‘ಪೌಡರ್’ ಚೆಲುವೆ!: ನರ್ಸ್ ಪಾತ್ರದಲ್ಲಿ ಮಿಂಚಲಿದ್ದಾರೆ ನಟಿ ಧನ್ಯಾ ರಾಮ್‌ಕುಮಾರ್

dhn 1
Published on

ಬೆಂಗಳೂರು: ಜನಾರ್ದನ ಚಿಕ್ಕಣ್ಣ ಆ್ಯಕ್ಷನ್-ಕಟ್ ಹೇಳಿರುವ ಸಿನಿಮಾ ‘ಪೌಡರ್’. ಇದೊಂದು ಕಾಮಿಡಿ ಜಾನರ್ ಚಿತ್ರವಾಗಿದ್ದು, ದಿಗಂತ್, ಅನಿರುದ್ಧ ಆಚಾರ್ಯ, ಧನ್ಯಾ ರಾಮ್‌ಕುಮಾರ್, ಶರ್ಮಿಳಾ ಮಾಂಡ್ರೆ , ರಂಗಾಯಣ ರಘು ತಾರಾಗಣದಲ್ಲಿದ್ದಾರೆ. ಇಂದು ಚಿತ್ರವೂ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ನಟಿ ಧನ್ಯಾ ರಾಮ್‌ಕುಮಾರ್ ತಮ್ಮ ಪಾತ್ರ ಹಾಗೂ ಸಿನಿಮಾ ಕುರಿತು ವಿಜಯವಾಣಿ ಜತೆ ಮಾತನಾಡಿದ್ದಾರೆ. ‘ಈ ಚಿತ್ರದಲ್ಲಿ ದಿಗಂತ್‌ಗೆ ಜೋಡಿಯಾಗಿ ನಿತ್ಯಾ ಎಂಬ ಪಾತ್ರ ಮಾಡುತ್ತಿದ್ದೇನೆ. ಇದು ನರ್ಸ್ ಪಾತ್ರವಾಗಿದ್ದು, ಏನಾದರೂ ಮಾಡಿ ಹೆಚ್ಚು ದುಡ್ಡು ಸಂಪಾದಿಸಿ ಶ್ರೀಮಂತರಾಗಬೇಕು ಎಂಬುದು ನಿತ್ಯಾಳ ಕನಸು. ಆದರೆ, ಯಾವುದೇ ಕೆಲಸಗಳು ಕೈಗೂಡದೆ ಇದ್ದಾಗ ಹೊಸದೊಂದು ಆಲೋಚನೆ ಬರುತ್ತದೆ. ಆಗ ನಮಗೆ ಪೌಡರ್ ಸಿಗುತ್ತದೆ. ಈ ಮೂಲಕ ಶ್ರೀಮಂತರಾಗಬೇಕು ಎಂದು ಹೊರಡುತ್ತೇವೆ. ಆಗ ನಿತ್ಯಾ ಹಾಗೂ ತಂಡ ಸಮಸ್ಯೆಗಳನ್ನು ಎದುರಿಸುತ್ತದೆ’ ಎಂದು ಮಾಹಿತಿ ನೀಡುತ್ತಾರೆ.

ವಿಭಿನ್ನ ಪಾತ್ರ: ಈ ಹಿಂದೆ ‘ನಿನ್ನ ಸನಿಹಕೆ’, ‘ಹೈಡ್ ಆ್ಯಂಡ್ ಸಿಕ್’, ‘ದ ಜಡ್ಜ್‌ಮೆಂಟ್’ನಲ್ಲಿ ರೋಮ್ಯಾಂಟಿಕ್, ಲೀಗಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಧನ್ಯಾ, ಈ ಸಿನಿಮಾದ ಪಾತ್ರ ಹಾಸ್ಯ ಪ್ರಧಾನವಾಗಿದೆ. ಈ ಬಗ್ಗೆ ‘ನನ್ನ ಹಿಂದಿನ ಚಿತ್ರಗಳಿಗೆ ಹೋಲಿಕೆ ಮಾಡಿದರೆ ಇದು ವಿಭಿನ್ನ, ವಿಶೇಷ. ಎಲ್ಲ ರೀತಿಯ ಪಾತ್ರಗಳು ನಮಗೆ ಭವಿಷ್ಯ ಕಟ್ಟಿಕೊಡುತ್ತೇವೆ ಎಂದು ಭಾವಿಸುವೆ. ಇನ್ನು, ಕನ್ನಡ ಚಿತ್ರರಂಗದಲ್ಲಿ ಹಾರರ್, ಥ್ರಿಲರ್, ಆ್ಯಕ್ಷನ್ ಚಿತ್ರಗಳು ಬರುತ್ತಿವೆ. ಆದರೆ, ಕಾಮಿಡಿ ಜಾನರ್ ಸಿನಿಮಾಗಳು ವಿರಳವಾಗಿವೆ. ಆಗ ಜಾಗವನ್ನು ‘ಪೌಡರ್’ ತುಂಬಲಿದೆ’ ಎನ್ನುತ್ತಾರೆ.

ಕಾಮಿಡಿಯೇ ಚಾಲೆಂಜ್!: ‘ಪೌಡರ್’ ಪೂರ್ಣ ಕಾಮಿಡಿ ಜಾನರ್‌ನ ಚಿತ್ರ. ಇದರಲ್ಲಿ ಧನ್ಯಾಗೆ ಪಾತ್ರ ನಿರ್ವಹಣೆಯೇ ಸವಾಲಾಗಿತ್ತು. ಯಾರೇ ಆಗಲಿ ಇನ್ನೊಬ್ಬರಿಗೆ ಕೋಪ ತರಿಸಬಹುದು, ಅಳಿಸಬಹುದು ಆದರೆ, ನಗಿಸುವುದು ತುಂಬಾ ಕಷ್ಟ. ಹೀಗಾಗಿ ಚಾಲೆಂಜ್ ನಿರ್ವಹಣೆ ಬಗ್ಗೆ, ‘ನವರಸಗಳಲ್ಲಿ ಹೆಚ್ಚು ಇಷ್ಟಪಡುವ ರಸ ಹಾಸ್ಯ. ಆದರೆ, ಎಲ್ಲರನ್ನೂ ನಗಿಸುವುದು ತುಂಬಾ ಕಷ್ಟ. ಅದರಲ್ಲೂ ಈ ಸಿನಿಮಾ ಔಟ್ ಆ್ಯಂಡ್ ಔಟ್ ಕಾಮಿಡಿಯಾಗಿದ್ದು, ನನ್ನ ಪಾತ್ರದ ಮೂಲಕ ನಗಿಸಲು ಹಲವು ರೀತಿಯಲ್ಲಿ ಸವಾಲು ಎದುರಿಸಿ, ಯಶಸ್ವಿಯಾಗಿದ್ದೇನೆ. ಇದು ಜನಸಾಮಾನ್ಯರ ಕಥೆಯಾಗಿದ್ದು, ಇಲ್ಲಿ ಪ್ರತೀ ಪಾತ್ರಗಳು ನಮ್ಮದೆ ಕಥೆಯಾಗಿರುತ್ತದೆ. ಹಾಗಾಗಿ ನಗು ಬರುವುದು ಸಹಜ’ ಎನ್ನುತ್ತಾರೆ.

ಚೌಕಿದಾರ್‌ಗೆ ಜೋಡಿ: ‘ಪೌಡರ್’ ಬಳಿಕ ಧನ್ಯಾ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಮೊದಲ ಹಂತದ ಶೂಟಿಂಗ್ ಪೂರ್ಣಗೊಳಿಸಿದ್ದು, ಒಂದು ಸಾಂಗ್ ಶೂಟಿಂಗ್ ಮಾತ್ರ ಬಾಕಿಯಾಗಿದೆ. ಅದು ಆದ ಬಳಿಕ ಎರಡನೇ ಹಂತದ ಶೂಟಿಂಗ್ ಆರಂಭವಾಗಲಿದೆ. ಮುಂದಿನ ವರ್ಷದ ಆರಂಭದಲ್ಲಿ ‘ಚೌಕಿದಾರ್’ ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. ಈ ಮಧ್ಯೆ, ಧನ್ಯಾ ಇನ್ನೊಂದು ಇಂಟರೆಸ್ಟಿಂಗ್ ಕಥೆ ಕೇಳಿದ್ದಾರಂತೆ. ಮಾತುಕತೆಯ ಹಂತದಲ್ಲಿದೆ ಎಂದು ಮಾಹಿತಿ ನೀಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net