ದಿವ್ಯ ಗುಣಗಳ ಅಂತರಿಕ್ಷ ಜಲ: ಧನ್ವಂತರಿ

Antharjala
Published on
ಬಳಸುವ ನೀರು ನಲ್ಲಿಯಿಂದಲೇ ಬರುವುದೇನೋ ನಿಜ. ಆದರೆ ಆ ನಲ್ಲಿಗೆ ನೀರು ಎಲ್ಲಿಂದ ಬರುವುದೆಂಬುದೇ ಮೂಲ ಪ್ರಶ್ನೆ. ಈ ನೀರಿನ ಮೂಲಕ್ಕೂ ನಮ್ಮ ಆರೋಗ್ಯಕ್ಕೂ ಸಂಬಂಧವಿದೆಯೇ ಎಂಬುದು ಎರಡನೇ ಪ್ರಶ್ನೆ. ಮಾನವನ ಸಹಸ್ರಾರು ವರ್ಷಗಳ ಇತಿಹಾಸ ತೆರೆದು ನೋಡಿದರೆ ನೂರಾರು ರೋಗಗಳು ವ್ಯಾಧಿಪಟ್ಟಿಯಲ್ಲಿ ಸೇರ್ಪಡೆ ಆಗುತ್ತಲೇ ಹೋಗಿರುವುದನ್ನು ಕಾಣುತ್ತೇವೆಯೇ ಹೊರತು ಸಂಪೂರ್ಣವಾಗಿ ನಶಿಸಿ ಹೋಗಿರುವ ರೋಗಗಳು ಬೆರಳೆಣಿಕೆಗೂ ಪೂರ್ತಿ ಸಿಗುವುದಿಲ್ಲ! ದಿನಂಪ್ರತಿ ನಾವು ಉಪಯೋಗಿಸುವ ಜೀವನಂ ಜೀವಿನಾಂ ಜೀವೋ ಅರ್ಥಾತ್ ನೀರು ಜೀವಿಗಳ ಜೀವ ಎಂಬ ಆಯುರ್ವೆದದ ಭಾವಪ್ರಕಾಶ ಸಂಹಿತೆಯ ಹೇಳಿಕೆ ಎಷ್ಟು ಪ್ರಧಾನವೋ ನಾವು ನೀರಿನ ಗುಣವನ್ನು ತಿಳಿಯದೇ ಬಳಸುವುದರಿಂದ ಅನೇಕ ರೋಗಗಳಿಗೆ ಅದು ಎಡೆಮಾಡಿಕೊಡುತ್ತದೆ ಎಂಬುದೂ ಅಷ್ಟೇ ಸತ್ಯ. ಆಯುರ್ವೆದದ ಗ್ರಂಥಗಳಲ್ಲಿ ನೀರಿನ ಮೂಲಗಳಿಗೆ ಅನುಗುಣವಾಗಿ ಗುಣಗಳನ್ನು ವಿವರಿಸಿದ ಪರಿ ಅನನ್ಯವಾದುದು.

ಪ್ರಕೃತಿಯಿಂದ ದೊರೆಯುವ ನೀರಿಗೆ ದಿವ್ಯ ಎಂದೂ, ಭೂಮಂಡಲದ ನೀರಿಗೆ ಭೌಮ ಎಂದೂ ಹೆಸರು. ಧಾರಾಜ, ಕರಕಾಭವ, ತೌಷಾರ, ಹೈಮ ಎಂದು ನಾಲ್ಕು ವಿಧವಾದ ದಿವ್ಯ ಜಲಗಳಿವೆ. ಸ್ವಚ್ಛವಾದ ಬಟ್ಟೆಯಲ್ಲಿ ಸೋಸಿ ಚಿನ್ನ, ಬೆಳ್ಳಿ, ತಾಮ್ರ, ಸ್ಪಟಿಕ, ಗಾಜು ಅಥವಾ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಲಾದ ಮಳೆಯ ನೀರೇ ಧಾರಾಜಲ. ಇದು ಮೂರೂ ದೋಷಗಳನ್ನು ಹೊಡೆದೋಡಿಸುವ, ಸುಲಭದಲ್ಲಿ ಜೀರ್ಣವಾಗುವ, ರೋಗ ನಿರೋಧಕ ಶಕ್ತಿಯ ವರ್ಧಕ, ತಂಪಾದ, ಬಲದಾಯಕ, ದೇಹಪೋಷಕ, ತೃಪ್ತಿದಾಯಕ, ಜೀವನಾಧಾರ, ಜೀರ್ಣಶಕ್ತಿ ಹಾಗೂ ಬುದ್ಧಿಶಕ್ತಿ ಪ್ರಚೋದಕವಾಗಿದೆ. ಮೂರ್ಛೆ ತಪ್ಪುವುದನ್ನು ತಡೆಯುವ, ತೂಕಡಿಕೆ, ಮೈಯುರಿ, ಸುಸ್ತು, ದಣಿವು, ಬಾಯಾರಿಕೆಗಳ ನಿವಾರಕವಾಗಿದೆ. ಧಾರಾ ಜಲದಲ್ಲಿ ಗಾಂಗ, ಸಾಮುದ್ರ ಎಂಬೆರಡು ವಿಧಗಳಿವೆ. ಮಳೆಗಾಲದ ಪ್ರಾರಂಭಿಕ ಎರಡು ತಿಂಗಳುಗಳ ಗಾಂಗ ಜಲವು ಕುಡಿಯಲು ಯೋಗ್ಯವಾಗಿದ್ದು ತಡ ಮಳೆಗಾಲದ ನೀರು ಸೇವನೆಗೆ ಅಷ್ಟೊಂದು ಉಚಿತವಲ್ಲ. ಸಮುದ್ರದ ನೀರನ್ನು ಜುಲೈ-ಅಗಸ್ಟ್ ತಿಂಗಳುಗಳಲ್ಲಿ ಮಾತ್ರ ಶುದ್ಧೀಕರಿಸಿ ಸೇವಿಸಬಹುದು. ಉಳಿದ ಕಾಲಗಳಲ್ಲಿ ಸಮುದ್ರದ ನೀರನ್ನು ಶುದ್ಧೀಕರಿಸಿದರೂ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುತ್ತದೆ ಆಯುರ್ವೆದ. ಅಕಾಲದಲ್ಲಿ ಬರುವ ಮಳೆಯ ನೀರಿಗೆ ಅನಾರ್ತವ ಜಲ ಎಂಬ ಹೆಸರಿದ್ದು ವಾತ, ಪಿತ್ತ, ಕಫ ಮೂರನ್ನು ಹೆಚ್ಚಿಸುವುದರಿಂದ ಸೇವನೆಗೆ ಯೋಗ್ಯವಲ್ಲ. ಆಲಿಕಲ್ಲಿನ ಕರಕಾ ಜಲವೆಂಬ ಹೆಸರಿನ ನೀರಿಗೆ ಅಮೃತದಂತಹ ಗುಣವಿದ್ದು, ಶರೀರವನ್ನು ಒಣಗಿಸುವ ಗುಣವಿದ್ದು, ಸುಲಭವಾಗಿ ಜೀರ್ಣವಾಗುವುದಿಲ್ಲ. ಭಾರ, ಶೀತಲವಾಗಿದ್ದು ಪಿತ್ತ ಕಡಿಮೆ ಮಾಡಿ ವಾತ, ಕಫಗಳನ್ನು ಹೆಚ್ಚಿಸುತ್ತದೆ. ನದಿಯ ನೀರಿನಿಂದ ಉಗಮವಾಗುವ ಇಬ್ಬನಿಯ ನೀರಿಗೆ ತುಷಾರ ಜಲವೆಂದು ಹೆಸರಿದ್ದು ಪ್ರಾಣಿಗಳಿಗೆ ನಿತ್ಯ ಸೇವನೆಗೆ ಅಪಥ್ಯವಾಗಿದೆ. ಆದರೆ ಸಸ್ಯಗಳಿಗೆ ತುಂಬಾ ಹಿತವಾಗಿದೆ. ಮಾನವರಲ್ಲಿ ಕಫದ ರೋಗಗಳಲ್ಲಿ ಉಪಯುಕ್ತವಾಗಿದ್ದು ಕಾಲಿನ ಬಿಗಿತ, ಗಂಟಲಿನ ತೊಂದರೆ, ಜೀರ್ಣದ ಸಮಸ್ಯೆ, ಮೂತ್ರ ರೋಗಗಳಲ್ಲಿ, ರಸಗ್ರಂಥಿಗಳ ವ್ಯಾಧಿಗಳಲ್ಲಿ ಉಪಯುಕ್ತವಾಗಿದೆ. ಹಿಮಪಾತದಿಂದ ದೊರೆಯುವ ನೀರಿಗೆ ಹಿಮಜಲ, ಹಿಮಾಂಬು ಎಂಬ ಹೆಸರುಗಳಿವೆ. ಶೀತಲವಾಗಿದ್ದು ಪಿತ್ತ ರೋಗಗಳನ್ನು ಕಡಿಮೆ ಮಾಡುತ್ತದೆ. ಸುಲಭವಾಗಿ ಜೀರ್ಣಗೊಳ್ಳುವುದಿಲ್ಲ. ದೇಹದಲ್ಲಿ ಒಣ ಗುಣ ಹೆಚ್ಚಿಸುತ್ತದೆ. ವಾತ, ಪಿತ್ತ, ಕಫಗಳನ್ನು ಅಷ್ಟಾಗಿ ಹೆಚ್ಚಿಸುವುದಿಲ್ಲ.

ಆಯುರ್ವೆದದಲ್ಲಿ ಭೂಪ್ರದೇಶವನ್ನು ಮೂರು ವಿಧವಾಗಿ ವಿಭಜಿಸಲಾಗಿದ್ದು ಅವುಗಳ ಪೈಕಿ ಮರುಭೂಮಿ ಹಾಗೂ ಒಣ ಭೂಪ್ರದೇಶದ ಜಾಂಗಲ ನೀರಿನ ಸಾಮಾನ್ಯ ಗುಣಗಳನ್ನು ಹೇಳಲಾಗಿದೆ. ನೆಲದ ಒಣ ಗುಣವಿದ್ದು ಸ್ವಲ್ಪ ಉಪ್ಪಿನ ಅಂಶ ಹೆಚ್ಚಾಗಿದ್ದು ಸುಲಭವಾಗಿ ಜೀರ್ಣವಾಗುತ್ತದೆ. ಪಿತ್ತವನ್ನು ಕಡಿಮೆಗೊಳಿಸುತ್ತದೆ. ಕಫದ ರೋಗಗಳಲ್ಲಿ ಉಪಯುಕ್ತ. ಪಚನಶಕ್ತಿಯನ್ನು ಹೆಚ್ಚಿಸುತ್ತದೆ. ಸಮುದ್ರಕ್ಕೆ ಸಮೀಪವಿರುವ ಭೂಭಾಗವಾದ ಮಲೆನಾಡಿನ ನೀರು ಅನೂಪ ಜಲ. ಶರೀರದಲ್ಲಿ ನೀರಿನ ಅಂಶ ಹೆಚ್ಚಿಸುವ ಗುಣವಿದ್ದು ಸಿಹಿ ರುಚಿ ಇರುತ್ತದೆ. ನಿಧಾನವಾಗಿ ಜೀರ್ಣಗೊಳ್ಳುವುದರಿಂದ ಪಚನಶಕ್ತಿಯನ್ನು ಕಡಿಮೆ ಮಾಡುತ್ತದೆ. ಆದರೆ ಹೃದಯಕ್ಕೆ ಹಿತಕರವಾಗಿದೆ. ದೇಶದ ಒಳಭಾಗದ ಭೂಮಿಯ ಜಲವೇ ಸಾಧಾರಣ ಜಲ. ಸಿಹಿಯಾಗಿದ್ದು ಪಚನಶಕ್ತಿಗೆ ಬಲ ಕೊಡುತ್ತದೆ. ಬಾಯಿರುಚಿ ಉಂಟುಮಾಡುತ್ತದೆ. ಬಾಯಾರಿಕೆ, ಮೈಉರಿಗಳನ್ನು ಕಡಿಮೆಗೊಳಿಸಿ ತ್ರಿದೋಷಗಳನ್ನು ಹತೋಟಿ ಮಾಡುವ ಸ್ವಭಾವವಿದೆ. ವಿಭಿನ್ನ ಮೂಲಗಳ ನೀರಿನ ಸ್ವಭಾವದ ವಿವರಣೆ ಆಯುರ್ವೆದದಲಿದೆ. ಶುದ್ಧವಿಲ್ಲದ ನೀರಿನಿಂದ ಅನೇಕ ರೋಗಗಳು ಬರುತ್ತದೆ ಎಂಬುದು ಇಂದಿನ ವಿಜ್ಞಾನಕ್ಕೆ ಗೊತ್ತಿದೆ. ಮೂಲಗಳನ್ನು ಹೊಂದಿಕೊಂಡು ನೀರಿನ ಗುಣಗಳಲ್ಲಿ ಸಾಕಷ್ಟು ವೈವಿಧ್ಯ ಹಾಗೂ ವೈರುಧ್ಯ ಇದೆಯೆಂಬ ವಿಶಿಷ್ಟ ಜ್ಞಾನವನ್ನು ನಮಗೆ ದಯಪಾಲಿಸಿದ ವಿಜ್ಞಾನ ಆಯುರ್ವೇದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net