗೆ ಸರಬರಾಜು ಮಾಡಿಕೊಳ್ಳಿ. ಉಳಿದವರು ಕಟಾವು ಮಾಡದೆ ಸ್ಥಗಿತಗೊಳಿಸುವಂತೆ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಕರೆ ನೀಡಿದರು. ಜಿಲ್ಲೆಯ ಎಲ್ಲ ತಾಲೂಕಿನ ರೈತರು ಧರಣಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net